ಕಲಬುರಗಿ: ಬಿಜೆಪಿ ನಾಯಕರಿಗೆ ಮಾನ, ಮರ್ಯಾದೆ ಇದ್ದರೆ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲಿ. ಬರಕ್ಕೆ ಪರಿಹಾರ ಒದಗಿಸಿಕೊಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಾಗ್ದಾಳಿ ನಡೆಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ದೆಹಲಿಯಲ್ಲಿ ಫೆ.೭ರಂದು ರಾಜ್ಯ ಸರ್ಕಾರದ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿ ರಾಜ್ಯದಲ್ಲಿ ಹಮ್ಮಿಕೊಂಡ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ರಾಜ್ಯಕ್ಕೆ ನ್ಯಾಯ ಒದಗಿಸಲು ಬಿಜೆಪಿ ನಾಯಕರು ವಿಫಲರಾಗಿದ್ದು, ಆತ್ಮಾವಲೋಕನ ಮಾಡಿಕೊಳ್ಳಲಿ. ಒಂದು ದಿನವೂ ಪ್ರಧಾನಿಯನ್ನು ಭೇಟಿ ಮಾಡಿ, ರಾಜ್ಯದ ಹಿತದ ಬಗ್ಗೆ ಧ್ವನಿ ಎತ್ತಲಿಲ್ಲ. ಮೊದಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ರಾಜ್ಯಕ್ಕೆ ಆದ ಅನ್ಯಾಯ ಸರಿಪಡಿಸಲಿ. ಇದಕ್ಕಾಗಿಯೇ ಅವರನ್ನು ರಾಜ್ಯದ ಜನರು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಬರಕ್ಕೆ ಪರಿಹಾರ ನೀಡದಿರುವುದು, ಬಜೆಟ್‌ನಲ್ಲಿ ರಾಜ್ಯಕ್ಕೆ ಆದ ಅನ್ಯಾಯ, ಹಿಂದೆ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ಬಿಡುಗಡೆ ಮಾಡದಿರುವುದು ಖಂಡಿಸಿ, ಫೆ.೭ರಂದು ದೆಹಲಿಯಲ್ಲಿ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಎಲ್ಲ ಸಚಿವರು, ಶಾಸಕರು, ಸಂಸದರು ಮೊದಲ ಬಾರಿಗೆ ಇಂತಹ ಪ್ರತಿಭಟನೆಗೆ ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ನನಗೆ ಸುಗಂಧರಾಜ ಅಲರ್ಜಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂಕುಮ ಹಚ್ಚಿಕೊಳ್ಳುತ್ತಾರೆ. ನನಗೆ ಸುಗಂಧರಾಜ ಹೂವು ಅಲರ್ಜಿ ಇದೆ. ನಾನು ಲೇಟರ್‌ನಲ್ಲಿ ಹಾಕಿದ್ದೇನೆ ಸುಗಂಧರಾಜ ಹೂವಿನ ಹಾರ ಹಾಕಬೇಡಿ ಅಂತಾ. ಬೇರೆಯವರಿಗೆ ಕೆಲವು ಅಲರ್ಜಿ ಇರುತ್ತದೆ. ಸಿದ್ದರಾಮಯ್ಯ ಮೊನ್ನೆಯಷ್ಟೇ ಕುಂಕುಮ ಇಟ್ಟುಕೊಂಡಿದ್ದರು. ಮಹಿಳೆಯರಂತೆ ಅಗಲವಾಗಿ ಕುಂಕುಮ ಇಟ್ಟುಕೊಳ್ಳಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಡಿ.ಕೆ.ಸುರೇಶ ಪ್ರತ್ಯೇಕ ರಾಷ್ಟ್ರದ ಕುರಿತ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಭಾರತವನ್ನು ಅಖಂಡವಾಗಿ ಇಟ್ಟಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸವಾಗಿದೆ. ನಮ್ಮ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಡಿ.ಕೆ.ಸುರೇಶ ಅವರು ದೇಶವನ್ನು ಒಗ್ಗಟ್ಟಾಗಿ ಇಡಬೇಕು. ಸಮಾನತೆಯಿಂದ ದೇಶದ ಸಂಪತ್ತನ್ನು ಹಂಚಿಕೆ ಆಗಬೇಕು ಎಂದು ಧ್ವನಿ ಎತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಕಲಬುರಗಿ ಲೋಕಸಭೆ ಅಭ್ಯರ್ಥಿ ನಾನೇ ಆಗುತ್ತೇನೆ ಎಂದು ಚಟಾಕಿ ಹಾರಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕ ಅಲ್ಲಮಪ್ರಭು ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಪ್ರಮುಖರಾದ ರೇವುನಾಯಕ ಬೆಳಮಗಿ, ಅರುಣಕುಮಾರ ಪಾಟೀಲ್, ಚೇತನ ಗೋನಾಯಕ, ಸೋಮಶೇಖರ ಹಿರೇಮಠ ಇತರರಿದ್ದರು.
ನಮ್ಮಲ್ಲಿ ಅಸ್ಪೃಶ್ಯತೆ ಇಲ್ಲ: ಜಾತಿ ಕಾರಣಕ್ಕೆ ಸ್ವಾಮೀಜಿಗೆ ಗರ್ಭಗುಡಿಗೆ ಪ್ರವೇಶ ನಿರಾಕರಣೆ ಕುರಿತು ಮಾಧ್ಯಮಗಳಿಂದ ತಿಳಿದು ಬಂದಿದೆ. ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಬೆಳಗ್ಗೆ, ಸಂಜೆ ಸ್ವಚ್ಛ ಮಾಡುತ್ತಾರೆ. ಈ ಪ್ರಕರಣದಲ್ಲಿ ಯಾವ ಉದ್ದೇಶ ಎಂಬುದು ಜಿಲ್ಲಾ ಉಸ್ತುವಾರಿ ಸಚಿವರು, ಮುಜರಾಯಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ನಮ್ಮಲ್ಲಿ ಇಂತಹ ಅಸ್ಪೃಶ್ಯತೆ ಇಲ್ಲ. ನಾವೆಲ್ಲರೂ ಒಂದೇ. ಮಾನವೀಯತೆಯಿಂದ ಒಟ್ಟಾಗಿ ಬದುಕಬೇಕು. ಎಲ್ಲ ಧರ್ಮದವರಿಗೂ ದೇವಾಲಯಗಳಲ್ಲಿ ಅವಕಾಶ ನೀಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ತಿಳಿಸಿದರು.