ಜಿಲ್ಲೆ

ಜಿಲ್ಲಾದ್ಯಂತ ದೀಪಾವಳಿ ಸಡಗರ

ಸುಭಾಸ ಹೆಗಡೆ ಧೂಪದಹೊಂಡ

ಶಿರಸಿ: ಕೃಷಿಕರ ಪಾಲಿನ ದೊಡ್ಡ ಹಬ್ಬ ದೀಪಾವಳಿಯನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನರಕ ಚತುದರ್ಶಿಯಂದು ಸ್ಥಾಪನೆ ಮಾಡಲಾದ ಬಲೀಂದ್ರನನ್ನು ಬಲಿಪಾಡ್ಯಮಿಯಂದು ವಿಸರ್ಜನೆ ಮಾಡುವ ಮೂಲಕ ದೀಪಾವಳಿ ಹಬ್ಬ ಮುಕ್ತಾಯಗೊಂಡಿತು.

ಹಬ್ಬದ ಆಚರಣೆಯಲ್ಲಿ ಮೊದಲು ನರಕಚತುದರ್ಶಿ, ಲಕ್ಷ್ಮೀ ಪೂಜೆಯ ಸಂಭ್ರಮವಾದರೆ ನಂತರ ಬಲಿಪಾಡ್ಯಮಿ ಸಡಗರ. ಈ ಬಾರಿ ಮಲೆನಾಡ ಭಾಗದಲ್ಲಿ ಎರಡು ದಿನ ಮಾತ್ರ ಹಬ್ಬ ನಡೆದಿದೆ. ಭಾನುವಾರ ಬಲಿಪಾಡ್ಯಮಿ ಅಂಗವಾಗಿ ಗ್ರಾಮೀಣ ಭಾಗದಲ್ಲಿ ವಿಶೇಷ ಪೂಜೆ ಜರುಗಿತು. ಆಯುಧ ಪೂಜೆ, ಲಕ್ಷ್ಮೀ ಪೂಜೆ, ಗೋಪೂಜೆ, ಮನೆಯ ಹೊಸ್ತಿಲು, ಜಮೀನುಗಳ ಸುತ್ತಲಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಊರಿನ ಜನರೆಲ್ಲ ಸೇರಿ ಊರಿನ ಕಟ್ಟೆ ದೇವರು, ಹುಲಿ ದೇವರು, ಗ್ರಾಮ ದೇವತೆಗೆ ಪೂಜೆ ಸಲ್ಲಿಸುವ ವಿಶೇಷ ಸಂಪ್ರದಾಯ ನೆರವೇರಿತು. ಬಲಿಪಾಡ್ಯ ವಿಶೇಷತೆಯಾಗಿ ರೈತರ ಜೀವನಾಡಿಯಾದ ಗೋವುಗಳಿಗೆ ಪೂಜೆ ಮಾಡಲಾಯಿತು. ಪಶುಸಂಪತ್ತನ್ನು ರಕ್ಷಿಸಬೇಕು ಎಂದು ಕೃಷಿಕರು ಹುಲಿದೇವರಿಗೆ ಪೂಜೆ ಸಲ್ಲಿಸಿ, ಬಾಲಕ್ಕೊಂದು ತೆಂಗಿನಕಾಯಿಯ ನೈವೇದ್ಯವನ್ನು ಹುಲಿದೇವರಿಗೆ ಅರ್ಪಿಸಲಾಯಿತು.

ಹಸುಗಳನ್ನು ಗೋಮಾಳಕ್ಕಟ್ಟಿ ಚೌಲದೆತ್ತುಗಳ ಪಾದತೊಳೆದು, ಹಾನಬಳಿದು ಕೊಟ್ಟಿಗೆ ತುಂಬಿಸಿಕೊಳ್ಳುವ ಪದ್ಧತಿ ಸಾಂಗವಾಗಿ ನೆರವೇರಿತು. ಪ್ರತಿವರ್ಷ ಪೂಜೆ ಮಾಡುವ ಹಸುವನ್ನು ಅಡಕೆಯ ಸರ, ಚಂಡುಹೂವು, ಅಡಕೆ ಸಿಂಗಾರ, ಕೆಮ್ಮಣ್ಣು, ಶೇಡಿಗಳಿಂದ ಶೃಂಗರಿಸಲಾಗಿತ್ತು. ಸೌತೆಕಾಯಿಯಿಂದ ತಯಾರಿಸಿದ ವಿಶೇಷ ಸಿಹಿ ಅಡುಗೆಯ ಕಡುಬು, ಹೋಳಿಗೆ, ಹುಗ್ಗಿ ಅನ್ನದ ಸುಗ್ರಾಸ ಭೋಜನ ನೀಡಿ, ಹಾಡಿನ ಸೇವೆಗೈದು ಭಕ್ತಿಭಾವದಿಂದ ಮಹಿಳೆಯರು ಪೂಜೆ ಸಲ್ಲಿಸಿದರು. ಕೃಷಿಕರ ಮನೆಗಳಲ್ಲಿ ಗೋಪೂಜೆ ಮುಗಿಯುವವರೆಗೂ ಉಪವಾಸ ವ್ರತ ಆಚರಿಸಿದರು. ಪೂಜೆಯ ನಂತರ ಹೊಸ ಉಡುಗೆಯುಟ್ಟು ಬೂರೆ ಹಬ್ಬದಂದು ತಯಾರಿಸಿದ ಬೂರೆಕಪ್ಪನ್ನು ಮನೆಯ ಹಿರಿಕಿರಿಯರೆಲ್ಲ ಹಚ್ಚಿಕೊಂಡರು. ನಂತರ ಊರ ದೇವಸ್ಥಾನಕ್ಕೆ ತೆರಳಿ ಸಾಮೂಹಿಕ ಪೂಜೆ ನಡೆಸಲಾಯಿತು.

ವಾಲಗಳ್ಳಿಯಲ್ಲಿ ಬೂದೆ ಹಬ್ಬದ ತೋರಣ

ಕುಮಟಾ: ತಾಲೂಕಿನ ವಾಲಗಳ್ಳಿಯಲ್ಲಿ ದೀಪಾವಳಿ ಹಾಗೂ ಬೂದೆ ಹಬ್ಬವನ್ನು ಹಾಲಕ್ಕಿ ಸಮಾಜದವರು ಸಾಂಪ್ರದಾಯಿಕವಾಗಿ ಉತ್ಸಾಹದಿಂದ ಆಚರಿಸಿದರು.

ದೀಪಾವಳಿ ಹಬ್ಬದಲ್ಲಿ ವಾಲಗಳ್ಳಿಯ ಹಾಲಕ್ಕಿಗಳು ಬೂದೆ ಹಬ್ಬವಾಗಿ ವಿಶಿಷ್ಟವಾಗಿ ಆಚರಿಸುತ್ತಾರೆ. ಊರಿನ ಪ್ರತಿಯೊಂದು ಮನೆಯಿಂದ ಅಡಕೆ, ತೆಂಗು, ಬಾಳೆ ಮುಂತಾದವನ್ನು ಸಂಗ್ರಹಿಸಿ ಊರಿನ ಮುಖ್ಯ ರಸ್ತೆಯಲ್ಲಿ ಬೃಹತ್ ಚಪ್ಪರತೋರಣಕ್ಕೆ ಸಿಂಗರಿಸುತ್ತಾರೆ. ಮೇಲಿನ ವಾಲಗಳ್ಳಿಯವರು ಹಾಗೂ ಕೆಳಗಿನ ವಾಲಗಳ್ಳಿ ಪ್ರದೇಶದವರು ವರ್ಷಬಿಟ್ಟು ವರ್ಷಕ್ಕೊಮ್ಮೆ ತೋರಣ ಕಟ್ಟುವ ಸಂಪ್ರದಾಯ ರೂಢಿಯಲ್ಲಿದೆ. ಊರಿನವರೆಲ್ಲ ಸೇರಿ ಗೋ ಕ್ರೀಡೆಯ ಬಳಿಕ ತೋರಣಕ್ಕೆ ಕಟ್ಟಿದ ಸಾಮಗ್ರಿಗಳನ್ನು ಹರಾಜು ಹಾಕಿ ಸಂಗ್ರಹವಾದ ಹಣವನ್ನು ಸಾಮಾಜಿಕ, ಧಾರ್ವಿುಕ ಅಭಿವೃದ್ಧಿ ಕೆಲಸಗಳಿಗಾಗಿ ಗ್ರಾಮದೇವಿಯ ಸನ್ನಿಧಾನಕ್ಕೆ ಸಮರ್ಪಿಸುತ್ತಾರೆ. ತಾಲೂಕಿನಲ್ಲಿ ಹಲವೆಡೆ ಇಂಥ ಸಂಪ್ರದಾಯಗಳು ನಶಿಸುತ್ತ ಬಂದರೂ ವಾಲಗಳ್ಳಿಯಲ್ಲಿ ಮಾತ್ರ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದಾರೆ.