ಜಿಲ್ಲೆ

ಸಂಭ್ರಮದ ಹಬ್ಬ ದೀಪಾವಳಿ : ಡಾ.ಸತೀಶ್ಚಂದ್ರ ಎಸ್. ಬಣ್ಣನೆ

ಸೌಮ್ಯ ಆರ್

ಬೆಳ್ತಂಗಡಿ: ಶ್ರೀ ಧ.ಮಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ದೀಪಾವಳಿ ಆಚರಿಸಲಾಯಿತು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮಾತನಾಡಿ, ಕರಾವಳಿ ಭಾಗದಲ್ಲಿ ಮಳೆಗಾಲದ ಕೊನೆಗೆ ಆಹಾರದ ದಾಸ್ತಾನು ಖಾಲಿಯಾಗುತ್ತಾ ಬರುತ್ತದೆ. ನಂತರ ದೀಪಾವಳಿ ಹಬ್ಬದ ಸಂದರ್ಭಕ್ಕಾಗುವಾಗ ಪೈರು ಬೆಳೆದು ಎದ್ದು ನಿಂತಿರುತ್ತದೆ. ಹೀಗಾಗಿ ದೀಪಾವಳಿ ನಮ್ಮೂರ ಜನರಿಗೆ ಅತ್ಯಂತ ಸಂಭ್ರಮದ ಹಬ್ಬವಾಗಿ ರೂಪುಗೊಂಡಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳೆಯುತ್ತಿರುವ ತಂತ್ರಜ್ಞಾನ, ಲಭ್ಯವಾಗುತ್ತಿರುವ ಮಾಹಿತಿ ಹಾಗೂ ಮನರಂಜನೆ ಮನುಷ್ಯರನ್ನು ದ್ವೀಪವನ್ನಾಗಿಸುತ್ತಿದೆ. ಈ ಏಕತಾನತೆಯಿಂದ ಹೊರಬರಲು ಹಬ್ಬಗಳು ಸಹಕಾರಿ ಎಂದರು.

ಲಕ್ಷ್ಮೀ ಪೂಜೆ ಹಾಗೂ ಗೋಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದ ಭಾಗವಾಗಿ ಕಾಲೇಜಿನ ಸ್ವಚ್ಛತಾ ಸಿಬ್ಬಂದಿಗೆ ಹಾಗೂ ವಾಚ್‌ಮನ್‌ಗೆ ವಸ್ತ್ರದಾನ ಮಾಡಲಾಯಿತು. ಬಲೀಂದ್ರ ಪೂಜೆ ನೆರವೇರಿಸಲಾಯಿತು. ಬಲೀಂದ್ರನನ್ನು ಪದ ಹೇಳಿ ಕರೆಯುವ ಸಂದರ್ಭ ಆಚರಣೆಯ ಭಾಗವಾಗಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ನಂತರ ಪಿಲಿನಲಿಕೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾನ್ವಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾಶ್ರೀ ಹೆಗಡೆ ವಂದಿಸಿದರು.