ಹಾಸನ: ನಗರದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಎಲ್ಲ ರಸ್ತೆಗಳು ಜನ ದಟ್ಟಣೆಯಿಂದ ಕೂಡಿದೆ. ಬಟ್ಟೆ ಅಂಗಡಿ, ವಾಹನ ಶೋ ರೂಂ, ಆಭರಣ ಮಳಿಗೆಗಳಲ್ಲಿ, ಉಡುಗೊರೆ ಮಳಿಗೆಗಳಲ್ಲಿ ಖರೀದಿ ಜೋರಾಗಿದೆ.
ಅಲಂಕಾರಿಕ ಸಾಮಗ್ರಿಗಳು, ಪಟಾಕಿ ಅಂಗಡಿಗಳಲ್ಲಿ ಜನದಟ್ಟಣೆ ಸಾಕಷ್ಟಿದೆ. ವ್ಯಾಪಾರಿಗಳು ಅಂಗಡಿ ಮುಂಗಟ್ಟು ಸ್ವಚ್ಛಗೊಳಿಸಿ ಅಲಂಕಾರ ಮಾಡಿದ್ದರು. ಕೆಲವು ಅಂಗಡಿ-ಮಳಿಗೆಗಳಲ್ಲಿ ಪೂಜೆ ಸಲ್ಲಿಸಲಾಯಿತು.
ಗ್ರಾಹಕರನ್ನು ಸೆಳೆಯಲು ವರ್ತಕರು ವಿವಿಧ ರೀತಿಯ ರಿಯಾಯಿತಿಗಳನ್ನು ಘೋಷಿಸಿದ್ದಾರೆ. ರಸ್ತೆಗಳಲ್ಲಿ ಸಂಜೆ ವೇಳೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಜನರು ಓಡಾಡುವುದು ಕಷ್ಟಸಾಧ್ಯವಾಗಿದೆ. ದೀಪಾವಳಿಗೆ ಹೊಸ ಬಟ್ಟೆ ಖರೀದಿಗೆ ಗ್ರಾಹಕರು ಮುಂದಾಗಿದ್ದಾರೆ. ಹೊಸ ಹೊಸ ವಿನ್ಯಾಸದ ಹಾಗೂ ಸಾಂಪ್ರದಾಯಿಕ ಶೈಲಿಯ ಬಟ್ಟೆಗಳನ್ನು ಹಾಗೂ ಗೃಹೋಪಯೋಗಿ ವಸ್ತುಗಳ ಖರೀದಿಗೆ ಜನ ಮುಂದಾಗಿದ್ದಾರೆ.
ದೀಪಾವಳಿ ಪ್ರತಿನಿಧಿಸುವ ಮಣ್ಣಿನ ಹಣತೆಗಳ ಮಾರಾಟಕ್ಕಾಗಿ ನಗರದಲ್ಲಿ ರಸ್ತೆ ಬದಿ ಮಳಿಗೆಗಳು ಸಿದ್ಧವಾಗಿವೆ. ಪುಟ್ಟ ಸಾಂಪ್ರದಾಯಿಕ ತರಹೇವಾರಿ ಬಣ್ಣ, ವಿನ್ಯಾಸದ ದೀಪಗಳು ಆಕರ್ಷಿಸುತ್ತಿವೆ. ಮನೆಗಳು, ಅಂಗಡಿಗಳ ಎದುರು ಅಳವಡಿಸಲಾಗುವ ಆಕಾಶಬುಟ್ಟಿಗಳು ಎಲ್ಲೆಡೆ ರಾರಾಜಿಸುತ್ತಿವೆ. ಬಣ್ಣ ಬಣ್ಣದ ರಂಗೋಲಿ, ಅಲಂಕಾರಿಕ ವಸ್ತುಗಳು, ಪಟಾಕಿಗಳು ಸೇರಿದಂತೆ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಶೃಂಗಾರಗೊಂಡಿದೆ.
ಹೂ-ಹಣ್ಣು ಖರೀದಿ ಜೋರು: ಹಬ್ಬದ ಹಿನ್ನೆಲೆ ಹೂವು ಹಣ್ಣು ಖರೀದಿ ಜೋರಾಗಿದೆ. ನಗರದ ಕಟ್ಟಿನ ಕೆರೆ ಮಾರುಕಟ್ಟೆ, ಮಹಾವೀರ ವೃತ್ತ, ಡೇರಿ ಸರ್ಕಲ್ ಸೇರಿದಂತೆ ವಿವಿಧೆಡೆ ವ್ಯಾಪಾರ ಜೋರಾಗಿ ನಡೆಯುತ್ತಿದೆ. ರಸ್ತೆ ಬದಿಯಲ್ಲಿ ಹೂ-ಹಣ್ಣು, ಬಾಳೆಕಂದು, ಮಾವಿನ ಎಲೆ ಮಾರಾಟ ಮಾಡಲಾಗುತ್ತಿದೆ.
ಸೇವಂತಿಗೆ ಒಂದು ಮಾರಿಗೆ 50 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಚೆಂಡು ಹೂ ಮಾರು 70 ರೂ. ಹಾಗೂ ಗುಡ್ಡೆ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. ಬಾಳೆ ಕಂದು ಜೋಡಿ 40 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಸೇಬು ಕೆ.ಜಿ.ಗೆ 150 ರೂ. ದಾಳಿಂಬೆ ಕೆಜಿಗೆ 100 ರೂ. ಮೂಸಂಬಿ ಕೆ.ಜಿ. 50 ರೂ., ಬಾಳೆ ಹಣ್ಣು ಕೆ.ಜಿ. 80 ರೂ.ನಂತೆ ಮಾರಾಟ ಮಾಡಲಾಗುತ್ತಿದೆ.
ಪಟಾಕಿ ಮಾರಾಟಕ್ಕೆ ಮಳೆ ಅಡ್ಡಿ: ದೀಪಾವಳಿಯಲ್ಲಿ ಪ್ರಮುಖವಾಗಿ ಆಕರ್ಷಿಸುವ ಪಟಾಕಿ ಮಾರಾಟಕ್ಕೆ ಈ ಬಾರಿ ಮಳೆ ಅಡ್ಡಿಯಾಗಿದೆ. ಹಾಸನ ಜಿಲ್ಲೆಯಲ್ಲಿ ಪ್ರತಿ ಬಾರಿ ನಗರದ ಸಾರಿಗೆ ಬಸ್ ನಿಲ್ದಾಣದ ಬಳಿ ಪಟಾಕಿ ಮಳಿಗೆ ಹಾಕಲಾಗುತ್ತಿತ್ತು. ಈ ಬಾರಿ ಎಸ್.ಎಂ. ಕೃಷ್ಣ ಬಡಾವಣೆಯಲ್ಲಿ ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತದಿಂದ ಸ್ಥಳ ನಿಗದಿ ಮಾಡಲಾಗಿದೆ. ಪಟಾಕಿ ಮಾರಾಟ ಮಳಿಗೆ ಜಾಗ ಮಳೆಯಿಂದ ಕೆಸರು ಗದ್ದೆಯಂತಾಗಿದೆ. ಗ್ರಾಹಕರು ತಿರುಗಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಅಲ್ಲದೆ ಮೂರ್ನಾಲ್ಕು ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜನರು ಹೊರಗೆ ಓಡಾಡಲು ಕಷ್ಟಸಾಧ್ಯವಾಗಿದೆ. ಮಳೆ ಹಬ್ಬದ ಸಂಭ್ರಮ ಕಸಿದುಕೊಂಡಂತೆ ಭಾಸವಾಗುತ್ತಿದೆ.
ಮಳೆ ಹೆಚ್ಚಾಗಿದ್ದರಿಂದ ಜನರು ಪಟಾಕಿಯ ಮೇಲಿನ ಉತ್ಸಾಹ ಕಡಿದುಕೊಂಡಂತೆ ಭಾಸವಾಗುತ್ತಿದೆ. ಕೆಲವರು ಮಳೆಯ ನಡುವೆಯೂ ಪಟಾಕಿ ಖರೀದಿಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿತು.