ಜಿಲ್ಲೆ

ದುರುದ್ದೇಶದಿಂದ ಡಿಕೆಶಿ ಪ್ರಕರಣ ಸಿಬಿಐ ತನಿಖೆಗೆ

ರಾಯಚೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಹಿಂದಿನ ಬಿಜೆಪಿ ಸರ್ಕಾರ ದುರುದ್ದೇಶದಿಂದ ಸಿಬಿಐ ತನಿಖೆಗೆ ಶಿಾರಸ್ಸು ಮಾಡಿತ್ತು. ಹೀಗಾಗಿ ಅದನ್ನು ಸಚಿವ ಸಂಪುಟ ಸಭೆಯಲ್ಲಿ ಹಿಂಪಡೆಯಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಸಕ್ಷಮ ಪ್ರಾಕಾರದ ಅನುಮತಿಯಿಲ್ಲದೆ, ಅಡ್ವೋಕೆಟ್ ಜನರಲ್ ಹಾಗೂ ಸ್ವೀಕರ್ ಅನುಮತಿಯಿಲ್ಲದೆ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಾರಸ್ಸು ಮಾಡಿತ್ತು ಎಂದರು.
ಪ್ರಕರಣವನ್ನು ಸಿಬಿಐ ತನಿಖೆ ವಹಿಸುವ ಮುನ್ನ ಸ್ಥಳೀಯವಾಗಿ ತನಿಖೆ ನಡೆಸುವ ಕುರಿತು ಪರಾಮರ್ಶಿಸದೆ ಮುಖ್ಯಮಂತ್ರಿಗಳ ವೌಖಿಕ ಸೂಚನೆ ಮೇರೆಗೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಜಾರಿ ನಿರ್ದೇಶನಾಲಯ ಸಹ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಉಲ್ಲೇಖಿಸಿಲ್ಲ.
ನಿಯಮಗಳನ್ನು ಅನುಸರಿಸದೆ ರಾಜಕೀಯ ದುರುದ್ದೇಶದಿಂದ ಮಾಡಿವ ಶಿಾರಸ್ಸನ್ನು ಹಿಂಪಡೆಯಲಾಗಿದೆ. 2017ರಲ್ಲಿ ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ ಶಾಸಕರನ್ನು ಸಂಘಟಿಸಲು ಸಹಕಾರ ನೀಡಿದ್ದರಿಂದ ಅವರ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣಕ್ಕೆ ಮುಂದಾಗಿತ್ತು.
ತೆಲಂಗಾಣ ಸೇರಿದಂತೆ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವ ಅವಕಾಶವಿದ್ದು, ತೆಲಂಗಾಣದ ಆರು ವಿಧಾನಸಭೆ ಕ್ಷೇತ್ರಗಳ ಉಸ್ತುವಾರಿಯನ್ನು ನನಗೆ ನೀಡಲಾಗಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.