ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ
ಪ್ರಾಕೃತಿಕ ವಿಕೋಪಗಳಿಂದ ಅಪಾಯದ ಸಾಧ್ಯತೆ ಇರುವ ಪ್ರದೇಶಗಳನ್ನು ಮುಂದಿನ ಎರಡು ದಿನಗಳಲ್ಲಿ ಗುರುತಿಸಿ ವರದಿ ನೀಡಬೆಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೂಕುಸಿತ, ಮುಳುಗಡೆ ಪ್ರದೇಶ ಸಹಿತ ತೀವ್ರ ಮಳೆಯಿಂದಾಗಿ ದುರಂತ ಘಟನೆಗಳು ನಡೆಯುವ ಸಾಧ್ಯತೆ ಇರುವ ಪ್ರದೇಶಗಳನ್ನು ಮೊದಲೇ ಗುರುತಿಸಬೇಕು. ರೆಡ್ ಅಲರ್ಟ್ ಅವಧಿಯಲ್ಲಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಅಪಾಯಗಳ ಬಗ್ಗೆ ಅಲ್ಲಿನ ನಿವಾಸಿಗಳಿಗೆ ನೋಟಿಸ್ ನೀಡಿ ತಿಳಿಸಬೇಕು. ಸಂಭಾವ್ಯ ಭೂಕುಸಿತ ಅನಾಹುತ ಸ್ಥಳಗಳನ್ನು ಗುರುತಿಸದೆ ಅನಾಹುತ ಸಂಭವಿಸಿದರೆ ಆಯಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರಾಕೃತಿಕ ದುರಂತದಲ್ಲಿ ನಡೆಯುವ ಜೀವಹಾನಿ ತಪ್ಪಿಸುವುದೇ ಮೊದಲ ಆದ್ಯತೆಯಾಗಿದೆ. ಪ್ರಮುಖವಾಗಿ ಜನವಸತಿ ಪ್ರದೇಶ ಮತ್ತು ಮನೆಗಳಲ್ಲಿ ವಾಸಿಸುವ ಸಾರ್ವಜನಿಕರ ರಕ್ಷಣೆ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳು ತಮ್ಮ
ವ್ಯಾಪ್ತಿಯ ಪ್ರತಿಯೊಂದು ಪ್ರದೇಶಕ್ಕೆ ಭೇಟಿ ನೀಡಿ ಸ್ಥೂಲವಾಗಿ ಪರಿಶೀಲಿಸಬೇಕು. ಪ್ರಾಕೃತಿಕ ನೀರಿನ ಹರಿವನ್ನು ತಿರುಗಿಸುವುದು ಕೂಡ ಪ್ರಾಕೃತಿಕ ದುರಂತಗಳಿಗೆ ಕಾರಣವಾಗಬಲ್ಲದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತ ಇರುವ ಜನವಸತಿ ಪ್ರದೇಶಗಳಿಗೆ ವಿಮಾನ ನಿಲ್ದಾಣದಿಂದ ಮಳೆ ನೀರು
ಹರಿಯುವ ಸಮಸ್ಯೆ ಬಗ್ಗೆ ಕ್ರಮಕೈಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ನಾಳೆ ಮಧ್ಯಾಹ್ನದೊಳಗೆ ವರದಿ ನೀಡುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿದರು. ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೆತ್ತಿಕಲ್‌ನಲ್ಲಿ ಭೂಕುಸಿತ ತಡೆಯುವ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ
ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಕಾಮಗಾರಿಗೆ ಕೇಂದ್ರದಿಂದ ಅನುಮೋದನೆ ಸಿಕ್ಕಿದ್ದು ಶೀಘ್ರವೇ ಪ್ರಾರಂಭಿಸಲಾಗುವುದು ಎಂದರು .
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ , ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ , ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ್ ಗೋಯಲ್ ಉಪಸ್ಥಿತರಿದ್ದರು.