ಶಿವಮೊಗ್ಗ: ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಗೆ ಸನ್ನದ್ಧರಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ರಾತ್ರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದರು. ಕರೊನಾ ಸಂಕಷ್ಟದಲ್ಲಿರುವ ಜನರ ನೇರವಿಗೆ ಹಾಗೂ ಕರೊನಾದಿಂದ ಮೃತರಾದ ಕುಟುಂಬದ ನೆರವಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಧಾವಿಸುವ ಮೂಲಕ ಅವರಿಗೆ ನೇರವಾಗಬೇಕೆಂದು ಮನವಿ ಮಾಡಿದರು.
ಕರೊನಾ ನಿಯಮ ಬ್ರೇಕ್:
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸರ್ಕಾರದ ಕರೊನಾ ನಿಯಮ ಗಾಳಿಗೆ ತೂರಲಾಗಿತ್ತು. ನೂರಾರು ಕಾರ್ಯಕರ್ತರು ಪರಸ್ಪರ ಅಂತರವಿಲ್ಲದೆ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹಾಗೂ ಸನ್ಮಾನ ಮಾಡಲು ಮುಗಿಬಿದ್ದಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ವಕ್ತಾರರಾದ ಕೆ.ಬಿ.ಪ್ರಸನ್ನ ಕುಮಾರ್, ಬೇಳೂರು ಗೋಪಾಲಕೃಷ್ಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಇದ್ದರು.