ಜಿಲ್ಲೆ

ಡಿಎನ್‌ಬಿ ಸಿಬ್ಬಂದಿ, ವೈದ್ಯ ವಿದ್ಯಾರ್ಥಿಗಳ ಪರದಾಟ ; ರಾಜ್ಯದೆಲ್ಲೆಡೆ ಸಮಸ್ಯೆಗೆ ಸಿಕ್ಕಿಲ್ಲ ಪರಿಹಾರ

Tumakuru

ತುಮಕೂರು : ರಾಜ್ಯದ ವಿವಿಧ ಜಿಲ್ಲಾ ಆಸ್ಪತ್ರೆಗಳಲ್ಲಿನ 9 ಡಿಎನ್‌ಬಿ ಶೈಕ್ಷಣಿಕ ಕೇಂದ್ರಗಳ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಕಳೆದ 6 ತಿಂಗಳಿನಿಂದ ವೇತನವಿಲ್ಲದೆ ಪರಿತಪಿಸುವಂತಾಗಿದೆ. ಕರೊನಾ ಸಂಕಷ್ಟದಲ್ಲಿ 2 ವರ್ಷಗಳಿಂದ ಪ್ರಾಣದ ಹಂಗು ತೊರೆದು ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಸೇವಾನಿರತ ವೈದ್ಯರಿಗೆ ರಾಜ್ಯ ಸರ್ಕಾರ ಸಂಬಳ ಕೊಡದೇ ಇರುವುದರಿಂದ ಜೀವನೋಪಾಯಕ್ಕೆ ತೀವ್ರ ಕಷ್ಟವಾಗಿದೆ.

ಎಂಬಿಬಿಎಸ್ ನಂತರ ಎಂಡಿ, ಎಂಎಸ್‌ಗೆ ಸಮನಾದ ಡಿಪ್ಲೊಮೆಟ್ ಆಫ್ ನ್ಯಾಷನಲ್ ಬೋರ್ಡ್ (ಡಿಎನ್‌ಬಿ) ಕೋರ್ಸ್ ಅನ್ನು 2018ರಲ್ಲಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರದ ಆಸ್ಪತ್ರೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ 9 ಆಸ್ಪತ್ರೆಗಳಲ್ಲಿ ಆರಂಭಿಸಲಾಗಿದೆ. ಎಂಬಿಬಿಎಸ್ ಪೂರ್ಣಗೊಳಿಸಿರುವ ಹಾಗೂ ಕಡ್ಡಾಯ ಗ್ರಾಮೀಣ ಸೇವಾ ವೈದ್ಯ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಸೇರಿದ್ದು ಪ್ರತಿ ವಿದ್ಯಾರ್ಥಿಗೆ ಮಾಸಿಕ 35 ಸಾವಿರ ಸ್ಟೈಫಂಡ್ ಸಿಗಲಿದೆ. ಇನ್ನು ಈ ಶೈಕ್ಷಣಿಕ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಆಸ್ಪತ್ರೆಗಳಿಗೆ ನೇಮಿಸಿಕೊಂಡಿರುವ ವೈದ್ಯರನ್ನೇ ಬೋಧಕ ಸಿಬ್ಬಂದಿಯನ್ನಾಗಿ ನೇಮಿಸಿಕೊಳ್ಳಲಾಗಿದೆ.

ಕುಟುಂಬ ನಿರ್ವಹಣೆ ಸವಾಲು: ಗುತ್ತಿಗೆ ಆಧಾರಿತ ವೈದ್ಯರು ಹಾಗೂ ಈ ಕೋರ್ಸ್ ಸೇರಿರುವ ಸೇವಾನಿರತ ವೈದ್ಯರಿಗೆ ಸಂಬಳ ಹೊರತುಪಡಿಸಿ ಬೇರೆ ಯಾವುದೇ ಭತ್ಯೆ ಸಿಗುವುದಿಲ್ಲ. ಹಾಗಾಗಿ, ಆರೋಗ್ಯ ಸೇನಾನಿಗಳಿಗೆ ಕುಟುಂಬ ನಿರ್ವಹಣೆಗೆ ಪ್ರತಿ ತಿಂಗಳು ಬೇರೆಯವರ ಬಳಿ ಕೈಚಾಚುವಂತಾಗಿದೆ. 6 ತಿಂಗಳಿಂದ ಸಂಬಳಕ್ಕಾಗಿ ಆರೋಗ್ಯ ಇಲಾಖೆಯ ಪ್ರತಿಯೊಬ್ಬರ ಬಳಿ ಡಿಎನ್‌ಬಿ ಬೋಧಕ ಸಿಬ್ಬಂದಿ ಹಾಗೂ ವೈದ್ಯ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರೂ ಯಾರೂ ಸ್ಪಂದಿಸದೆ ಇರುವುದು ಅಧಿಕಾರಿಗಳ ದಪ್ಪ ಚರ್ಮಕ್ಕೆ ನಿದರ್ಶನವೆನಿಸಿದೆ. ಇನ್ನಾದರೂ ಸರ್ಕಾರ ಆರೋಗ್ಯ ಸೇನಾನಿಗಳಿಗೆ ಸ್ಪಂದಿಸುವುದೋ ಕಾದುನೋಡಬೇಕಿದೆ.

ಏನಿದು ಡಿಎನ್‌ಬಿ ಕೋರ್ಸ್ ? : ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ತಜ್ಞ ವೈದ್ಯರ ಕೊರತೆ ನಿವಾರಿಸಲು ಸೇವಾನಿರತ ವೈದ್ಯರಿಗೇ ಉನ್ನತ ಶಿಕ್ಷಣ ನೀಡಲು ಡಿಪ್ಲೊಮೆಟ್ ಆಫ್ ನ್ಯಾಷನಲ್ ಬೋರ್ಡ್ (ಡಿಎನ್‌ಬಿ) ಕೋರ್ಸ್ ಆರಂಭಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಯೋಜನೆ ಸಹಭಾಗಿತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನ ಕೆ.ಸಿ.ಜನರಲ್, ಜಯನಗರ ಆಸ್ಪತ್ರೆ ಸೇರಿ ತುಮಕೂರು, ಧಾರವಾಡ, ವಿಜಯಪುರ, ಚಿತ್ರದುರ್ಗ, ಬಳ್ಳಾರಿ, ಬಾಗಲಕೋಟೆ, ಕೋಲಾರ ಜಿಲ್ಲೆಗಳ ಆಸ್ಪತ್ರೆಗಳಲ್ಲಿ 2018ರ ಜನವರಿಯಿಂದ ಈ ಕೋರ್ಸ್ ಆರಂಭವಾಗಿದೆ. ಕಡ್ಡಾಯ ಗ್ರಾಮೀಣ ಸೇವಾ ವೈದ್ಯರು ಎಂಎಸ್, ಎಂಡಿಗೆ ಸರಿಸಮನಾದ ಈ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದಾರೆ.

ರಾಷ್ಟ್ರೀಯ ಆರೋಗ್ಯ ಯೋಜನೆ (ಎನ್‌ಎಚ್‌ಎಂ) ಮೂಲಕ ಡಿಎಚ್‌ಒಗೆ ಬರುತ್ತಿದ್ದ ಅನುದಾನವನ್ನು ಡಿಎನ್‌ಬಿ ಶಿಕ್ಷಣ ಕೇಂದ್ರದ ಸಿಬ್ಬಂದಿ ಹಾಗೂ ವೈದ್ಯ ವಿದ್ಯಾರ್ಥಿಗಳಿಗೆ ವೇತನ, ಸ್ಟೈಂಡ್ ನೀಡಲಾಗುತ್ತಿತ್ತು. ಈಗ ಸಿಂಗಲ್ ನೋಡಲ್ ಖಾತೆ ಮೂಲಕ ನೇರವಾಗಿ ಸಂಬಳ ನೀಡಲು ಉದ್ದೇಶಿಸಿದು,್ದ ಆಗಸ್ಟ್‌ನಿಂದ ವಿಳಂಬವಾಗಿದೆ. ಈ ಬಗ್ಗೆ ನಾವು ಕೂಡ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಡಾ.ಟಿ.ಎ.ವೀರಭದ್ರಯ್ಯ ಜಿಲ್ಲಾ ಶಸ್ತ್ರಚಿಕಿತ್ಸಕ, ತುಮಕೂರು ಆಗಸ್ಟ್ 2021ರಿಂದ ಈವರೆಗೆ ಸಂಬಳ ನೀಡಿಲ್ಲ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ (ಎಸ್‌ಐಎಚ್‌ಎಫ್‌ಡಬ್ಲೂೃ) ಅಧೀನದಲ್ಲಿ ಗುತ್ತಿಗೆ ಆಧಾರದಲ್ಲಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ನಮಗೆ ತಾಂತ್ರಿಕ ನೆಪವೊಡ್ಡಿ ಹಣಕಾಸಿನ ಮಂಜೂರಾತಿ ಇದ್ದರೂ ಸಂಬಳ ನೀಡಿಲ್ಲ. ಹತ್ತಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಚೇರಿ ಸಹಾಯಕರು, ಕಂಪ್ಯೂಟರ್ ಆಪರೇಟರ್‌ಗಳಿಗೂ ಸಂಬಳ ನೀಡಿಲ್ಲ. ನೊಂದ ಸಿಬ್ಬಂದಿ ಡಿಎನ್‌ಬಿ ಶೈಕ್ಷಣಿಕ ಕೇಂದ್ರ