ಜಿಲ್ಲೆ

ದೆಹಲಿಯ ಅಮೃತವನಕ್ಕೆ ಪ್ರತೀ ಹಳ್ಳಿಯ ಮಣ್ಣು- ದಕ ಕಾರ್ಯಕ್ರಮ ಉದ್ಘಾಟಿಸಿ ಬಿಜೆಪಿ ರಾಜ್ಯಾಧ್ಯಕ್ಷರಿಂದ ಮಾಹಿತಿ

Mangaluru - Prakash MC Manjeshwar

ಮಂಗಳೂರು: ದೇಶವನ್ನು ಪರಮ ವೈಭವದೆಡೆಗೆ ಕೊಂಡೊಯ್ಯುವುದು, ಸಮೃದ್ಧ ರಾಷ್ಟ್ರವಾಗಿ ರೂಪಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ. ಈ ಹಿನ್ನೆಲೆಯಲ್ಲಿ ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದಿಂದ ಶತಮಾನೋತ್ಸವದ ಅವಧಿಯನ್ನು ಅಮೃತಕಾಲವನ್ನಾಗಿ ಘೋಷಿಸಲಾಗಿದೆ. ಅಮೃತ ಕಾಲದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರು, ಯೋಧರು, ಹುತಾತ್ಮ ಜವಾನರು, ಪೊಲೀಸ್ ಅಧಿಕಾರಿಗಳ ಸ್ಮರಣಾರ್ಥ ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಿಸಲಾಗುತ್ತಿರುವ ಅಮೃತವನಕ್ಕೆ ಪ್ರತಿ ಹಳ್ಳಿಯಿಂದ ಮಣ್ಣು ಸಂಗ್ರಹ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರ, ಹಳ್ಳಿಗಳಿಂದ ಪವಿತ್ರ ಮಣ್ಣನ್ನು ಸಂಗ್ರಹಿಸುವ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನದ ಕಾರ್ಯಕ್ರಮವನ್ನು ನಗರದ ಕದ್ರಿ ಮಂಜುನಾಥ ದೇವಸ್ಥಾನದ ಹೊರಾಂಗಣದಲ್ಲಿ ಭಾನುವಾರ ಅವರು ಉದ್ಘಾಟಿಸಿದರು.
ಸ್ವಾತಂತ್ರ್ಯ ನಂತರ ತಾಯಿ ಭಾರತಿಯ ರಾಷ್ಟ್ರಭಕ್ತಿಯ ಆರಾಧನೆ ಮಾಡಿದವರು ನರೇಂದ್ರ ಮೋದಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ. ಮೋದಿಯವರು ಉಕ್ಕಿನ ಮನುಷ್ಯನ ಪ್ರತಿಮೆ, ಕರ್ತವ್ಯ ಪಥ ಮಾಡಿದರು. ಮುಂದಿನ 25 ವರ್ಷ ಅಮೃತ ಕಾಲ. ಸ್ವಾತಂತ್ರ್ಯ ಸಂಗ್ರಾಮದ ನಂತರ ನಡೆದ ದೊಡ್ಡ ಸಂಗ್ರಾಮ ಅಯೋಧ್ಯೆಗಾಗಿ ನಡೆದ ಹೋರಾಟ. ಮೂರನೇ ಜಾಗೃತಿ ಸಂಗ್ರಾಮ ನನ್ನ ಮಣ್ಣು ನನ್ನ ದೇಶ ಯೋಜನೆ ಎಂದು ಅವರು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ದೇಶದಲ್ಲಿ ದೇಶಭಕ್ತಿ ಮೂಡಿಸುವ ಕಾರ್ಯಕ್ರಮಗಳನ್ನು ಬಿಜೆಪಿ ಮಾತ್ರ ಮಾಡುತ್ತಿದೆ. ಭಾರತ್ ಜೋಡೋ ಎಂಬ ಹೆಸರಿನಲ್ಲಿ ಯಾತ್ರೆ ನಡೆಸಿದವರು ದೇಶದ ಹೆಸರನ್ನು ಭಾರತ ಎಂದು ಕರೆಯಲು ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ. ದೇಶಭಕ್ತಿಯನ್ನು ಉದ್ದೀಪನಗೊಳಿಸುವ ದೃಷ್ಟಿಯಿಂದ ದೇಶದಲ್ಲಿ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ನಡೆಯುತ್ತಿದೆ ಎಂದರು.
ಶಾಸಕರಾದ ಡಾ.ವೈ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಮಾಜಿ ಸಚಿವ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
‘ನನ್ನ ಮಣ್ಣು ನನ್ನ ದೇಶ’ ಅಭಿಯಾನದ ಸಂಯೋಜಕ ಸಂತೋಷ್‌ಕುಮಾರ್ ರೈ ಬೋಳಿಯಾರ್ ಪ್ರಾಸ್ತಾವನೆಗೈದರು. ಬಿಜೆಪಿ ಜಿಲ್ಲಾ ಮಾಧ್ಯಮ ಸಂಯೋಜಕ ಸಂದೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಪೈ ದೇಶಭಕ್ತಿಗೀತೆ ಹಾಡಿದರು.
ಜಿಲ್ಲೆಯ ಸುಬ್ರಹ್ಮಣ್ಯ, ಶರವು, ಮಂಗಳಾದೇವಿ, ಕದ್ರಿ, ಕುದ್ರೋಳಿ, ರಥಬೀದಿ ದೇವಸ್ಥಾನ ಸಹಿತ ವಿವಿಧ ದೇವಾಲಯ, ಸ್ವಾತಂತ್ರ್ಯ ಹೋರಾಟಗಾರರು, ಯೋಧರ ಹಳ್ಳಿಗಳಿಂದ ಮಣ್ಣು ಸಂಗ್ರಹಿಸಿ ದೆಹಲಿಯ ಕರ್ತವ್ಯ ಪಥದ ಅಮೃತ ವನಕ್ಕೆ ಕಳುಹಿಸಲಾಯಿತು.