ಜಿಲ್ಲೆ

ಮಲ್ಲಿಕಾರ್ಜುನ ಖರ್ಗೆ ಮಾರ್ಗದರ್ಶನದಂತೆ ನಡೆಯುತ್ತೇವೆ: ಡಿಸಿಎಂ ಡಿ. ಕೆ. ಶಿವಕುಮಾರ್

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ನನ್ನನ್ನೂ ಸೇರಿದಂತೆ ಎಲ್ಲರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಷ್ಟೀಯ ನಾಯಕರು. ಅವರ ಹಾಗೂ ಪಕ್ಷದ ವರಿಷ್ಟರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾರ್ಯಕರ್ತರಾಗಿ ದುಡಿಯುತ್ತೇವೆ" ಎಂದು ಸ್ಪಷ್ಟಪಡಿಸಿದರು.

ಸಚಿವ ಆರ್. ಬಿ. ತಿಮ್ಮಾಪುರ ಅವರ ದಲಿತ ಸಿಎಂ ಹೇಳಿಕೆ ಹಾಗೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, "ಏನೇನೋ ಹೇಳುವ ನಿಮ್ಮ (ಮಾಧ್ಯಮ) ಮಾತುಗಳಿಗೆ ನಾನು ಉತ್ತರ ನೀಡಲು ಸಿದ್ಧನಿಲ್ಲ" ಎಂದರು.

ಬೆಳಗಾವಿಯಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎನ್ನುವ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, "ಇದೇ ಬೆಳಗಾವಿ ನೆಲದಲ್ಲಿನ ಗಾಂಧಿ ಬಾವಿಯಿಂದ ನೀರನ್ನು ತೆಗೆದು ನೆಲವನ್ನು ಸ್ವಚ್ಛ ಮಾಡಿ. ಬಿಜೆಪಿ ಮಾಡಿದ್ದ ಕೊಳೆ, ಕಸವನ್ನು ಗುಡಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು" ಎಂದು ತಿರುಗೇಟು ನೀಡಿದರು.

ಸತೀಶ್ ಜಾರಕಿಹೊಳಿ ಅವರು ಸೇರಿದಂತೆ 30 ಕ್ಕೂ ಹೆಚ್ಚು ಶಾಸಕರ ದುಬೈ ಪ್ರವಾಸದ ಬಗ್ಗೆ ಕೇಳಿದಾಗ, "ಇದರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ನಾನು ಇದರ ಬಗ್ಗೆ ಮಾತನಾಡಲು ಹೋಗುವುದಿಲ್ಲ" ಎಂದರು.