ಜಿಲ್ಲೆ

ಮುಖ್ಯಮಂತ್ರಿಯವರೇ ಚಿಂತೆ ಮಾಡಬೇಡಿ ನಿಮ್ಮ ಜತೆ ನಾವಿದ್ದೇವೆ: ಬಿಎಸ್​ವೈ ನಿರ್ಧಾರಕ್ಕೆ ಡಿಕೆಶಿ ಬೆಂಬಲ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಮುಖ್ಯಮಂತ್ರಿಯವರೇ ಚಿಂತೆ ಮಾಡಬೇಡಿ, ನಾವು ನಿಮ್ಮ ಜತೆಗಿದ್ದೇವೆ. ಕರೊನಾ ವಿರುದ್ಧ ಹೋರಾಟದಲ್ಲಿ ಎಲ್ಲ ಸಹಕಾರ ಕೊಡುತ್ತೇವೆ. ಇದೇ ವೇಳೆ ಜಾಲತಾಣ ದುರುಪಯೋಗ ಪಡಿಸಿಕೊಂಡು ಸಾಮಾಜಿಕ ಬಹಿಷ್ಕಾರ ಸೃಷ್ಟಿಸುವವರ ವಿರುದ್ಧ ಸೈಬರ್ ಇಲಾಖೆ ಕಾರ್ಯಪ್ರವೃತ್ತವಾಗಿ ತಪ್ಪಿತಸ್ಥರನ್ನು ಜೈಲಿಗೆ ಕಳಿಸಲು ಕ್ರಮಕೈಗೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಲತಾಣ ಬಳಸಿಕೊಂಡು ಕೆಲವರು ಸಾಮಾಜಿಕ ಬಹಿಷ್ಕಾರ ಆರಂಭಿಸಿದ್ದಾರೆ. ಅಲ್ಪಸಂಖ್ಯಾತರಿಗೆ ತೊಂದರೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಸಿಎಂ ಎಚ್ಚರಿಕೆ ಹೇಳಿಕೆ ಕೊಟ್ಟಿದ್ದಾರೆ. ಅವರನ್ನು ಅಭಿನಂದಿಸುವೆ. ತಕ್ಷಣ ಆದೇಶ ಹೊರಡಿಸಿ ಗ್ರಾಮ ಪಂಚಾಯಿತಿವರೆಗೆ ಕಳಿಸಬೇಕು ಎಂದು ಹೇಳಿದರು.

ಸಚಿವರು ಎಲ್ಲಿ ಮಲಗಿದ್ದಾರೋ?: ಗ್ರಾಮೀಣಾಭಿವೃದ್ಧಿ ಸಚಿವರು ಎಲ್ಲಿ ಮಲಗಿದ್ದಾರೋ? ಮನೆಯಲ್ಲಿ ಮಲಗಿದ್ದಾರೆ ಅನಿಸುತ್ತದೆ. ಈ ಸಂದರ್ಭದಲ್ಲಿ ಅವರು ಕ್ರಿಯಾಶೀಲವಾಗಿರಬೇಕಿತ್ತು. ಕುಡಿಯುವ ನೀರು ವ್ಯವಸ್ಥೆ ಮಾಡಬೇಕು. ನರೇಗಾ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕಿತ್ತು ಎಂದು ಕೆ.ಎಸ್.ಈಶ್ವರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಏನಾಗುತ್ತದೋ ಎಂದು ನನಗೆ ಭಯ ಅಗುತ್ತಿದೆ. ಕೆಲಸ ಇಲ್ಲದೇ ಕಳ್ಳತನಗಳು ಆರಂಭವಾಗಬಹುದು. ಕಾನೂನು ಸುವ್ಯವಸ್ಥೆ ಹದಗೆಡಬಾರದು ಎಂದ ಅವರು, ಸಿಎಂ ಒಬ್ಬರೇ ಮಾತಾಡಿದರೆ, ಕೆಲಸ ಮಾಡಿದರೆ ಸಾಲದು. ಜಿಲ್ಲಾ ಸಚಿವರನ್ನು ಎಲ್ಲೆಡೆ ಕಳಿಸಲಿ ಎಂದರು.

ಸಿಎಂ ಕಾಂಗ್ರೆಸ್ ಬೆಂಬಲ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್​ನ ಹಲವು ಶಾಸಕರು ಸಿಎಂ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಾನು ಎಲ್ಲಿ ಮಲಗಿದೀನಿ ಅಂತ ಡಿಕೆಶಿ ನೋಡಲಿ.ನಮ್ಮ ಕೆಲಸ, ನಮ್ಮ ಕರ್ತವ್ಯ ಮಾಡುತ್ತಿದ್ದೇವೆ ಹೊರತು ಎಲ್ಲಿಯೋ ಮಲಗಿ ಬಂದಿಲ್ಲ. ನನಗೆ ಎರಡು, ಮೂರು ಜಿಲ್ಲೆಗಳ ಉಸ್ತುವಾರಿ ಇದೆ. ನಾನೇನು ಸುಮ್ಮನೆ ಕುಳಿತಿಲ್ಲ. | ಕೆ.ಎಸ್.ಈಶ್ವರಪ್ಪ ಸಚಿವ

ಕೆಪಿಸಿಸಿಯಿಂದ ಆರೋಗ್ಯ ಸಹಾಯವಾಣಿ

ಬೆಂಗಳೂರು: ಲಾಕ್​ಡೌನ್ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ನೆರವಾಗಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ 24 ಗಂಟೆ ಕಾರ್ಯನಿರ್ವಹಿಸುವ ಆರೋಗ್ಯ ಸಹಾಯವಾಣಿ ಆರಂಭಿಸಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಅನೇಕರು ಇನ್ನಿತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರು ಆಸ್ಪತ್ರೆಗೆ ಹೋಗುವುದಕ್ಕೂ ಕಷ್ಟವಾಗಿದೆ. ಇಂತವರಿಗೆ ನಮ್ಮ ವೈದ್ಯಕೀಯ ಘಟಕ ನೆರವಾಗಲಿದೆ ಎಂದರು. ಈ ಟೆಲಿಕನ್ಸಲ್ಟೇಶನ್ ನಲ್ಲಿ ಕಾರ್ಯನಿರ್ವಹಿಸಲು 75 ಮಂದಿ ವೈದ್ಯರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದಾರೆ. 080- 47188000ಗೆ ಕರೆಮಾಡಿದರೆ ವೈದ್ಯರಿಂದ ಸಲಹೆ ಪಡೆದು ಕೊಳ್ಳಬಹುದು ಎಂದು ಹೇಳಿದರು.