ಭಾನುವಾರ ಜ್ಞಾನೇಶ್ವರ ಮುನಿ ಮಹಾರಾಜರ ವಿನಯಾಂಜಲಿ ಕಾರ್ಯಕ್ರಮ ಜರುಗಿತು. 
ಜಿಲ್ಲೆ

ಜ್ಞಾನೇಶ್ವರ ಮುನಿ ಮಹಾರಾಜರ ವಿನಯಾಂಜಲಿ

ಬೈಲಹೊಂಗಲ: ಸಮೀಪದ ದೇವಲಾಪುರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದಲ್ಲಿ ಸಲ್ಲೇಖನ ವ್ರತದ ಮೂಲಕ ಸಮಾಧಿಸ್ಥರಾದ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರ ವಿನಯಾಂಜಲಿ ಕಾರ್ಯಕ್ರಮವು ಭಾನುವಾರ ಧಾರ್ಮಿಕ ವಿಧಾನ ಮೂಲಕ ಶಾಸ್ತ್ರೋಕ್ತವಾಗಿ ನೆರವೇರಿತು.

ಗಂಧೋದಕದ ಮೂಲಕ ಅಸ್ಥಿಯನ್ನು ಶುದ್ಧಗೊಳಿಸಿ, ತಾಮ್ರದ ತಪೆಲಿಯಲ್ಲಿ ಸಂಗ್ರಹಿಸಿ ಪೂಜೆಗೈದು ಪಾದುಕೆ ಸ್ಥಾಪಿಸುವ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. ಗರಗ ಗ್ರಾಮಸ್ಥರು ಜಯತೀರ್ಥ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪಾದುಕೆ ಸ್ಥಾಪಿಸಲು ಅಸ್ಥಿ ಪಡೆದರು.

ಸಾನ್ನಿಧ್ಯವಹಿಸಿ ಪಟ್ಟಾಚಾರ್ಯ ಆಚಾರ್ಯ ಶ್ರೀ 108 ವಿಮಲೇಶ್ವರ ಮುನಿ ಮಹಾರಾಜರು ಮಾತನಾಡಿ, ಜ್ಞಾನೇಶ್ವರ ಮುನಿ ಮಹಾರಾಜರು, ಅಪಾರ ಭಕ್ತ ಸಮೂಹ ಹೊಂದಿದ್ದರು. ಅಷ್ಟಮ ನಂದೀಶ್ವರ ಕ್ಷೇತ್ರ, ಜ್ಞಾನತೀರ್ಥ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಮೂಲಕ ಶಿಕ್ಷಣ ಕಲ್ಪಿಸಿದ್ದಾರೆ. ಕುಲಭೂಷಣ ಅಲ್ಪಸಂಖ್ಯಾತರ ಕ್ರೆಡಿಟ್ ಸೊಸೈಟಿ ಮೂಲಕ ಆರ್ಥಿಕ ಸಹಾಯ ಮಾಡಿದ್ದಾರೆ. ಧಾರವಾಡ, ಬೆಳಗಾವಿ ಜಿಲ್ಲೆಯ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಿನ ಮಂದಿರಗಳನ್ನು ನಿರ್ಮಿಸಿ ಜನರ ಕಲ್ಯಾಣಕ್ಕೆ ನೆರವಾಗಿದ್ದಾರೆ. ಅವರ ಸೇವೆ ನಾಡಿಗೆ ಸದಾ ಸ್ಫೂರ್ತಿ ಎಂದರು.

ಆರಿಕಾ ಜಿನಿವಾನಿ ಮಾತಾಜಿ ಮಾತನಾಡಿ, ಮುನಿಗಳು ಲೋಕ ಕಲ್ಯಾಣ, ಧರ್ಮ ಜಾಗತಿಗಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅವರ ಸನ್ಮಾರ್ಗಗಳು ನಮಗೆಲ್ಲ ಆದರ್ಶ ಎಂದು ಹೇಳಿದರು. ಸಂತೋಷ ನಾಗನೂರ, ಉದಯ ಬೆಳಗಾವಿ, ಅಮತ ಕುಡಚಿ, ರಾಯಪ್ಪ ಲಗಮನ್ನವರ, ಪಾರ್ಶ್ವನಾಥ ಹಣ್ಣಿಕೇರಿ, ಸಂತೋಷ ಬೆಳಗಾವಿ, ಅನಂತ ಮರೆನ್ನವರ, ಅನಿಲ ಮೇಕಲಮರ್ಡಿ, ಜಿನಪ್ಪ ಮಲ್ಲಾಡಿ, ಅಶೋಕ ಗಾಡದ, ಅನಿಲ ಲಗಮನ್ನವರ, ವಿಜಯ ಬೆಳಗಾವಿ, ಭರಮುಗೌಡ ಪಾಟೀಲ, ರಾಜೇಂದ್ರ ಮುದಕನ್ನವರ, ಅಪಾರ ಭಕ್ತ ವೃಂದ, ಸಮುದಾಯದವರು ಸೇರಿದ್ದರು.