ಜಿಲ್ಲೆ

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ 609.85 ಲಕ್ಷ ರೂ.ನಿವ್ವಳ ಲಾಭ

Mangaluru - Hariprasad Rai



ಮಂಗಳೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ ಒಕ್ಕೂಟದ ಅಧ್ಯಕ್ಷ
ಕೆ.ಪಿ. ಸುಚರಿತ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕುಲಶೇಖರದ ಕೊರ್ಡೆಲ್ ಹಾಲ್‌ನಲ್ಲಿ ನಡೆಯಿತು.
ಒಕ್ಕೂಟವು 2022-23ನೇ ಸಾಲಿನಲ್ಲಿ ಒಟ್ಟು 1044.88 ಕೋಟಿ ರೂ.ವಹಿವಾಟು ನಡೆಸಿದ್ದು, ಹಿಂದಿನ ಸಾಲಿಗೆ ಹೋಲಿಸಿದಾಗ ಶೇ. 8.70 ಪ್ರಗತಿ ಸಾಧಿಸಿದೆ. ವರದಿ ಸಾಲಿನಲ್ಲಿ 609.85 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ. ಶೇ.25ರಷ್ಟು ಬೋನಸ್ ಸಂಘಗಳು ಒಕ್ಕೂಟಕ್ಕೆ ವರ್ಷದಲ್ಲಿ ನೀಡಿದ ಹಾಲಿನ ಪ್ರಮಾಣಕ್ಕನುಗುಣವಾಗಿ ನೀಡಲು ಹಾಗೂ ಶೇ. 9 ಡಿವಿಡೆಂಡ್ ನೀಡಲು ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಅತ್ಯುತ್ತಮ ಸಾಧನೆ ಮಾಡಿದ ಸಂಘಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹಾಲು ಉತ್ಪಾದಕರ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಹಸಿರು ಮೇವು, ಉತ್ತಮ ಹೈನುಗಾರರು, ಉತ್ತಮ ಗುಣಮಟ್ಟದ ಸಂಘಗಳು ಹಾಗೂ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ, ನಿರ್ದೇಶಕರಾದ ರವಿರಾಜ ಹೆಗ್ಡೆ, ಕಾಪು ದಿವಾಕರ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ, ಕೆ. ನಾರಾಯಣ ಪ್ರಕಾಶ್ ಕೆ, ನರಸಿಂಹ ಕಾಮತ್, ಬಿ. ಸುಧಾಕರ ರೈ, ಎಂ.ಸುಧಾಕರ ಶೆಟ್ಟಿ, ಸುಭದ್ರಾರಾವ್, ಸವಿತ ಎನ್. ಶೆಟ್ಟಿ , ಸ್ಮಿತಾ ಆರ್. ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್, ಡಾ. ಅರುಣ್ ಕುಮಾರ್ ಶೆಟ್ಟಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಉಪಸ್ಥಿತರಿದ್ದರು.