ಜಿಲ್ಲೆ

ಮುಸ್ಲಿಮರ ಓಲೈಕೆಗಾಗಿ ಡಿಕೆಶಿ ನಾಟಕ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತಿರುಗೇಟು

Kolar

ಕೋಲಾರ: ಕರೊನಾ ವಿಚಾರದಲ್ಲಿ ಬಿಜೆಪಿ ಸರ್ಕಾರ ಮುಸ್ಲಿಮರನ್ನು ಟಾರ್ಗೆಟ್ ಮಾಡಿಕೊಂಡು ಅನಗತ್ಯ ತೊಂದರೆ ಕೊಡುತ್ತಿದೆ ಎಂದು ತಪ್ಪು ಸಂದೇಶ ಬಿತ್ತುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೋಮು ಸೌಹಾರ್ದ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ಆರ್‌ಡಿಪಿಆರ್ ಇಲಾಖೆಯಿಂದ ನರೇಗಾದಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ವೀಕ್ಷಣೆಗೆ ಸೋಮವಾರ ಭೇಟಿ ನೀಡಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಕೋಮು ಭಾವನೆ ಸೃಷ್ಟಿಸಲು ಬಿಡುವುದಿಲ್ಲ ಎಂದರು.

ಕರೊನಾ ವಿಚಾರದಲ್ಲಿ ಕೆಲ ತಬ್ಲಿಘಿಗಳು ಮಾಡಿರುವ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನು ಹೊಣೆ ಮಾಡುವುದು ತಪ್ಪೆಂದು ಸರ್ಕಾರವೇ ಹೇಳುತ್ತಿರುವಾಗ ಸರ್ಕಾರ ತೊಂದರೆ ನೀಡಲು ಹೇಗೆ ಸಾಧ್ಯ. ಶಿವಕುಮಾರ್ ಕಾಂಗ್ರೆಸ್‌ನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಮುಸ್ಲಿಮರ ಪರ ತಾನಿದ್ದೇನೆ ಎಂದು ತೋರ್ಪಡಿಸಿಕೊಳ್ಳಲು ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಶಾಸಕ ಜಮೀರ್ ಅಹ್ಮದ್ ಹಾಗೂ ತಬ್ಲಿಘಿಗಳ ಬಗ್ಗೆ ಮಾತನಾಡಿದರೆ ಡಿಕೆಶಿಗೆ ಏಕೆ ಸಿಟ್ಟು ಬರುತ್ತದೆ? ಇದು ರಾಜಕೀಯ ಮಾಡುವ ಸಮಯವಲ್ಲ, ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದು ಕಿವಿಮಾತು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಜನತಾ ಕರ್ಫ್ಯೂ ಶೇ.99 ಯಶಸ್ವಿಯಾಗಿದೆ. ಸೇವಾನಿರತ ವೈದ್ಯರು, ನರ್ಸ್‌ಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪರ ದೇಶವಿದೆ ಎಂಬುದನ್ನು ಸಾಬೀತುಪಡಿಸಲು ಹಾಗೂ ಆತ್ಮಸೈರ್ಯ ತುಂಬಲು ಜನರಿಂದ ಚಪ್ಪಾಳೆ ತಟ್ಟಿಸಿದ್ದಾರೆ. ಜನರ ಬೆಂಬಲದಿಂದ ಹತಾಶರಾಗಿರುವ ವಿರೋಧಿಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪಿಎಂ ಕೇರ್, ಸಿಎಂ ಪರಿಹಾರ ನಿಧಿಗೆ ನಿರೀಕ್ಷೆಗೂ ಮೀರಿ ಜನರು ದೇಣಿಗೆ ನೀಡಿದ್ದಾರೆ. ಸಂಘ-ಸಂಸ್ಥೆಯವರು ಶಕ್ತಿ ಮೀರಿ ಸೇವಾ ಚಟುವಟಿಕೆ ಮಾಡುತ್ತಿದ್ದಾರೆ. ಹೀಗಿರುವಾಗ ಡಿಕೆಶಿ ಏಕೆ ಅನಗತ್ಯ ರಾಜಕಾರಣ ಮಾಡುತ್ತಾರೋ ಗೊತ್ತಾಗುತ್ತಿಲ್ಲ ಎಂದರು.

ಕರೊನಾದಿಂದ ಜನರಿಗೆ ಉದ್ಯೋಗ ಇಲ್ಲದಂತಾಗಿದೆ. ಇದನ್ನು ಅರಿತು ನಮ್ಮ ಇಲಾಖೆಯಿಂದ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುತ್ತಿದೆ. ರಾಜ್ಯದ 6021 ಗ್ರಾಪಂಗಳ ಪೈಕಿ 5400 ಗ್ರಾಪಂ ವ್ಯಾಪ್ತಿಯಲ್ಲಿ 2 ಲಕ್ಷ ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ನರೇಗಾ ಕೂಲಿ ಹೆಚ್ಚಿಸಿರುವುದರಿಂದ ಕೂಲಿ ಕಾರ್ಮಿಕರು ಖುಷಿಯಿಂದ ನರೇಗಾ ಕೆಲಸ ಮಾಡುತ್ತಿದ್ದಾರೆ ಎಂದರು.

ನರೇಗಾ ಯೋಜನೆ ರಾಜ್ಯದಲ್ಲಿ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲವೆಂದು ಕೇಂದ್ರ ಸಚಿವರೊಬ್ಬರು ಪ್ರಧಾನಿಗೆ ದೂರು ನೀಡಿರುವುದು ಸರಿಯಲ್ಲ. ಮೋದಿ ಸೂಚನೆಯಂತೆ ನರೇಗಾ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ. ಬೇಕಿದ್ದರೆ ಹೆಚ್ಚಿನ ಮಾಹಿತಿಯನ್ನು ಸಚಿವರು ಮೋದಿ ಅವರಿಂದ ಪಡೆಯಬಹುದು ಎಂದು ತಿರುಗೇಟು ನೀಡಿದರು.

ಸಂಸದ ಎಸ್.ಮುನಿಸ್ವಾಮಿ, ಆರ್‌ಡಿಪಿಆರ್ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ನರೇಗಾ ಆಯುಕ್ತ ಅನಿರುದ್ಧ ಶ್ರವಣ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಡಾ.ವಿಶಾಲ್, ಕೋಲಾರ ಜಿಪಂ ಸಿಇಒ ದರ್ಶನ್, ತಹಸೀಲ್ದಾರ್ ಶೋಭಿತಾ ಇದ್ದರು.