ಜಿಲ್ಲೆ

ದಿವ್ಯಾಂಗರ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ

ಗೋಪಾಲಕೃಷ್ಣ ಪಾದೂರ್

ಉಡುಪಿ: ದಿವ್ಯಾಂಗ ವ್ಯಕ್ತಿಗಳು ಸಮಾಜಕ್ಕೆ ಹೊರೆಯಲ್ಲ. ಅವರಲ್ಲಿ ಕೂಡ ಉತ್ತಮವಾದ ಪ್ರತಿಭೆಗಳಿದ್ದು ಅದಕ್ಕೆ ಸೂಕ್ತ ಪ್ರೋತ್ಸಹ ಲಭಿಸಿದಾಗ ಅತ್ಯುತ್ತಮ ಸಾಧನೆ ತೋರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡ ದಿವ್ಯಾಂಗರಿಗೆ ಪ್ರೋತ್ಸಾಹ ನೀಡಬೇಕು ಎಂದು ಉಡುಪಿ ಬಿಷಪ್​ ಡಾ.ಜೆರಾಲ್ಡ್​ ಐಸಾಕ್​ ಲೋಬೊ ಹೇಳಿದರು.

ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಧರ್ಮಪ್ರಾಂತ್ಯದ ಕುಟುಂಬ ಆಯೋಗದ ವತಿಯಿಂದ ಆಯೋಜಿಸಿದ್ದ ದಿವ್ಯಾಂಗರ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ದೈಹಿಕ ನ್ಯೂನ್ಯತೆಯಿಂದ ಬಳಲುತ್ತಿರುವ ದಿವ್ಯಾಂಗರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುವಂತೆ ಈಗಾಗಲೇ ಕ್ರೆಸ್ತ ಜಗದ್ಗುರು ಪೋಪ್​ ಫ್ರಾನ್ಸಿಸ್​ ಜಗತ್ತಿಗೆ ಕರೆ ನೀಡಿದ್ದಾರೆ. ಧರ್ಮಪ್ರಾಂತ್ಯ ಮಟ್ಟದಲ್ಲಿ ದಿವ್ಯಾಂಗ ಮಕ್ಕಳಿಗೆ ಕೂಡ ಉತ್ತಮ ಶಿಕ್ಷಣ ಪಡೆಯಲು ಹಾಗೂ ಸರ್ಕಾರದಿಂದ ಲಭಿಸುವ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಮೂಲಕ ದಿವ್ಯಾಂಗರು ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾಭಿಮಾನದಿಂದ ಬದಕುವಂತಹ ವ್ಯವಸ್ಥೆ ಆಗಬೇಕಾಗಿದೆ ಎಂದರು.

ಧಮಾರ್ಧ್ಯಕ್ಷರಿಗೆ ಸನ್ಮಾನ

75 ವರ್ಷಗಳ ಹುಟ್ಟು ಹಬ್ಬ ಹಾಗೂ ಧಮಾರ್ಧ್ಯಕ್ಷರಾಗಿ 25 ವರ್ಷಗಳನ್ನು ಪೊರೈಸಿದ ಬಿಷಪ್​ ಡಾ.ಜೆರಾಲ್ಡ್​ ಐಸಾಕ್​ ಲೋಬೊ ಅವರನ್ನು ದಿವ್ಯಾಂಗರ ತಂಡದಿಂದ ಸನ್ಮಾನಿಸಲಾಯಿತು. ಮಾನಸ ವಿಶೇಷ ಶಾಲೆಯ ಮಕ್ಕಳು ನೃತ್ಯಗಳನ್ನು ಪ್ರದರ್ಶಿಸಿದರು. ಎಂಸಿ ಸಿ ಬ್ಯಾಂಕ್​ ಅಧ್ಯಕ್ಷ ಅನಿಲ್​ ಲೋಬೊ ಮಾತನಾಡಿದರು. ಕರ್ನಾಟಕ ಪ್ರಾಂತೀಯ ದಿವ್ಯಾಂಗರ ಆಯೋಗದ ಕಾರ್ಯದರ್ಶಿ ಎಸ್ತೆರ್​ ಡಿಸೋಜಾ, ಅನುಗ್ರಹ ಪಾಲನಾ ಕೆಂದ್ರದ ನಿರ್ದೇಶಕ ಹಾಗೂ ಕೆಥೊಲಿಕ ಶಿಕ್ಷಣ ಸೊಸೈಟಿ ಧರ್ಮಪ್ರಾಂತ್ಯದ ಕಾರ್ಯದರ್ಶಿ ವಿನ್ಸೆಂಟ್​ ಕ್ರಾಸ್ತಾ, ಕುಟುಂಬ ಆಯೋಗದ ನಿರ್ದೇಶಕ ಡಾ.ರೋಶನ್​ ಡಿಸೋಜಾ, ಸಂಯೋಜಕಿ ಸಿಸ್ಟರ್​ ವಿನ್ನಿ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್​ ಡೆಸಾ, ಆರೋಗ್ಯ ಆಯೋಗದ ನಿರ್ದೇಶಕ ಡಾ.ಎಡ್ವರ್ಡ್​ ಲೋಬೊ, ಬೈಬಲ್​ ಆಯೋಗದ ನಿರ್ದೇಶಕ ಸಿರಿಲ್​ ಲೋಬೊ, ಉಜ್ವಾಡ್​ ಪತ್ರಿಕೆಯ ಸಂಪಾದಕ ಆಲ್ವಿನ್​ ಉಪಸ್ಥಿತರಿದ್ದರು. ಕುಟುಂಬ ಆಯೋಗದ ನಿರ್ದೇಶಕರಾದ ಲೆಸ್ಲಿ ಆರೋಜಾ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.