ಜಿಲ್ಲೆ

ಡಿಕೆಶಿ ಪಾದಯಾತ್ರೆ ಸರಿಯಲ್ಲ ; ವಸತಿ ಸಚಿವ ವಿ.ಸೋಮಣ್ಣ ಹೇಳಿಕೆ

Tumakuru

ತುಮಕೂರು : ದೇಶದಲ್ಲಿ ಕರೊನಾ ಆತಂಕವಿದ್ದು, ಈ ಸಂದರ್ಭದಲ್ಲಿ ಮೇಕೆದಾಟು ಯೋಜನೆಯ ಹೆಸರಿನಲ್ಲಿ ಸಾವಿರಾರು ಜನರನ್ನು ಸೇರಿಸಿ ಪಾದಯಾತ್ರೆ ನಡೆಸುವುದು ಎಷ್ಟು ಸರಿ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯೋಚಿಸಲಿ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಸಿದ್ಧಗಂಗಾ ಮಠಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲಕ್ಕಿಂತ ದೊಡ್ಡದು ಜನರ ಜೀವ, ಆರೋಗ್ಯ. ಇಡೀ ದೇಶವೇ ಆರೋಗ್ಯಕ್ಕಾಗಿ ಪರಿತಪಿಸುತ್ತಿದೆ, ಇಂತಹ ಸಮಯದಲ್ಲಿ ಯಾವುದು ಅವಶ್ಯಕತೆ, ಯಾವುದು ಅಗತ್ಯತೆ ಇದೆ ತೀರ್ಮಾನಿಸಲಿ ಎಂದರು.

ಡಿ.ಕೆ.ಶಿವಕುಮಾರ್ ಯಾವಾಗ ಪಂಚೆ ಅಥವಾ ಪ್ಯಾಂಟ್ ಹಾಕಿಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ಅವರೂ ರೈತರ ಮಗ, ನಾನೂ ರೈತನ ಮಗ. ಅವರು ಯಾವ ಉದ್ದೇಶದಿಂದ ನಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದಾರೊ ನಮಗೆ ತಿಳಿಯದು ಎಂದು ಪ್ರತಿಕ್ರಿಯಿಸಿದರು.

ಮೇಕೆದಾಟು ಯೋಜನೆ ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆ, ಪಾನಕ ಕೊಡಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ, ಮಜ್ಜಿಗೆ, ಪಾನಕ ಕೊಡುವ ಮಾತು ಎಲ್ಲರೂ ಆಡುತ್ತಾರೆ. ಡಿಕೆಶಿ ಒಂದು ಪಕ್ಷದ ಅಧ್ಯಕ್ಷರಾಗಿದ್ದಾರೆ, ಮೇಕೆದಾಟು ಅವರ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಇದೆ. ಹಾಗಾಗಿ, ಅವರ ಕೆಲಸ ಅವರು ಮಾಡಲಿ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಕರೊನಾ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಲಾಗಿದ್ದು, ಈಗಾಗಲೇ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ವಿ.ಸೋಮಣ್ಣ ಭರವಸೆ ವ್ಯಕ್ತಪಡಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಹೆಬ್ಬಾಕ, ಎಪಿಎಂಸಿ ಅಧ್ಯಕ್ಷ ಉಮೇಶ್‌ಗೌಡ ಮತ್ತಿತರರು ಇದ್ದರು.