ಶೈಖುನಾ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್
ಮಂಗಳೂರು : ದ.ಕ.ಜಿಲ್ಲಾ ಖಾಝಿ, ಹಿರಿಯ ಧಾರ್ಮಿಕ ವಿದ್ವಾಂಸ ಶೈಖುನಾ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ (78) ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತದೇಹವನ್ನು ನಗರದ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಸಂಜೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಕಾಸರಗೋಡಿನ ಮಾಲಿಕುದ್ದೀನಾರ್ ಜುಮಾ ಮಸೀದಿಗೆ ಮೃತದೇಹವನ್ನು ಕೊಂಡೊಯ್ದು ಅಲ್ಲೂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು. ನಂತರ ಖಾಝಿ ಅವರ ಮೂಡುಬಿದಿರೆಯ ಸ್ವಗೃಹಕ್ಕೆ ಮೃತದೇಹವನ್ನು ಕೊಂಡೊಯ್ಯಲಾಯಿತು.
ದಾರುನ್ನೂರು ಶಿಕ್ಷಣ ಸಂಸ್ಥೆಯ ಶಿಲ್ಪಿಯೂ ಆಗಿದ್ದ ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್‌ರ ಮೃತದೇಹವನ್ನು ಕಾಸರಗೋಡಿನ ಮಾಲಿಕ್ ದಿನಾರ್ ಜುಮಾ ಮಸೀದಿಯಿಂದ ಬುಧವಾರ ಸುಬಹ್ ನಮಾಝ್ ವೇಳೆಗೆ ಮೂಡುಬಿದಿರೆ ಸಮೀಪದ ಕಾಶಿಪಟ್ಣದ ದಾರುನ್ನೂರು ಎಜುಕೇಶನ್ ಸೆಂಟರ್‌ಗೆ ತರಲಾಗುವುದು. ಬಳಿಕ ಬೆಳಗ್ಗೆ 8 ಗಂಟೆಗೆ ದಾರುನ್ನೂರು ಆವರಣದಲ್ಲಿ ದಫನ ಕ್ರಿಯೆ ನಡೆಯಲಿದೆ.
ಸಮಸ್ತ ವಿದ್ಯಾಭ್ಯಾಸ ಮಂಡಳಿಯ ನಿರ್ದೇಶನದಂತೆ ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲ್ಲಿಮೀನ್‌ನ ದ.ಕ.ಜಿಲ್ಲಾ ಸಮಿತಿಯು ಮಂಗಳವಾರ ರಾತ್ರಿ ಮದ್ರಸಗಳಿಗೆ ರಜೆ ಸಾರಲಾಗಿತ್ತು. ಉಳ್ಳಾಲ ಅರಬಿಕ್ ಟ್ರಸ್ಟ್ ತನ್ನ ಅಧೀನದ ಎಲ್ಲಾ ಮದ್ರಸಗಳಿಗೆ ಮಂಗಳವಾರ ರಾತ್ರಿ ರಜೆ ನೀಡಿ ಗೌರವ ಸಲ್ಲಿಸಲಾಗಿತ್ತು.