ಮಡಿಕೇರಿ:
ಗೌರಿ ಗಣೇಶೋತ್ಸವಕ್ಕೆ ಇನ್ನುಳಿದಿರುವುದು ಒಂದೇ ದಿನ. ಮಡಿಕೇರಿ ದಸರಾಕ್ಕೂ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಈ ಎರಡೂ ಕಾರ್ಯಕ್ರಮಗಳಲ್ಲೂ ಡಿಜೆ ಅಬ್ಬರ ಇಲ್ಲದಿದ್ದರೆ ಪರಿಪೂರ್ಣ ಆಗುವುದಿಲ್ಲ ಎನ್ನುವುದು ಸಂಘಟಕರ ನಂಬಿಕೆ. ಮತ್ತೊಂದು ಕಡೆ ಅಬ್ಬರದ ಸಂಗೀತದಿAದ ಆಗುವ ಸಮಸ್ಯೆಗಳ ಬಗ್ಗೆ ಅರಿವಿರುವವರು ಇದರ ವಿರುದ್ಧ ಧ್ವನಿ ಎತ್ತುತಲೇ ಇದ್ದಾರೆ. ಈ ಮಧ್ಯೆ ಡಿಜೆ ಬಳಕೆ ವಿರುದ್ಧ ಜಾಗೃತಿ ಮೂಡಿಸಲು ಕೊಡಗು ಪೊಲೀಸ್ ಇಲಾಖೆ ಪರಿಣಾಮಕಾರಿ ಹೆಜ್ಜೆ ಇಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಬಹುತೇಕ ಆಚರಣೆಗಳಲ್ಲಿ ಸಾಂಪ್ರದಾಯಿಕ ವಾದ್ಯ ಪರಿಕರಗಳ ಬಳಕೆ, ಭಕ್ತಿಗೀತೆ, ಭಜನೆ, ಹಾಡು, ನೃತ್ಯಗಳ ಜಾಗವನ್ನು ಡಿಜೆ ಸಂಗೀತ ಅತಿಕ್ರಮಿಸಿಕೊಂಡಿದೆ. ಅಬ್ಬರದ ಸಂಗೀತ, ಹುಚ್ಚೆದ್ದು ಕುಣಿಯುವದರಲ್ಲಿನ ಪುಳಕ ಇಲ್ಲದಿದ್ದರೆ ಈಗಿನ ಯುವಜನಾಂಗದ ಪಾಲಿಗೆ ಹಬ್ಬ ಅಥವಾ ಆಚರಣೆ ಪರಿಪೂರ್ಣ ಆಗುವುದೇ ಇಲ್ಲವೇನೋ ಎನ್ನುವ ಹಂತ ತಲುಪಿಬಿಟ್ಟಿದೆ. ಆದರೆ ಆಚರಣೆ ಹೆಸರಿನಲ್ಲಿ ಡಿಜೆ ಬಳಕೆ ಮತ್ತು ಈಗ ಅದರಿಂದ ಆಗುತ್ತಿರುವ ಬೆಳವಣಿಗೆಗಳು ಸರಿಯಲ್ಲ ಎನ್ನುತ್ತಾರೆ ಪ್ರಜ್ಞಾವಂತರು. ಮನುಷ್ಯ ಸೇರಿದಂತೆ ಜೀವ ಸಂಕುಲಕ್ಕೆ ಶಬ್ದಗಳ ಕೇಳುವಿಕೆಗೆ ಒಂದು ಮಿತಿ ಇರುತ್ತದೆ. ಅದನ್ನು ಮೀರಿದರೆ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಡಿಜೆ ಬಳಕೆ ಸಂದರ್ಭ ಈ ಎಚ್ಚರಿಕೆ ಇರಬೇಕು ಎನ್ನುವ ಸಲಹೆ ವ್ಯಕ್ತವಾಗುತ್ತಿದೆ.
ಕಾರ್ಯಕ್ರಮಗಳಲ್ಲಿ ಡಿಜೆ ಬಳಕೆ ನಿಯಂತ್ರಣಕ್ಕೆ ಕೊಡಗು ಪೊಲೀಸ್ ಇಲಾಖೆ ಕೂಡ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಗ್ಗೆ ಸಂಘಟಕರಲ್ಲಿ ಜಾಗೃತಿಯನ್ನೂ ಮೂಡಿಸುತ್ತಾ ಬಂದಿದೆ. ಆದರೂ ಡಿಜೆ ಬಳಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವೇ ಆಗಿಲ್ಲ. ಎಸ್.ಪಿ. ಕೆ. ರಾಮರಾಜನ್ ಕೂಡ ಈ ಸಂಬAಧ ಕಳೆದ 2 ವರ್ಷಗಳಿಂದ ದೊಡ್ಡ ಮಟ್ಟದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಕಾನೂನು ಕ್ರಮಗಳಿಂದ ಮಾತ್ರವಲ್ಲದೆ ವಿಭಿನ್ನ ರೀತಿಯ ಜಾಗೃತಿ ಕಾರ್ಯಕ್ರಮಗಳಿಂದಲೂ ಈ ದಿಸೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಡಿಜೆ ಬಳಕೆ ಮೇಲೆ ನಿರ್ಬಂಧ ವಿಧಿಸಿರುವುದು ನಿಜಕ್ಕೂ ಸ್ವಾಗತಾರ್ಹ. ಹಬ್ಬ ಹರಿದಿನಗಳ ಆಚರಣೆ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರಬೇಕು. ಪಾಶ್ಚಾತ್ಯ ಸಂಸ್ಕೃತಿಯ ಡಿಜೆ ಬಳಕೆ ಮಾಡುವುದರಿಂದ ಪಾರಂಪರಿಕ ಓಲಗ, ಡೊಳ್ಳು ಕುಣಿತ, ತಮಟೆ ಮುಂತಾದ ಜಾನಪದ ಕಲಾತಂಡಗಳಿಗೆ ಕೆಲಸ ದೊರಕದೆ ಹೋಗುತ್ತದೆ. ಆದ್ದರಿಂದ ಆದಷ್ಟು ಗೌರಿ ಗಣೇಶ ಹಾಗೂ ದಸರಾಗಳಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಾದ್ಯಗೋಷ್ಠಿಗಳಿಗೆ ಅವಕಾಶ ನೀಡಿ ಅವರನ್ನು ಬೆಳೆಸಿ ಅವರ ಜೀವನಕ್ಕೂ ನೆರವಾಗೋಣ.
ರಾಘವ್ ಶ್ರೀನಿವಾಸ, ವಿರಾಜಪೇಟೆ
ಡಿಜೆ ಬಳಕೆ ಮನುಷ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದರಲ್ಲಿಯೂ ಬಾಲ್ಯಾವಸ್ಥೆಯಲ್ಲಿರುವ ಮಕ್ಕಳು ರೋಗಿಗಳು ಹಾಗೂ ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಡಿಜೆಗೆ ಲಕ್ಷ ಲಕ್ಷ ಹಣ ವ್ಯಯ ಮಾಡುವ ಬದಲು ಇತರ ಓಲಗ , ತಮಟೆ , ಡೋಲಿನಂತಹ ವಾದ್ಯಗೋಷ್ಠಿಗಳನ್ನು ಬಳಸುವುದರಿಂದ ಅವರ ಜೀವನ ನಡೆಯಲು ಸಹಕಾರಿ ಆಗುತ್ತದೆ.
ಜಯಮ್ಮ, ಕಲ್ಲುಬಾಣೆ, ವಿರಾಜಪೇಟೆ
ಗಣೇಶೋತ್ಸವ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು. ನಮ್ಮ ಸಂಸ್ಕೃತಿಯನ್ನ ಬಿಂಬಿಸುವ ಅನೇಕ ವಾದ್ಯಗಳಿವೆ. ಕಲಾ ತಂಡಗಳಿವೆ. ಮೆರವಣಿಗೆಯಲ್ಲಿ ಅವುಗಳನ್ನು ಉಪಯೋಗಿಸಿ ಕೊಳ್ಳಬೇಕು. ಭೀಕರ ಡಿಜೆ ಸೌಂಡ್ ಸಹಿಸಿಕೊಳ್ಳುವುದು ಅಸಾಧ್ಯದ ಮಾತು. ಡಿಜೆ ಇಲ್ಲದೆ ಅರ್ಥಪೂರ್ಣವಾಗಿ ಗಣೇಶೋತ್ಸವ ನೋಡುವುದೇ ಒಂದು ಸೌಭಾಗ್ಯ.
ಹೆಚ್.ಎ. ನಾಗರಾಜು, ಅಧ್ಯಕ್ಷ, ಇಂದಿರಾ ಗಾಂಧಿ ಅಭಿಮಾನಿಗಳ ಸಂಘ, ಸೋಮವಾರಪೇಟೆ
ಡಿಜೆ ಬಳಕೆ ಮಾಡುವುದು ಈ ಹಿಂದಿನ ಸಂಪ್ರದಾಯವನ್ನು ಮರೆಯುವಂತೆ ಮಾಡುತ್ತಿದೆ. ನಾವು ಈ ಹಿಂದಿನ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು. ಇಂದು ದೇವರ ಹೆಸರಿನಲ್ಲಿ ನಾವು ಡಿಜೆ ಸೌಂಡ್ ಬಳಸಿಕೊಂಡು ಧಾರ್ಮಿಕ ನಂಬಿಕೆಯನ್ನೇ ಮರೆಯುತ್ತಿದ್ದೇವೆ. ಇದರಿಂದ ಶಬ್ದ ಮಾಲಿನ್ಯ ಆರೋಗ್ಯದ ಮೇಲೆ ದುಷ್ಪÀ್ಪರಿಣಾಮ ಬಿರುತ್ತಿದ್ದು ಅನೇಕರು ಈ ಶಬ್ದದಿಂದ ಸಾವನ್ನಪ್ಪಿರುವ ನಿದರ್ಶನಗಳಿವೆ. ಅಧಿಕಾರಿಗಳು ಡಿಜೆ ಬಳಸಿರುವ ಸಮಿತಿಯ ಮೇಲೆ ಕ್ರಮ ಕೈಗೊಳ್ಳುವ ಮೊದಲು ಕಾರ್ಯಕ್ರಮ ಆಯೋಜನೆ ಮಾಡುವ ಸಮಿತಿಯವರು ಡಿಜೆ ಬಳಕೆಯನ್ನು ಮಾಡದಿರೋದು ಒಳ್ಳೆಯದು.
ಕೆ.ಪಿ. ಜಯಕುಮಾರ್, ಶಿಕ್ಷಕರು, ಶನಿವಾರಸಂತೆ
ಹಬ್ಬದ ವಾತಾವರಣಕ್ಕೆ ಮೆರುಗು ಕೊಡುವುದನ್ನು ಬಿಟ್ಟು ಭಕಿ ಬಾಂಧವ್ಯಗಳನ್ನು ಮರೆತು ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರು, ಚಿಕ್ಕ ಮಕ್ಕಳಿಗೆ ಸಮಸ್ಯೆ ಆಗುವಂತೆ ಮಾಡುವುದಲ್ಲದೆ ವಾತಾವರಣವೂ ಕಲುಷಿತವಾಗುವಂತೆ ಮಾಡುವಲ್ಲಿ ಡಿಜೆ ಬಳಕೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತಿದೆ. ನಮ್ಮ ಹಿಂದಿನ ಪೀಳಿಗೆ ಯಾವ ರೀತಿಯಲ್ಲಿ ಹಬ್ಬಾಚರಣೆ ಮಾಡುತ್ತಿದ್ದರೋ ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲೂ ಹಬ್ಬದ ಸಂಭ್ರಮ ಪಸರಿಸಬೇಕಿದೆ. ಹೊಸ ಚಿಗುರು, ಹಳೇ ಬೇರು ಕೂಡಿರಲು ಮರ ಸೊಬಗು ಎನ್ನುವಂತೆ ಇದೇ ರೀತಿಯ ಕಟ್ಟುನಿಟ್ಟಿನ ಕ್ರಮಗಳು ಮುಂದುವರಿಯಲಿ.
ಕೋಟೇರ ಝಾನ್ಸಿ ಮಂದಪ್ಪ, ನೆಲಜಿ ಗ್ರಾಮ, ನಾಪೋಕ್ಲು
ಶಬ್ದ ಮಾಲಿನ್ಯ ಮನುಷ್ಯರಿಗೆ ಮಾತ್ರ ಹಾನಿಕಾರಕ ಆಗಿರುವುದಿಲ್ಲ. ನಮ್ಮ ಸುತ್ತಲಿನ ಸೂಕ್ಷö್ಮ ಪರಿಸರದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಹೆಚ್ಚಿನ ಶಬ್ದ ಬಳಕೆ ವೇಳೆ ಎಚ್ಚರಿಕೆ ಅಗತ್ಯ. ಸಂಪ್ರದಾಯದAತೆ ಆಚರಣೆಗಳನ್ನು ಮಾಡುವುದರಿಂದಲೂ ಹಬ್ಬದ ಸಂಭ್ರಮ ಕಳೆಗಟ್ಟುತ್ತದೆ. ನಮ್ಮ ಸಾಂಸ್ಕೃತಿಕ, ಜಾನಪದೀಯ ಕಲೆಗಳನ್ನೂ ಹಬ್ಬಾಚರಣೆ ವೇಳೆ ಬಳಸಿಕೊಳ್ಳಬಹುದು. ಈ ಮೂಲಕ ಪರಿಸರ ಸ್ನೇಹಿ ಆಚರಣೆಗಳಿಗೆ ನಮ್ಮ ಕೊಡುಗೆ ಕೊಡಬಹುದು. ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟೋಣ.
ಟಿ.ಜಿ. ಪ್ರೇಮಕುಮಾರ್, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಶಿಕ್ಷಕ
ದಸರಾ ವೇಳೆ ಡಿಜೆ ಶಬ್ದ ಕೇಳಿದರೆ ಮಾತ್ರ ಅಲ್ಲೊಂದು ಹಬ್ಬದ ವಾತಾವರಣ ಸೃಷ್ಟಿ ಆಗುವುದು. ಈ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ಡೆಸಿಬಲ್‌ನಷ್ಟೇ ಡಿಜೆ ಬಳಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪೂರಕ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ಮಡಿಕೇರಿ ದಸರಾದಲ್ಲಿ ದಶಮಂಟಪಗಳೇ ಪ್ರಮುಖ ಆಕರ್ಷಣೆ. ಇಲ್ಲಿ ಪೌರಾಣಿಕ ಕಥಾ ಹಂದರ ಪ್ರಸ್ತುಪಡಿಸಲಿ ಡಿಜೆ ಬೇಕೇ ಬೇಕು. ಹಾಗಾಗಿ ಇಲಾಖೆಯ ನಿಯಮಗಳ ಜತೆಗೆ ಘರ್ಷಣೆ ಆಗದ ರೀತಿಯಲ್ಲಿ ಡಿಜೆ ಬಳಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಿ.ಕೆ. ಅರುಣ್ ಕುಮಾರ್, ಕಾರ್ಯಾಧ್ಯಕ್ಷ, ಮಡಿಕೇರಿ ದಸರಾ ಸಮಿತಿ
ಈಚೆಗೆ ಕಾರ್ಯಕ್ರಮಗಳಲ್ಲಿ ಡಿಜೆ ಬಳಕೆ ಹೆಚ್ಚಾಗುತ್ತಿದೆ. ಡಿಜೆ ಅಬ್ಬರದ ಎದುರು ಸಾಂಪ್ರದಾಯಿಕ ಕಲಾಪ್ರಕಾರಗಳು ಮಂಕಾದAತೆ ಕಂಡುಬರುತ್ತಿದೆ. ಡಿಜೆ ಇದ್ದರೆ ಕಾರ್ಯಕ್ರಮಗಳ ಸಂಭ್ರಮ ಹೆಚ್ಚಾಗುತ್ತದೆ ನಿಜ. ಆದರೆ ಎಲ್ಲವೂ ಇತಿ ಮಿತಿಯಲ್ಲಿ ಇದ್ದರೆ ಚೆಂದ. ಇನ್ನೊಬ್ಬರಿಗೆ ಸಮಸ್ಯೆ ಆಗದಂತೆ ಡಿಜೆ ಬಳಕೆ ಆಗಲಿ. ಹಬ್ಬದ ಸಂಭ್ರಮವೂ ಕಳೆಗಟ್ಟಲಿ. ಈ ನಿಟ್ಟಿನಲ್ಲಿ ಪೊಲೀಸರು ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮ ಸ್ವಾಗತಾರ್ಹ.
ಬಬೀಂದ್ರ ಪ್ರಸಾದ್, ಮುಖ್ಯಸ್ಥರು, ಭಾರವಿ ಕನ್ನಡ ಸಂಘ, ಕುಶಾಲನಗರ
ನಾವು ಪ್ರತಿನಿತ್ಯ ಸಾಮಾನ್ಯವಾಗಿ ಕೇಳುವ ಶಬ್ದ 60-70 ಡೆಸಿಬಲ್ ತನಕ ಇರುತ್ತದೆ. 75 ಡೆಸಿಬಲ್ ತನಕದ ಶಬ್ದ ಕೇಳುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಡಿಜೆಗಳಲ್ಲಿ 110-120 ಡೆಸಿಬೆಲ್ ತನಕ ಶಬ್ದ ಬರುತ್ತದೆ. ಇದು ಅನೇಕ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಕಾರ್ಯಕ್ರಮಗಳಲ್ಲಿ ಡಿಜೆ ಬಳಸದಂತೆ ಈ ಹಿಂದಿನಿAದಲೂ ನಮ್ಮ ಇಲಾಖೆಯಿಂದ ಸೂಚನೆ ಕೊಡುತ್ತಲೇ ಬರಲಾಗುತ್ತಿದೆ. ಈ ಬಾರಿ ವೀಡಿಯೋ ಸಂದೇಶಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಡಿಜೆ ಬಳಕೆಯನ್ನು ತಿರಸ್ಕರಿಸಲು ಸಮಾಜವೇ ತೀರ್ಮಾನ ತೆಗೆದುಕೊಳ್ಳುವಂತಾಗಬೇಕು.
ಕೆ. ರಾಮರಾಜನ್, ಕೊಡಗು ಎಸ್‌ಪಿ