ಜಿಲ್ಲೆ

ಅಬ್ಬರದ ಸಂಗೀತಕ್ಕೆ ಅರಿವೇ ಮದ್ದು

ಸುನಿಲ್ ಪೊನ್ನೇಟಿ

ಮಡಿಕೇರಿ:

ಗೌರಿ ಗಣೇಶೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಮಡಿಕೇರಿ ದಸರಾಕ್ಕೂ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಈ ಎರಡೂ ಕಾರ್ಯಕ್ರಮಗಳಲ್ಲೂ ಡಿಜೆ ಅಬ್ಬರ ಇಲ್ಲದಿದ್ದರೆ ಪರಿಪೂರ್ಣ ಆಗುವುದಿಲ್ಲ ಎನ್ನುವುದು ಸಂಘಟಕರ ನಂಬಿಕೆ. ಮತ್ತೊಂದು ಕಡೆ ಅಬ್ಬರದ ಸಂಗೀತದಿAದ ಆಗುವ ಸಮಸ್ಯೆಗಳ ಬಗ್ಗೆ ಅರಿವಿರುವವರು ಇದರ ವಿರುದ್ಧ ಧ್ವನಿ ಎತ್ತುತಲೇ ಇದ್ದಾರೆ. ಈ ಮಧ್ಯೆ ಕೊಡಗು ಪೊಲೀಸ್ ಇಲಾಖೆ ಪರಿಣಾಮಕಾರಿ ಹೆಜ್ಜೆ ಒಂದನ್ನು ಇಟ್ಟಿದ್ದು, ಡಿಜೆ ಬಳಕೆ ಬೇಡ ಎಂದು ಸಮಾಜವೇ ತೀರ್ಮಾನ ತೆಗೆದುಕೊಳ್ಳುವಂತಾಗುವ ನಿಟ್ಟಿನಲ್ಲಿ ಮಾದರಿ ಎನ್ನಬಹುದಾದ ಕಾರ್ಯಕ್ರಮಗಳನ್ನು ರೂಪಿಸಿದೆ.

ಗೌರಿ ಗಣೇಶ ಹಬ್ಬ ಎಂದರೆ ಸಾಕು ಅಲ್ಲಿ ಡಿಜೆ, ಅಬ್ಬರದ ಸಂಗೀತ ಇರಲೇಬೇಕು ಎನ್ನುವ ವಾತಾವರಣ ನಿರ್ಮಾಣ ಆಗಿದೆ. ಮಡಿಕೇರಿ ದಸರಾ ದಶಮಂಟಪಗಳ ಮೆರವಣಿಗೆ ವೇಳೆಯೂ ಇದೇ ಪರಿಸ್ಥಿತಿ ಕಂಡು ಬರುತ್ತದೆ. ಸಾಂಪ್ರದಾಯಿಕ ವಾದ್ಯ ಪರಿಕರಗಳ ಬಳಕೆ, ಭಕ್ತಿಗೀತೆ, ಭಜನೆ, ಹಾಡು, ನೃತ್ಯಗಳ ಜಾಗವನ್ನು ಇತ್ತೀಚಿನ ವರ್ಷಗಳಲ್ಲಿ ಡಿಜೆ ಸಂಗೀತ ಅತಿಕ್ರಮಿಸಿಕೊಂಡಿದೆ. ಅಬ್ಬರದ ಸಂಗೀತ, ಹುಚ್ಚೆದ್ದು ಕುಣಿಯುವದರಲ್ಲಿನ ಪುಳಕ ಇಲ್ಲದಿದ್ದರೆ ಈಗಿನ ಯುವಜನಾಂಗದ ಪಾಲಿಗೆ ಹಬ್ಬ ಅಥವಾ ಆಚರಣೆ ಪರಿಪೂರ್ಣ ಆಗುವುದೇ ಇಲ್ಲವೇನೋ ಎನ್ನುವ ಹಂತ ತಲುಪಿಬಿಟ್ಟಿದೆ.

ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳನ್ನು ಭಾರತದಂತಹ ಸರ್ವದರ್ಮ ಸಹಿಷ್ಣುತೆಯ ದೇಶದಲ್ಲಿ ಯಾರೂ ವಿರೋಧಿಸುವುದಿಲ್ಲ. ಆದರೆ ಇದರ ಹೆಸರಿನಲ್ಲಿ ಮತ್ತೊಬ್ಬರ ಶಾಂತಿ ಅಥವಾ ನೆಮ್ಮದಿಗೆ ಭಂಗ ತರುವುದು ಸರಿಯಲ್ಲ. ಆದರೆ ಆಚರಣೆ ಹೆಸರಿನಲ್ಲಿ ಡಿಜೆ ಬಳಕೆ ಮತ್ತು ಈಗ ಅದರಿಂದ ಆಗುತ್ತಿರುವ ಬೆಳವಣಿಗೆಗಳು ಸರಿಯಲ್ಲ ಎನ್ನುತ್ತಾರೆ ಪ್ರಜ್ಞಾವಂತರು. ಮನುಷ್ಯ ಸೇರಿದಂತೆ ಜೀವ ಸಂಕುಲಕ್ಕೆ ಶಬ್ಧಗಳ ಕೇಳುವಿಕೆಗೆ ಒಂದು ಮಿತಿ ಇರುತ್ತದೆ. ಅದನ್ನು ಮೀರಿದರೆ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಡಿಜೆ ಬಳಕೆ ಸಂದರ್ಭ ಈ ಎಚ್ಚರಿಕೆ ಇರಬೇಕು ಎನ್ನುವುದು ಇವರ ಸಲಹೆ.

ಕಾರ್ಯಕ್ರಮಗಳಲ್ಲಿ ಡಿಜೆ ಬಳಕೆ ನಿಯಂತ್ರಣಕ್ಕೆ ಕೊಡಗು ಪೊಲೀಸ್ ಇಲಾಖೆ ಕೂಡ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಗ್ಗೆ ಸಂಘಟಕರಲ್ಲಿ ಜಾಗೃತಿಯನ್ನೂ ಮೂಡಿಸುತ್ತಾ ಬಂದಿದೆ. ಆದರೂ ಡಿಜೆ ಬಳಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವೇ ಆಗಿಲ್ಲ. ಎಸ್.ಪಿ. ಕೆ. ರಾಮರಾಜನ್ ಕೂಡ ಈ ಸಂಬAಧ ಕಳೆದ 2 ವರ್ಷಗಳಿಂದ ದೊಡ್ಡ ಮಟ್ಟದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಕಾನೂನು ಕ್ರಮಗಳಿಂದ ಮಾತ್ರವಲ್ಲದೆ ವಿಭಿನ್ನ ರೀತಿಯ ಜಾಗೃತಿ ಕಾರ್ಯಕ್ರಮಗಳಿಂದಲೂ ಈ ದಿಸೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.

ಈ ವರ್ಷ ಸಮಾಜದ ವಿವಿಧ ಕ್ಷೇತ್ರದ ಗಣ್ಯರನ್ನು ಬಳಸಿಕೊಂಡು ಜಾಗೃತಿ ಮೂಡಿಸುವ ಅಭಿಯಾನ ನಡೆಸಲಾಗುತ್ತಿದೆ. ಎಸ್.ಪಿ. ಕೆ. ರಾಮರಾಜನ್ ಕಲ್ಪನೆಯಲ್ಲಿ ಸಿದ್ಧವಾಗಿರುವ ಈ ಕಾರ್ಯಕ್ರಮದಲ್ಲಿ ಪ್ರತಿದಿನವೂ ಒಬ್ಬೊಬ್ಬರ ಅಭಿಪ್ರಾಯಗಳ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುತ್ತಿದೆ. ಮನುಷ್ಯನಿಗೆ ಸಹ್ಯವಾಗುವ ಶಬ್ಧದ ಪ್ರಮಾಣ ಎಷ್ಟಿರಬೇಕು ? ಮಿತಿಮೀರಿದ ಶಬ್ಧ ಕಿವಿಗೆ ಅಪ್ಪಳಿಸುವುದರಿಂದ ಏನಾಗುತ್ತದೆ ? ಡಿಜೆ ಮತ್ತು ಅಬ್ಬರದ ಸಂಗೀತದ ಬಳಕೆ ಬಗ್ಗೆ ಕಾನೂನು ಏನು ಹೇಳುತ್ತದೆ ? ಈ ವಿಷಯದಲ್ಲಿ ನಿಯಮ ಮೀರಿದರೆ ಏನಾಗುತ್ತದೆ ? ಹೀಗೆ ಹಲವು ವಿಷಯಗಳನ್ನು ಒಳಗೊಂಡ ತಲಾ 1-1.30 ನಿಮಿಷಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಡಿಜೆ ಮತ್ತು ಅಬ್ಬರದ ಸಂಗೀತಕ್ಕೆ ಸಂಬAಧಿಸಿದAತೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇಎನ್‌ಟಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹೆಚ್.ಜೆ. ಶ್ರೀಕಾಂತ್, ಸಾಹಿತಿಯೂ ಆದ ಮಡಿಕೇರಿಯ ಹಿರಿಯ ವಕೀಲ ಕೆ.ಪಿ. ಬಾಲಸುಬ್ರಹ್ಮಣ್ಯ ಕಂಜರ್ಪಣೆ, ವಿರಾಜಪೇಟೆಯ ಸೀನಿಯರ್ ಫಿಜೀಸಿಯನ್ ಡಾ. ಎಂ.ಸಿ. ಕಾರ್ಯಪ್ಪ, ಕವಿ ಕಾಜೂರು ಸತೀಶ್, ಮಡಿಕೇರಿಯ ವಕೀಲ ಎಂ.ಎ. ನಿರಂಜನ್ ಅವರ ಸಂದೇಶಗಳನ್ನು ಒಳಗೊಂಡ ವೀಡಿಯೋಗಳು ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಇನ್ನೂ ಹಲವು ಗಣ್ಯರ ಸಂದೇಶಗಳು ಪ್ರತಿದಿನವೂ ಬಿತ್ತರವಾಗಲಿದೆ. ಹಿರಿಯ ನಾಗರಿಕರು, ಯುವಕರು, ಮಹಿಳೆಯರು ಮಕ್ಕಳಿಂದಲೂ ಸಂದೇಶಗಳನ್ನು ಪಡೆದುಕೊಂಡಿದ್ದು, ಅವುಗಳನ್ನೂ ಪ್ರಸಾರ ಮಾಡುವ ಚಿಂತನೆ ಕೊಡಗು ಪೊಲೀಸ್ ಇಲಾಖೆ ಹೊಂದಿದೆ. ಡಿಜೆ ಬಳಕೆ ಬೇಡ ಎನ್ನುವ ಮನೋಭಾವ ಸಮಾಜದ ಕಡೆಯಿಂದ ವ್ಯಕ್ತವಾಗಬೇಕು ಎನ್ನುವ ಉದ್ದೇಶ ಈ ಅಭಿಯಾನದ್ದಾಗಿದೆ.

ದಸರಾ ವೇಳೆ ಡಿಜೆ ಮತ್ತು ಅಬ್ಬರದ ಸಂಗೀತದ ಬಳಕೆಯಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ಮಡಿಕೇರಿಯ ಹಿರಿಯ ನಾಗರಿಕರು ಈಗಾಗಲೇ ಹಲವು ಬಾರಿ ಪೊಲೀಸರಲ್ಲಿ ದೂರಿಕೊಂಡಿದ್ದಾರೆ. ದಶಮಂಟಪಗಳ ಮೆರವಣಿಗೆ ಸಂದರ್ಭ ಮಡಿಕೇರಿಯಲ್ಲಿ ಹಲವೆಡೆ ವಯೋವೃದ್ಧರು, ಅನಾರೋಗ್ಯ ಪೀಡಿತರನ್ನು ದೂರದ ಸ್ಥಳಕ್ಕೆ ಕಳುಹಿಸಿದ ಉದಾಹರಣೆಗಳೂ ಇದೆ. ಈ ಹಿಂದಿನ ವರ್ಷ ಮಡಿಕೇರಿ ಜಿಲ್ಲಾಸ್ಪತ್ರೆಯಿಂದಲೂ ಕೆಲವು ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ ಬಗ್ಗೆಯೂ ಸುದ್ದಿ ಆಗಿತ್ತು. ಕಳೆದ ವರ್ಷ ಮೂರ್ನಾಡುವಿನಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ವಾಹನವೊಂದರಲ್ಲಿದ್ದ ನವಜಾತ ಶಿಶು ಮತ್ತು ತಾಯಿ ತಮ್ಮ ಕಣ್ಣೆದುರೇ ಅನುಭವಿಸಿದ ಯಾತನೆಯನ್ನು ಎಸ್‌ಪಿ ಕೆ. ರಾಮರಾಜನ್ ಹಲವು ಕಡೆಗಳಲ್ಲಿ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು.

ನಾವು ಪ್ರತಿನಿತ್ಯ ಸಾಮಾನ್ಯವಾಗಿ ಕೇಳುವ ಶಬ್ಧಗಳು 60-70 ಡೆಸಿಬಲ್ ತನಕ ಇರುತ್ತದೆ. 75 ಡೆಸಿಬಲ್ ತನಕದ ಶಬ್ಧವನ್ನು ಕೇಳುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಡಿಜೆಗಳಲ್ಲಿ 110-120 ಡೆಸಿಬೆಲ್ ತನಕ ಶಬ್ಧ ಬರುತ್ತದೆ. ಇದು ಅನೇಕ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಕಾರ್ಯಕ್ರಮಗಳಲ್ಲಿ ಡಿಜೆ ಬಳಸದಂತೆ ಈ ಹಿಂದಿನಿAದಲೂ ನಮ್ಮ ಇಲಾಖೆಯಿಂದ ಸೂಚನೆ ಕೊಡುತ್ತಲೇ ಬರಲಾಗುತ್ತಿದೆ. ಈ ಬಾರಿ ವೀಡಿಯೋ ಸಂದೇಶಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಡಿಜೆ ಬಳಕೆಯನ್ನು ತಿರಸ್ಕರಿಸಲು ಸಮಾಜವೇ ತೀರ್ಮಾನ ತೆಗೆದುಕೊಳ್ಳುವಂತಾಗುವ ನಿಟ್ಟಿನಲ್ಲಿ ಸಮಾಜದ ಎಲ್ಲಾ ಸ್ತರದ ಜನರಿಂದಲೂ ಸಂದೇಶ ಕೊಡಿಸಲಾಗುತ್ತಿದೆ.

ಕೆ. ರಾಮರಾಜನ್, ಕೊಡಗು ಎಸ್‌ಪಿ

ರೈಲ್ವೇ ಎಂಜಿನ್, ಜನರೇಟರ್ ಶಬ್ಧಗಳು ಸುಮಾರು 90 ಡೆಸಿಬಲ್ ಇರುತ್ತದೆ. ಡಿಜೆ ಶಬ್ಧ 110-120 ಡೆಸಿಬಲ್ ತನಕ ಇರುತ್ತದೆ. ಇಷ್ಟು ಪ್ರಮಾಣದ ಶಬ್ಧ ನಮ್ಮ ಕಿವಿ ತಲುಪಿದಾಗ ತಮಟೆ ತೂತು ಆಗಬಹುದು. ಅಥವಾ ತಮಟೆ ಹಿಂದೆ ಇರುವ ನರದ ಜೀವಕೋಶಗಳು ಸತ್ತುಹೋಗಬಹುದು. 3 ವರ್ಷ ಕೆಳಗಿನ ಮಕ್ಕಳು ಈ ಪ್ರಮಾಣದ ಶಬ್ಧ ಕೇಳಿದರೆ ಅವರಿಗೆ ಕಿವುಡುತನ ಬರುತ್ತದೆ. ಮೂಕತೆಯೂ ಉಂಟಾಗಬಹುದು. ಇಷ್ಟು ಪ್ರಮಾಣದ ಶಬ್ಧದಿಂದ ಹೃದಯ ಸ್ಥಂಭನ ಅಥವಾ ಮೆದುಳಿನ ರಕ್ತಶ್ರಾವವೂ ಆಗಬಹುದು.

ಡಾ. ಹೆಚ್.ಜೆ. ಶ್ರೀಕಾಂತ್, ಸಹಾಯಕ ಪ್ರಾಧ್ಯಾಪಕ, ಇಎನ್‌ಟಿ ವಿಭಾಗ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ

ಧಾರ್ಮಿಕ ಆಚರಣೆಗಳು ಇನ್ನೊಬ್ಬ ವ್ಯಕ್ತಿಯ ಶಾಂತಿ, ನೆಮ್ಮದಿಕೆ ಧಕ್ಕೆ ತರುವಂಥದ್ದಾಗಿರಬಾರದು. ಅದರಲ್ಲೂ ವಯಸ್ಕರಿಗೆ, ಅನಾರೋಗ್ಯದಿಂದ ಬಳಲುತ್ತಿರುವವÀರಿಗೆ, ಗರ್ಭಿಣಿಯರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದು. ವಸತಿ ಪ್ರದೇಶದಲ್ಲಿ 55 ಡೆಸಿಬಲ್, ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಬಲ್ ಹಾಗೂ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಕೋರ್ಟ್ಗಳಂಥ ಸೈಲೆಂಟ್ ಝೋನ್‌ಗಳಲ್ಲಿ ಶಬ್ಧ ಮಾಲಿನ್ಯ ಮಾಡದಂತೆ ಕಾನೂನಿನಲ್ಲಿ ನಿರ್ಬಂಧನೆಗಳನ್ನು ಹೇರಲಾಗಿದೆ. ಈ ನಿರ್ಬಂಧನೆಗಳನ್ನು ಪಾಲನೆ ಮಾಡುವುದು ನಾಗರಿಕರ ಕರ್ತವ್ಯ. ಹಬ್ಬ-ಹರಿದಿನ, ಧಾರ್ಮಿಕ ಆಚರಣೆಗಳು ನಡೆಯಬೇಕು. ಇದರ ಜತೆಗೆ ಕಾನೂನು ಪಾಲನೆ ನಮ್ಮ ಕರ್ತವ್ಯ ಆಗಬೇಕು

ಎಂ.ಎ. ನಿರಂಜನ್, ವಕೀಲರು, ಮಡಿಕೇರಿ

ಯುವಜನತೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುವುದರಿಂದ ಅದರ ಮೂಲಕವೇ ಡಿಜೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಪ್ರಯತ್ನವೇ ಸರಿ. ಕಾನೂನಿನ ಮೂಲಕ ಇವುಗಳನ್ನು ನಿಯಂತ್ರಿಸಬಹುದಾದರೂ ಸ್ವಯಂ ಅರಿವಿನ ಮೂಲಕ ಯುವಜನತೆಯನ್ನು ಡಿಜೆಯಿಂದ ದೂರವಿರಿಸುವ ಪ್ರಯತ್ನವಿದು...

ಕಾಜೂರು ಸತೀಶ್, ಕವಿ