* ಜನರ ಮನ ಗೆಲ್ಲಲು ಜನಸ್ಪಂದನ
* ಉಪಚುನಾವಣೆಗೆ ಈಗಿನಿಂದಲೇ ರಣತಂತ್ರ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಮುಂಬರುವ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಕಬ್ಜಾ ಮಾಡಲು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭರ್ಜರಿ ರಣತಂತ್ರ ರೂಪಿಸುತ್ತಿದ್ದಾರೆ. ಜನಸ್ಪಂದನ ಕಾರ್ಯಕ್ರಮದ ಹೆಸರಿನಲ್ಲಿ ಬೊಂಬೆನಾಡಿನ ಜನರ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ರಾಜೀನಾಮೆಯಿಂದಾಗಿ ಕ್ಷೇತ್ರದ ಶಾಸಕ ಸ್ಥಾನ ಖಾಲಿಯಾಗಿದ್ದು, ಕೆಲವೇ ದಿನಗಳಲ್ಲಿ ಉಪಚುನಾವಣೆಗೆ ಬೊಂಬೆನಾಡು ಸಾಕ್ಷಿಯಾಗಲಿದೆ. ಈ ಚುನಾವಣೆಯಲ್ಲಿ ಕ್ಷೇತ್ರವನ್ನು ಹೇಗಾದರೂ ಮಾಡಿ ಕಬ್ಜಾ ಮಾಡಬೇಕು ಎಂಬುದು ಡಿಕೆಶಿ ಯೋಜನೆಯಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಯಂತ್ರವನ್ನೇ ಗ್ರಾಮಗಳತ್ತ ತರುತ್ತಿದ್ದು, ಅಧಿಕಾರ ಬಳಸಿಕೊಂಡು ಬೊಂಬೆನಾಡಿನ ಮತದಾರ ಪ್ರಭುಗಳ ಮನಸ್ಸು ಗೆಲ್ಲುವ ಕಸರತ್ತು ಆರಂಭಿಸಿದ್ದಾರೆ.
ಈ ಹಿಂದೆ ಲೋಕಸಭೆ ಚುನಾವಣೆಗೂ ಮುನ್ನ ಸಂಸದರಾಗಿದ್ದ ಡಿ.ಕೆ. ಸುರೇಶ್ ಪ್ರತಿ ಗ್ರಾಪಂಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡು ಮತದಾರರ ಮನಗೆಲ್ಲುವ ಕಸರತ್ತು ನಡೆಸಿದ್ದರು. ಅದೇ ಮಾದರಿಯಲ್ಲಿ ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಸ್ಲೋಗನ್‌ನೊಂದಿಗೆ ಹಳೇತಂತ್ರ ಹೊಸಮಂತ್ರ ಎಂಬಂತೆ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಜತೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ತಾಲೂಕಿನಲ್ಲಿ ವಿನೂತನವಾದ ಸರಣಿ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಿದ್ದಾರೆ. ಪ್ರತಿ ಜಿಪಂ ವ್ಯಾಪ್ತಿಯ ಪ್ರಮುಖ ಕೇಂದ್ರಗಳಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದು, ಈಗಾಗಲೇ ಎಲ್ಲ ಜಿಪಂ ಕೇಂದ್ರಗಳ ಏಳು ಗ್ರಾಮದಲ್ಲಿ ಯಶಸ್ವಿ ಕಾರ್ಯಕ್ರಮ ನಡೆಸಿದ್ದಾರೆ. ಮಂಗಳವಾರ ಗ್ರಾಮೀಣ ಜನಸ್ಪಂದನ ಕಾರ್ಯಕ್ರಮ ಮುಗಿದಿದ್ದು, ಬುಧವಾರ ನಗರವಾಸಿಗಳ ಅಹವಾಲು ಸ್ವೀಕರಿಸಲಿದ್ದಾರೆ. ಉಪಮುಖ್ಯಮಂತ್ರಿಗಳಿಗೆ ವ್ಯಾಪ್ತಿಯ ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳ ಸಹಿತ ಪ್ರಮುಖ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಜನರ ಮನೆ ಬಾಗಿಲಿಗೆ ಅರ್ಜಿ ತಲುಪಿಸಿ ಅವುಗಳನ್ನು ಕಾರ್ಯಕ್ರಮದಲ್ಲಿ ಪಡೆಯುವ ಕೆಲಸವಾಗುತ್ತಿದೆ. ಚನ್ನಪಟ್ಟಣ ತಾಲೂಕಿನ ಇತಿಹಾಸದಲ್ಲಿ ಈ ರೀತಿಯಾದ ಸರಣಿ ಕಾರ್ಯಕ್ರಮ ಇದೇ ಮೊದಲು ಎನ್ನಬಹುದು.
ಆಡಳಿತ ಯಂತ್ರ ಬಳಸಿಕೊಂಡು ಜನರ ಸಮಸ್ಯೆ ಕೇಳುವ ಜತೆಗೆ ಸೇವೆಯ ಮೂಲಕ ಬೊಂಬೆನಾಡಿನ ಜನರ ಮನಸ್ಸು ಗೆಲ್ಲುವ ಪ್ಲ್ಯಾನ್ ಡಿಸಿಎಂ ಅವರದ್ದಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷದ ಮತಬ್ಯಾಂಕ್ ಗಣನೀಯವಾಗಿ ಏರಿಕೆ ಕಂಡಿರುವುದು ಕ್ಷೇತ್ರದ ಮೇಲೆ ಡಿಕೆಶಿಗೆ ವಿಶ್ವಾಸ ಮೂಡಲು ಕಾರಣವಾಗಿದೆ. ಈಗಾಗಲೇ ಬುಟ್ಟಿಗೆ ಬಿದ್ದಿರುವ ಮತಗಳನ್ನು ಭದ್ರ ಮಾಡಿಕೊಳ್ಳುವ ಜತೆಗೆ ಮುಂಬರುವ ಉಪಚುನಾವಣೆಯಲ್ಲಿ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳುವುದು ಅವರ ಏಕೈಕ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಾನಾ ರಣತಂತ್ರ ಹೆಣೆಯುತ್ತಿರುವ ಅವರು, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬೊಂಬೆನಾಡಿನ ಪ್ರದಕ್ಷಿಣೆ ನಡೆಸುತ್ತಿದ್ದಾರೆ.
ಜನಸ್ಪಂದನ ಸಭೆಯಲ್ಲಿ ಅಹವಾಲು ಕೇಳುವ ಜತೆಗೆ, ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಕೆಲಸಕ್ಕೆ ಡಿಕೆಶಿ ಮುಂದಾಗಿದ್ದಾರೆ. ಕಾರ್ಯಕ್ರಮದ ಪ್ರತಿ ವೇದಿಕೆಯಲ್ಲೂ ನಿಮ್ಮ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎನ್ನುತ್ತಿದ್ದಾರೆ. ಇದರೊಂದಿಗೆ, ನಾನು ನಿಮ್ಮ ಮನೆಮಗ, ತಾಲೂಕಿನ ಒಂದು ಭಾಗದ ಜನ ರಾಜಕೀಯ ಶಕ್ತಿಕೊಟ್ಟ ಕಾರಣ ಈ ಮಟ್ಟಿಗೆ ಬೆಳೆದು ನಿಂತಿದ್ದೇನೆ. ನಾನು ಎಂದಿಗೂ ನಿಮ್ಮವನು, ಬಿಟ್ಟು ಹೋಗುವವನಲ್ಲ ಎಂದು ಒತ್ತಿ ಹೇಳುವ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿ ಕ್ಷೇತ್ರ ಬಿಟ್ಟುಹೋಗಿದ್ದಾರೆ. ನಾನು ಹೋಗುವುದಿಲ್ಲ ಎನ್ನುವುದನ್ನು ಸಾರುತ್ತಿದ್ದಾರೆ. ಸೇವೆ, ಋಣ, ಮನೆಮಗ ಹೀಗೆ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಕೆಲಸವನ್ನು ಚಾಚುತಪ್ಪದೆ ಮಾಡುತ್ತಿದ್ದಾರೆ. ಇವುಗಳು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತವೆ ಎಂಬುದು ಕಾಲವೇ ನಿರ್ಧರಿಸಬೇಕಾಗಿದೆ.
ಜನಸ್ಪಂದನ ಕಾರ್ಯಕ್ರಮದಲ್ಲಿ ಡಿಸಿಎಂ ಭರಪೂರ ಆಶ್ವಾಸನೆ ನೀಡುತ್ತಿದ್ದು, ಚನ್ನಪಟ್ಟಣದ ಅಭಿವೃದ್ಧಿಗೆ ಭರಪೂರ ಅನುದಾನ ಹರಿದು ಬರಲಿದೆ ಎಂಬ ಮಾತುಗಳು ಕೇಳಿಬಂದಿವೆ. ಅದರಲ್ಲೂ ವಸತಿ ಹಾಗೂ ನಿವೇಶನ ರಹಿತರಲ್ಲಿ ಹೊಸ ಆಸೆಯೊಂದು ಚಿಗುರೊಡೆದಿದೆ. ಪ್ರತಿಗ್ರಾಮದಲ್ಲೂ ನಿವೇಶನ ನೀಡುವ ಭರವಸೆ ನೀಡುತ್ತಿರುವುದು ಇದಕ್ಕೆ ಕಾರಣವಾಗಿದೆ. ಇದರೊಂದಿಗೆ, ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ವಾಗ್ದಾನ ನೀಡುತ್ತಿರುವ ಹಿನ್ನೆಲೆಯಲ್ಲಿ, ಉಪಚುನಾವಣೆ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ವರದಾನವಾಯಿತು ಎನ್ನುವ ಮಾತುಗಳು ಕೇಳಿಬರುತ್ತಿವೆ.