ಗಂಗಾವತಿ: ಬೆಲೆ ಏರಿಕೆ, ಮುಂಗಾರು ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ದೀಪಾವಳಿ ಅಮಾವಾಸ್ಯೆ ಪೂಜೆಯಲ್ಲಿ ಉತ್ಸಾಹ ಕುಂದಿದ್ದು, ಸಂಪ್ರದಾಯ ಬಿಡದಂತೆ ಸರಳವಾಗಿ ಸೋಮವಾರ ಆಚರಿಸಲಾಯಿತು.
ಅಮಾವಾಸ್ಯೆ ಶ್ರೀಲಕ್ಷ್ಮಿ ಪೂಜೆ ನೆರವೇರಿಸಲು ಎರಡು ದಿನ ಅವಕಾಶ ಸಿಕ್ಕಿದ್ದರಿಂದ ಅಂಗಡಿಗಳಲ್ಲಿ ಭಾನುವಾರ ರಾತ್ರಿ, ಮನೆಗಳಲ್ಲಿ ಸೋಮವಾರ ಬೆಳಗ್ಗೆ ನೆರವೇರಿಸಲಾಯಿತು. ಹಣ್ಣು, ಕಾಯಿ, ಹೂವು ಮತ್ತು ಬಲಿ ಕುಂಬಳ ಕಾಯಿ ದರ ಏರಿಕೆಯಾಗಿದ್ದರಿಂದ ನಿರೀಕ್ಷೆಯಂತೆ ಮಾರಾಟವಾಗಿಲ್ಲ. ಮಾರುಕಟ್ಟೆಗಳು ಗಿಜುಗಿಡುತ್ತಿದ್ದರೂ, ವಹಿವಾಟು ಅಷ್ಟಕಷ್ಟೇ. ಸಿಬಿಎಸ್ ಗಂಜ್, ಗಾಂಧಿ, ಮಹಾವೀರ ಸೇರಿ ಪ್ರಮುಖ ವೃತ್ತಗಳ ಬಳಿ ಅಂಗಡಿಗಳಲ್ಲಿ ದೀಪಾವಳಿ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿದ್ದು, ಅಬ್ಬರ ಕಾಣಲಿಲ್ಲ. ವಿದ್ಯುತ್ ದೀಪದ ಅಲಂಕಾರದಿಂದ ಕಂಗೋಳಿಸುತ್ತಿದ್ದ ಗಂಜ್ ಪ್ರಾಂಗಣದಲ್ಲಿ ಬೆಳಕಿನ ಕಳೆಯಿರಲಿಲ್ಲ.
ಕಳೆದ ತಿಂಗಳು ತಾಲೂಕಾಡಳಿತ ನಗರದ ಪಟಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿ, ಪಟಾಕಿಗಳನ್ನು ಜಪ್ತಿ ಮಾಡಿದ್ದರಿಂದ ಈ ಬಾರಿ ಮಾರಾಟಗಾರರು ಪಟಾಕಿ ಮಾರಿಲ್ಲ. ನಗರದ ಬಾಲಕರ ಸ.ಪ.ಪೂ.ಕಾಲೇಜು ಮೈದಾನದಲ್ಲಿ ಪ್ರತಿ ವರ್ಷ 10ಕ್ಕೂ ಹೆಚ್ಚು ಅಂಗಡಿಗಳನ್ನು ಹಾಕುತ್ತಿದ್ದು, ಈ ಬಾರಿ ಪರವಾನಗಿ ನೀಡಿಲ್ಲ. ವಾರ್ಷಿಕ ಸರಾಸರಿ ಒಂದು ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಯುತ್ತಿತ್ತು.
ಹಸಿರು ಪಟಾಕಿ ಮಾರಲು ಅವಕಾಶವಿದ್ದರೂ, ಅಂಗಡಿಕಾರರು ಆಸಕ್ತಿವಹಿಸಿಲ್ಲ. ತಾಲೂಕಿನ ಶ್ರೀರಾಮನಗರದಲ್ಲಿ ಮಾತ್ರ ಮಾರಾಟ ವ್ಯವಸ್ಥೆಯಿದ್ದರೂ, ಪ್ರಚಾರ ದೊರೆಯುತ್ತಿದ್ದಂತೆ ಪೊಲೀಸ್ ಪಟಾಕಿ ಅಂಗಡಿಗಳನ್ನು ಬಂದ್ ಮಾಡಿದರು. ಕಳೆದ 50 ವರ್ಷಗಳಲ್ಲಿ ಪಟಾಕಿ ಸದ್ದಿಲ್ಲದೆ ದೀಪಾವಳಿ ಆಚರಿಸಿದ್ದು, ಪರಿಸರ ಮಾಲಿನ್ಯಕ್ಕೆ ಕಡಿವಾಣ ಬಿದ್ದಂತಾಗಿದೆ.
ದೀಪಾವಳಿ ಸ್ಪೆಷಲ್ ಇಸ್ಪೀಟ್ ಜೂಜಾಟದ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗಿದ್ದರೂ ಗಂಜ್ ಪ್ರದೇಶ ಸೇರಿ ಪ್ರಭಾವಿಗಳ ಅಂಗಡಿಗಳಲ್ಲಿ ಜೂಜಾಟ ಜೋರಾಗಿದೆ. ಕನಿಷ್ಠ 20 ಸಾವಿರ ರೂ.ಗಳಿಂದ ಲಕ್ಷ ರೂ.ವರೆಗೂ ಬೆಟ್ಟಿಂಗ್ ನಡೆಯುತ್ತಿದೆ. ತಾಲೂಕಿನ ಶ್ರೀರಾಮನಗರದಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದು, ಪೊಲೀಸ್ ಬಂದೋಬಸ್ತ್ ಇದ್ದರೂ ಜೂಜಾಟಗಾರರು ಗಂಭೀರವಾಗಿ ಪರಿಗಣಿಸಿಲ್ಲ.