ಜಿಲ್ಲೆ

ಎಚ್‌ಡಿಕೆ ಮೇಲಿನ ಸಿಟ್ಟೋ, ತಟ್ಟಿಗೆ ಮರೆ ಏಟೋ... ; ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಮಿಕ ನುಡಿ

ರೇಷ್ಮೆ ನಗರ ಡೆಸ್ಕ್

ಕನಕಪುರ : ಚನ್ನಪಟ್ಟಣದಲ್ಲಿ ಈ ರೀತಿಯ ಸನ್ನಿವೇಷ ಸೃಷ್ಟಿಯಾಗಿರುವುದು ಕಾಂಗ್ರೆಸ್ ಮೇಲಿನ ಪ್ರೀತಿಯೋ ಅಥವಾ ಎಚ್.ಡಿ. ಕುಮಾರಸ್ವಾಮಿ ಮೇಲಿನ ಸಿಟ್ಟೋ ಅಥವಾ ತಟ್ಟಿಗೆ ಮರೆ ಏಟೋ ಎಂಬುವುದನ್ನು ಅವರೇ ಅರ್ಥಮಾಡಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಮಿಕ ನುಡಿದರು.

ನಗರದ ರೂರಲ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಮಹಾ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಎದುರಾಳಿ ಪಕ್ಷದವರನ್ನು ಗುರುತು ಮಾಡಿ ಒಂದಿಷ್ಟು ಮನೆಗೆ ತೆರಳುವ ಪ್ರಯತ್ನ ಮಾಡಿದ್ದರು ಎಂದ ಅವರು, ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಅವರ ಬೂತ್‌ಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತ ಬಿದ್ದಿದೆ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಲಿ, ಎಲ್ಲವನ್ನೂ ನಾನು ಇಲ್ಲಿ ಬಿಚ್ಚಿ ಹೇಳಲು ಸಾಧ್ಯವಿಲ್ಲ ಎಂದರು.

ಎಚ್.ಡಿ. ಕುಮಾರಸ್ವಾಮಿ ಅವರು ಈ ಚುನಾವಣೆಯಲ್ಲಿ ಕಂಗೆಟ್ಟು ಕಾಂಗ್ರೆಸ್ ನಾಯಕರ ಷಡ್ಯಂತ್ರ ಹಾಗೂ ಹಣಬಲದಿಂದ ಸೋಲಾಗಿದೆ ಎಂದು ಹೇಳುತ್ತಾರೆ. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರ ಸಂಬಂಧಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ಗೆಲ್ಲಿಸಿದಾಗ ಯಾವ ಮಾನದಂಡ ಅನುಸರಿಸಿದ್ದರು?. ಆಗ ಯೋಗೇಶ್ವರ್ ಅವರು ಬಿಜೆಪಿಯಲ್ಲಿದ್ದರು, ಅಂದು ಗೆಲುವಾಗಿತ್ತು, ಇಂದೇಕೆ ಆಗಲಿಲ್ಲ ಎಂದು ಪ್ರಶ್ನಿಸಿದರು.

ಎಚ್.ಡಿ. ಕುಮಾರಸ್ವಾಮಿ ಲೋಕಸಭಾ ಸದಸ್ಯರಾದ ದಿನದಿಂದ ಶಾಸಕ ಸ್ಥಾನ ಖಾಲಿಯಾಗಿತ್ತು. ಅಂದಿನಿಂದಲೂ ನಾವು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಈಗ ಪಕ್ಷಕ್ಕೆ ಹೆಚ್ಚಿನ ಬಲಬಂದಿದೆ. ಅದಕ್ಕಾಗಿ ಈ ಜನರ ಋಣ ತೀರಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ, ಯೋಗೇಶ್ವರ್ ಜತೆ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದರು.

ರಾಜ್ಯದ ಅಭಿವೃದ್ಧಿ ಮುಖ್ಯ

ನಾನು ಮುಖ್ಯಮಂತ್ರಿಯಾಗಬೇಕೆಂಬ ಮಾತು ಗೌಣವಾಗಿದೆ. ನಮಗೆ ರಾಜ್ಯದ ಅಭಿವೃದ್ಧಿ ಮುಖ್ಯವಾಗಿದೆ, ಮುಂದೆ ಸಂಪುಟ ಪುನಃರಚನೆ ಮಾಡುವುದು ಊಹಾಪೋಹ. ಇದನ್ನೇನಿದ್ದರೂ ಮುಖ್ಯಮಂತ್ರಿಗಳೇ ತಿಳಿಸಬೇಕು ಎಂದ ಡಿಕೆಶಿ, ಈ ಹಿಂದೆ ಜೆಡಿಎಸ್ ನಾಯಕ ಜಿ.ಟಿ. ದೇವೇಗೌಡ ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ ಎನ್ನುವ ಸುದ್ದಿಗೆ ಪೂರಕವಾಗಿ ಈ ಸುದ್ದಿಯಂತೆಯೇ ಬಹಳಷ್ಟು ಮಂದಿ ಬಿಜೆಪಿಯವರು ಕಾಂಗ್ರೆಸ್ ಸೇರಲು ಬಯಸಿದ್ದಾರೆ ಎಂದರು.

ಮಹಿಳೆಯರ ಸ್ಥಾನ ಹೆಚ್ಚಲಿ : ಸ್ತ್ರೀಶಕ್ತಿಗೆ ಮುನ್ನುಡಿ ಬರೆದಿದ್ದು ಕಾಂಗ್ರೆಸ್. ಸ್ವಾತಂತ್ರ್ಯ ಭಾರತದಲ್ಲಿ ಪೂರ್ವ ಮತ್ತು ನಂತರದ ವಿವಿಧ ಕಾರ್ಯಕ್ರಮಗಳು ಮತ್ತು ನೀತಿಗಳ ಮೂಲಕ ಕಾಂಗ್ರೆಸ್ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಿದೆ. ಮಹಿಳೆಯರ ಸಮಸ್ಯೆ ಪರಿಹರಿಸಲು ಏಕೈಕ ಮಾರ್ಗವೆಂದರೆ ಸಮಾಜದಲ್ಲಿ ಮಹಿಳೆಯರ ಸ್ಥಾನ ಹೆಚ್ಚಿಸಿ ಸಾಮಾಜಿಕ ನ್ಯಾಯ ದೊರಕಿಸುವುದು. ಈ ಹಿನ್ನೆಲೆಯಲ್ಲಿ ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಮಹಿಳಾ ಮಂತ್ರಿ ಮೋಟಮ್ಮ ಹಾಗೂ ಸಹಕಾರ ಸಚಿವನಾಗಿದ್ದ ನಾನು ಸ್ತ್ರೀಯವರ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಸಂಘಗಳಿಗೆ ಮುನ್ನುಡಿ ಬರೆದಿದ್ದೇವು. ಅಂದಿನಿಂದ ಇಂದಿನವರೆಗೂ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಯಶಸ್ವಿ ಹೆಜ್ಜೆ ಹಾಕುತ್ತಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.