ಜಿಲ್ಲೆ

ಡೆಂಗ್ಯು ತಡೆಯಲು ಸಾರ್ವಜನಿಕರಿಗೆ ಮಾಹಿತಿ: ಜಾಗೃತಿ ರಥ ಉದ್ಘಾಟಿಸಿ ಜಿಪಂ ಸಿಇಓ ಡಾ.ಆನಂದ ಇಂಗಿತ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು
ಡೆಂಗ್ಯು ತಡೆಗಟ್ಟಲು ಅದರ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ವಾದ ಮಾಹಿತಿ ನೀಡುವ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ ಕೆ. ತಿಳಿಸಿದರು.
ಡೆಂಗ್ಯು ಬಗ್ಗೆ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಸಂಚರಿಸಲು ರೂಪಿಸಿದ ಡೆಂಗ್ಯು ಜಾಗೃತಿ ರಥಕ್ಕೆ ಸೋಮವಾರ ನಗರದ ಪತ್ರಿಕಾ ಭವನದ ಮುಂಭಾಗ ಚಾಲನೆ ನೀಡಿ ಅವರು ಮಾತನಾಡಿದರು.
ಡೆಂಗ್ಯು ಕೇವಲ ಜ್ವರ ಅಲ್ಲ, ಅದು ಸೋಂಕು ಹೊಂದಿದ ಸೊಳ್ಳೆಯ ಮೂಲಕ ಹರಡುವ ವೈರಸ್ ಜ್ವರ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಅಗತ್ಯವಿದೆ ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ಕುಮಾರ್, ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ.ವೇಣು ಗೋಪಾಲ, ಚುನಾಯಿತ ಅಧ್ಯಕ್ಷ ಡಾ.ರಂಜನ್, ಖಜಾಂಚಿ ಡಾ.ನಂದ ಕಿಶೋರ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಖಜಾಂಚಿ ಪುಷ್ಪ ರಾಜ್ ಬಿ.ಎನ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಕಾರ್ಯ ಕ್ರಮ ನಿರೂಪಿಸಿದರು.

((( ವೃದ್ಧಿಸಿಕೊಳ್ಳುತ್ತಿರುವ ಪ್ರಕರಣಗಳು
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ಅವರು ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಈ ವರ್ಷ ಇಲ್ಲಿಯ ತನಕ 105 ಡೆಂಗ್ಯು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಜುಲೈ ಒಂದೇ ತಿಂಗಳು 40 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.
ಕಳೆದ ವರ್ಷ ಜಿಲ್ಲೆಯಲ್ಲಿ 388 ಡೆಂಗ್ಯು ಪ್ರಕರಣಗಳು ದಾಖಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ ಇದೆ ಅನಿಸಬಹುದು. ಆದರೆ ಈ ವರ್ಷ ಮಳೆ ತಡವಾಗಿ ಆರಂಭವಾಗಿದೆ. ಪತ್ತೆಯಾಗುತ್ತಿರುವ ಪ್ರಕರಣಗಳು ಏರುಗತಿಯಲ್ಲಿವೆ. ಆದ್ದರಿಂದ ಸಾರ್ವಜನಿಕರು ಎಚ್ಚರವಹಿಸುವುದು ಅಗತ್ಯ ಎಂದರು.
ಡೆಂಗ್ಯು ರೋಗ ಬರದಂತೆ ತಡೆಗಟ್ಟಲು ವ್ಯಾಕ್ಸಿನ್ ಇಲ್ಲ. ರೋಗ ಬಂದ ಬಳಿಕ ಒದಗಿಸುವ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಪೂರಕ ಚಿಕಿತ್ಸೆಯಿಂದ ಅಪಾಯ ತಡೆಯಬೇಕು. ಆದ್ದರಿಂದ ಸ್ವಚ್ಚ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಿಕೊಳ್ಳುವ ರೋಗ ಹರಡುವ ಈಡಿಸ್ ಸೊಳ್ಳೆ ಕಚ್ಚದಂತೆ ಮುಂಜಾಗರೂಕತೆ ವಹಿಸಬೇಕು. ಸೊಳ್ಳೆ ಸಂತಾನೋತ್ಪತ್ತಿಯಾಗುವ ಸ್ವಚ್ಛ ನೀರು ಒಂದೇ ಕಡೆ ನಿಲ್ಲುವುದನ್ನು ತಡೆಯಬೇಕು. ಡೆಂಗ್ಯು ರೋಗದ ಜಾಗೃತಿ ರಥ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಅವರು ವಿವರಿಸಿದರು.