ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯಲ್ಲಿ ಸಂಚಾರ ಸಿಕ್ಕಿನ ಸಮಸ್ಯೆ ಹೆಚ್ಚಾಗಿದ್ದು, 104 ಕಿಮೀ ಬಿಜಿನೆಸ್ ಕಾರಿಡಾರ್, ಸುರಂಗ ಮಾರ್ಗ ಹಾಗೂ 130 ಕಿಮೀ ಮೇಲ್ಸೇತುವೆ ಯೋಜನೆಗಳ ಮೂಲಕ 3&-4 ವರ್ಷದಲ್ಲಿ ಪರಿಹಾರ ಕಂಡುಕೊಳ್ಳುವ ಗುರಿ ಹೊಂದಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜಿಬಿಎ ಪ್ರಾಧಿಕಾರದ ದೃಷ್ಟಿಕೋನ, ಕಾನೂನು ಚೌಕಟ್ಟು ಹಾಗೂ ಹೊಂದಾಣಿಕೆ ಕುರಿತು ಚರ್ಚಿಸಲು ಬೆಂಗಳೂರು ಪಾಲಿಟಿಕಲ್ ಆ್ಯಕ್ಷನ್ ಕಮಿಟಿ ಮತ್ತು ಮೌಂಟ್ ಕಾರ್ಮೆಲ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ "ಜಿಬಿಎ& ಬೆಂಗಳೂರಿನ ಉತ್ತಮ ಆಡಳಿತದೆಡೆ' ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ಶಿಕ್ಷಣ ಹಾಗೂ ಉದ್ಯೋಗವನ್ನರಸಿ ಗ್ರಾಮೀಣ ಜನರು ನಗರಗಳತ್ತ ಬರುತ್ತಾರೆ. ಬೆಂಗಳೂರಿನಲ್ಲಿ ಅಂತಹ ವಲಸಿಗರೇ ತುಂಬಿದ್ದಾರೆ. ಸರ್ಕಾರವು ಇಲ್ಲಿ ಏಕೀಕೃತ ಮತ್ತು ಪರಿಣಾಮಕಾರಿ ಆಡಳಿತ ನೀಡಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ 368 ಹೊಸ ವಾರ್ಡ್ಗಳನ್ನು ರಚಿಸಲಾಲಾಗಿದೆ. ಅದಕ್ಕೆ ಶೀಘ್ರದಲ್ಲೇ ಮತ್ತೊಂದು ವಾರ್ಡ್ ಸೇರ್ಪಡೆಯಾಗಲಿದೆ ಎಂದು ಮಾಹಿತಿ ನೀಡಿದರು.
ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಮಾತನಾಡಿ, ನಗರದಲ್ಲಿ ಸುಸಜ್ಜಿತ ರಸ್ತೆ, ಸ್ವಚ್ಛತೆ, ಫುಟ್ಪಾತ್ಗಳ ಸುಧಾರಣೆ ಪ್ರಮುಖ ಆದ್ಯತೆಯಾಗಿದೆ. ಎಲ್ಲ ಅಧಿಕಾರಿಗಳು ಈ ವಿಚಾರದಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸಲು ಪಣ ತೊಟ್ಟಿದ್ದಾರೆ ಎಂದರು.
ಶಾಸಕ ರಿಜ್ವಾನ್ ಅರ್ಷದ್ ಸಂವಾದದಲ್ಲಿ ಭಾಗವಹಿಸಿದ್ದರು. ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ.ರವಿಶಂಕರ್, ಬಿಎಸ್ಡಬ್ಲ್ಯುಎಂಎಲ್ ಸಿಇಒ ಕರೀಗೌಡ, ಡಿಸಿಪಿ ಡಾ.ಅನೂಪ್ ಶೆಟ್ಟಿ, ಪಶ್ಚಿಮ ಪಾಲಿಕೆ ಆಯುಕ್ತ ಡಾ. ಕೆವಿರಾಜೇಂದ್ರ ಮತ್ತಿತರರಿದ್ದರು.
ಪರ್ಯಾಯ ಪರಿಹಾರವಿಲ್ಲ
ಸುರಂಗ ಮಾರ್ಗಕ್ಕೆ ಸಾಕಷ್ಟು ವಿರೋಧವಿದೆ ಎಂಬುದು ಗೊತ್ತಿದೆ. ಎಲ್ಲರನ್ನೂ ತೃಪ್ತಿಪಡಿಸಲು ಆಗುವುದಿಲ್ಲ. ಟೀಕೆ ಇದ್ದೇ ಇರುತ್ತದೆ. ಸಾರ್ವಜನಿಕ ಸಾರಿಗೆ ಉತ್ತಮ ಆಯ್ಕೆಯೆಂಬುದು ನಿಜ. ಹೊಸದಾಗಿ ಸಾವಿರ ಬಸ್ಗಳನ್ನು ಸೇರಿಸಲು ನಾನು ಸಿದ್ಧ. ಆಗ ಜನರೆಲ್ಲರೂ ಬಸ್ನಲ್ಲೇ ಪ್ರಯಾಣ ಮಾಡುತ್ತಾರಾ? ಸುರಂಗ ಮಾರ್ಗದ ಹೊರತಾಗಿ ಪರ್ಯಾಯ ಪರಿಹಾರ ಏನಿದೆ ಎಂದು ಡಿಸಿಎಂ ಪ್ರಶ್ನಿಸಿದರು.
ಒಂದೇ ಒಂದು ಕೆಲಸ ಮಾಡದ ಬಿಜೆಪಿ ನಾವು ಬೆಂಗಳೂರಿನಲ್ಲಿ 104 ಕಿ.ಮೀ. ಉದ್ದದ "ಬೆಂಗಳೂರು ಬಿಜಿನೆಸ್ ಕಾರಿಡಾರ್' ಯೋಜನೆ ರೂಪಿಸಿದ್ದೇವೆ. 40 ಕಿ.ಮೀ. ಟನಲ್ ರಸ್ತೆ ನಿರ್ಮಿಸಲಾಗುವುದು. ಆದರೆ ಬಿಜೆಪಿ ನಾಲ್ಕು ವರ್ಷಗಳ ಅಧಿಕಾರದಲ್ಲಿದ್ದಾಗ ಒಂದೇ ಒಂದು ಕೆಲಸ ಮಾಡಿದ್ದರೆ ಹೇಳಿ, ನಾನು ಇಲ್ಲೇ ನನ್ನ ಹೆಸರು ಬದಲಾಯಿಸಿಕೊಂಡು ಹೋಗುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.
ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50 ಟಿಕೆಟ್ ನೀಡಲಾಗುವುದು. ಆ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾಲಿಕೆಗಳಲ್ಲಿ ಅರ್ಧದಷ್ಟು ಮಹಿಳಾ ಕಾಪೋರ್ರೇಟರ್ಗಳು ಇರುತ್ತಾರೆ. ಜನರು ಟೀಕೆ ಮಾಡಿದಾಗ ಮಾತ್ರ ನಾವು ನಮ್ಮ ತಪ್ಪು ತಿದ್ದಿಕೊಳ್ಳಲು ಸಾಧ್ಯ. ನನ್ನ ಕೆಲಸಗಳು ಇಂದು ಜನರ ಕಣ್ಣಿಗೆ ಕಾಣದೇ ಇರಬಹುದು. ಆದರೆ ಮುಂದಿನ 10 ವರ್ಷಗಳ ನಂತರ ಖಂಡಿತವಾಗಿಯೂ ಅರ್ಥವಾಗುತ್ತದೆ. ಜನ ನನ್ನನ್ನು ಸ್ಮರಿಸುತ್ತಾರೆ. > ಡಿ.ಕೆ. ಶಿವಕುಮಾರ್, ಡಿಸಿಎಂ ಬೆಂಗಳೂರು ನಿಜವಾದ ನಾಗರಿಕ ಕೇಂದ್ರೀಕೃತ ನಗರವಾಗಬೇಕಾದರೆ, ವಿಕೇಂದ್ರೀಕರಣ ಅಗತ್ಯ. ಪ್ರತಿ ಭಾಗದ ಸಮಸ್ಯೆ ವಿಭಿನ್ನ. ಆಡಳಿತವು ಜನರಿಗೆ ಹತ್ತಿರವಾಗಬೇಕು. ಅದಕ್ಕಾಗಿಯೇ ಬಹು ನಿಗಮಗಳನ್ನು ರಚಿಸಲಾಗಿದೆ. ಪ್ರತಿ ನಿಗಮ ಸ್ವತಂತ್ರವಾಗಿ ತೆರಿಗೆ ಸಂಗ್ರಹಿಸುತ್ತದೆ. ಹಣಕಾಸು ಕೊರತೆ ಉಂಟಾದಲ್ಲಿ ಸರ್ಕಾರ ಅದನ್ನು ಪೂರೈಸಲಿದೆ. > ರಿಜ್ವಾನ್ ಅರ್ಷದ್, ಶಾಸಕ