ಜಿಲ್ಲೆ

ನರ್ಸಿಂಗ್​ನಲ್ಲೂ ಡೀಲ್​ ನಡೆಸುತ್ತಿದ್ದರೇ ದಿವ್ಯಾ?

ರಮೇಶ್​ ಕುಮಾರ್​​ ಬಿ ಎಡಮೋಳೆ

| ರಮೇಶ್​ ಮೈಸೂರು

ಬೆಂಗಳೂರು: ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಜೈಲುಪಾಲಾಗಿರುವ ದಿವ್ಯಾ ಹಾಗರಗಿ ಹೆಸರು ನರ್ಸಿಂಗ್​ ಅಕ್ರಮದಲ್ಲೂ ಕೇಳಿ ಬಂದಿದೆ. ನರ್ಸಿಂಗ್​ ಶಾಲೆ ಮತ್ತು ಕಾಲೇಜುಗಳ ಮಾನ್ಯತೆ ಹಾಗೂ ಸಂಯೋಜನೆ, ನವೀಕರಣ ಹಾಗೂ ಪರಿಶೀಲನೆಗೆ ಸಂಬಂಧಿಸಿದಂತೆ ಭಾರಿ ಡೀಲ್​ ನಡೆಸಿದ್ದಾರೆಂಬ ಆರೋಪ ಆಡಳಿತ ಮಂಡಳಿಗಳಿಂದಲೇ ಕೇಳಿಬಂದಿದೆ.

ದಿವ್ಯಾ ಕಲಬುರಗಿಯಲ್ಲಿ ಅತ್ತೆಯ ಹೆಸರಿನಲ್ಲಿ "ಅನ್ನಪೂರ್ಣ ಸ್ಕೂಲ್​ ಆಫ್​​ ನರ್ಸಿಂಗ್​' ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್​ (ಕರ್ನಾಟಕ ಸ್ಟೇಟ್​ ನರ್ಸಿಂಗ್​ ಕೌನ್ಸಿಲ್​& ಕೆಎನ್​ಎಸ್​ಸಿ) ನಾಮನಿರ್ದೇಶಿತ ಸದಸ್ಯೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನರ್ಸಿಂಗ್​ ಶಿಕ್ಷಣ ಸಂಸ್ಥೆಗಳ ಪರಿಶೀಲನಾ ಸಮಿತಿಯ ಭಾಗವಾಗಿ ನೂರಾರು ನರ್ಸಿಂಗ್​ ಸ್ಕೂಲ್​, ಕಾಲೇಜುಗಳ ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ಭಾರಿ ಅಕ್ರಮ ನಡೆಸಿದ್ದಾರೆ ಎಂಬ ಕೂಗು ಜೋರಾಗಿದೆ. ಇಷ್ಟಾದರೂ ಅವರ ಸದಸ್ಯತ್ವ ಇನ್ನೂ ರದ್ದಾಗದಿರುವುದು ಅಚ್ಚರಿಗೆ ಕಾರಣವಾಗಿದೆ. ಯಾವುದೇ ಶಿಕ್ಷಣ ಸಂಸ್ಥೆ ನಿಯಮಾವಳಿಗಳ ಪ್ರಕಾರ ಮೂಲಸೌಕರ್ಯ, ಬೋಧಕ, ಬೋಧಕೇತರ ಸಿಬ್ಬಂದಿ ಹೊಂದಿರಲೇಬೇಕು. ಆದರೆ ಹೆಚ್ಚಿನ ನರ್ಸಿಂಗ್​ ಶಿಕ್ಷಣ ಸಂಸ್ಥೆ ಗಳಲ್ಲಿ ಈ ಸೌಕರ್ಯ ಮರೀಚಿಕೆಯಾಗಿರುತ್ತವೆ. ಇದಕ್ಕೆಂದೇ ಸರ್ಕಾರ ಪರಿಶೀಲನಾ ಸಮಿತಿ ಕಳುಹಿಸಿಕೊಡುತ್ತದೆ. ದಿವ್ಯಾ ಇಂಥ "ಸಮಿತಿ'ಯ ಗುರಾಣಿ ಹಿಡಿದು ಡೀಲ್​ ಕುದುರಿಸಿಕೊಳ್ಳುತ್ತಿದ್ದ ಆರೋಪಗಳಿವೆ.

ಹೋಟೆಲ್​ನಲ್ಲೇ ಸಹಿ: ದಿವ್ಯಾ ಪರಿಶೀಲನೆಗಾಗಿ ತೆರಳಿದ ಊರಿನಲ್ಲೇ ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತಿದ್ದರು. ಅಲ್ಲಿಗೇ ಫೈಲ್​ಗಳನ್ನು ತರಿಸಿಕೊಂಡು ಸಹಿ ಹಾಕುತ್ತಿದ್ದರು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಆಡಳಿತ ಮಂಡಳಿಯೇ ಇದನ್ನು ಖಚಿತಪಡಿಸಿದೆ. ಮೂಲಸೌಕರ್ಯಗಳಿಲ್ಲದ ಕಾಲೇಜುಗಳ ಆಡಳಿತ ಮಂಡಳಿಗಳ ಮುಖ್ಯಸ್ಥರಿಗೂ ಇದೇ ಬೇಕಾಗಿರುವುದರಿಂದ ಯಾರೂ ತಕರಾರು ತೆಗೆಯುತ್ತಿರಲಿಲ್ಲ. ಆದರೆ, ಇದೆಲ್ಲಕ್ಕೂ "ಬೆಲೆ' ನಿಗದಿಯಾಗಿರುತ್ತೆ ಎನ್ನುವುದು ಬಹಿರಂಗ ಸತ್ಯ.

ಕೋಟ್ಯಂತರ ರೂ. ಆದಾಯ ಮೂಲ: ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್​ನಲ್ಲಿ ನಾಲ್ವರು ಸದಸ್ಯರಿದ್ದಾರೆ. ಮೂವರು ಸರ್ಕಾರದಿಂದ ನಾಮಕರಣಗೊಂಡವರು. ಈ ಪೈಕಿ ದಿವ್ಯಾ ಹಾಗರಗಿ ಕೂಡ ಒಬ್ಬರು. ಈ ಸ್ಥಾನಗಳಿಗೆ ಭಾರಿ ಬೇಡಿಕೆಯೂ ಇದೆ. ಕಾರಣ, ಕಾಲೇಜುಗಳ ಪರಿಶೀಲನೆ ಹೆಸರಿನಲ್ಲಿ ಕೋಟ್ಯಂತರ ರೂ. ಆದಾಯ ಈ ಮೂಲದಿಂದಲೇ ಹುಟ್ಟುತ್ತದೆ. ಕೆಲ ಪ್ರತಿಷ್ಠಿತ ಕಾಲೇಜುಗಳು ಈ ಬೆದರಿಕೆಗೆ ಮಣಿಯುವುದಿಲ್ಲವಾದ್ದರಿಂದ ಅಂಥ ಕಾಲೇಜುಗಳ ತಂಟೆಗೆ ಹೋಗುವುದಿಲ್ಲ. ಬದಲಿಗೆ "ಕೊರತೆ'ಗಳಿರುವ ಕಾಲೇಜುಗಳನ್ನು ಹುಡುಕಿ ಡೀಲ್​ ಕುದುರಿಸಿಕೊಳ್ಳಲಾಗುತ್ತದೆ.

ಎರಡೂವರೆ ವರ್ಷ ಅವಧಿ: ದಿವ್ಯಾ ಕರ್ನಾಟಕ ನರ್ಸಿಂಗ್​ ಕೌನ್ಸಿಲ್​ ಸದಸ್ಯರನ್ನಾಗಿ ನಾಮ ನಿರ್ದೇಶನಗೊಂಡಿದ್ದು 2019ರ ಅ.14ರಂದು. ಮುಂದಿನ ಐದು ವರ್ಷದ ಅವಧಿಗೆ ಅಥವಾ ಸರ್ಕಾರ ಮುಂದಿನ ನಾಮನಿರ್ದೇಶನ ಮಾಡುವವರೆಗೆ ಇದು ಚಾಲ್ತಿಯಲ್ಲಿರುತ್ತದೆ. ಅಲ್ಲಿಗೆ ಇನ್ನೂ ಎರಡೂವರೆ ವರ್ಷಕ್ಕೂ ಅಧಿಕ ಸದಸ್ಯತ್ವದ ಅವಧಿ ಈಕೆಗಿದೆ. ಜೈಲುಪಾಲಾಗಿ ವಾರ ಕಳೆದಿದ್ದರೂ ಈವರೆಗೆ ಅವರ ಸದಸ್ಯತ್ವ ರದ್ದಾಗಿರುವ ಆದೇಶ ತಮಗೆ ಬಂದಿಲ್ಲ ಎಂದು ರಾಜ್ಯ ಶುಶ್ರೂಷ ಪರಿಷತ್​ನ ರಿಜಿಸ್ಟ್ರಾರ್​ ಹಾಗೂ ನರ್ಸಿಂಗ್​ ಮೆಡಿಕಲ್​ ಎಜುಕೇಷನ್​ ವಿಭಾಗದ ಸಹಾಯಕ ನಿರ್ದೇಶಕಿ ಉಷಾ ಭಂಡಾರಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬುದು ವೈದ್ಯಕಿಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ್​ ನೀಡಿರುವ ಮಾಹಿತಿ.

ಸಮಿತಿಗಳ ರಚನೆ

ರಾಜ್ಯದಲ್ಲಿ ನರ್ಸಿಂಗ್​ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ನೀಡುವ ಸಾವಿರಕ್ಕೂ ಅಧಿಕ ಸಂಸ್ಥೆಗಳಿವೆ. ಇವುಗಳ ಪರಿಶೀಲನೆಗೆ ಅಗಾಧ ಮಾನವ ಸಂಪನ್ಮೂಲವೂ ಬೇಕು. ಪರಿಷತ್​ ರಿಜಿಸ್ಟ್ರಾರ್​ "ಪರಿಶೀಲನಾ ಸಮಿತಿ' ರಚಿಸುತ್ತಾರೆ. ಆದರೆ, ಸದಸ್ಯರ ಮಾತಿಗೆ ತೂಕ ಹೆಚ್ಚು. ಅಗಾಧ ಸಮಯ ಬೇಡುವ ಕಾರ್ಯವಾದ್ದರಿಂದ ಕೆಲವರು ಕಾಟಾಚಾರಕ್ಕೆ ಮುಗಿಸಿ ಕೈತೊಳೆದುಕೊಳ್ಳುತ್ತಾರೆ. ಆದರೆ, "ಆದಾಯ' ಬಯಸುವವರು ತಮಗೆ ಬೇಕಾದ ಕಾಲೇಜು ಗುರಿಯಾಗಿಸಿಕೊಂಡು ಡೀಲ್​ ಮಾಡಿಕೊಳ್ಳುತ್ತಾರೆ. ಕಾಲೇಜಿನವರೇ ತಯಾರಿಸಿದ ವರದಿಗೆ ಸಹಿ ಹಾಕಿ ಪರಿಷತ್​ಗೆ ಸಲ್ಲಿಸುವ ಕಾರ್ಯವೂ ನಡೆಯುತ್ತದೆ. ಆದರೆ, ನೂರಾರು ಕಾಲೇಜುಗಳನ್ನು ಈಕೆಗೆ ವಹಿಸಿ ವರದಿ ತರಿಸಿಕೊಂಡಿರುವುದು ಕೂಡ ಅಚ್ಚರಿಯ ಸಂಗತಿ ಎಂದು ಇಲಾಖೆಯವರೇ ಹುಬ್ಬೇರಿಸುತ್ತಾರೆ. ಕಳೆದೆರಡು ವರ್ಷಗಳಲ್ಲಿ ಇಂಥ ಪ್ರವೃತ್ತಿ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳೇ ಕೈಗೊಂಬೆ ರಾಜಕೀಯ ಪ್ರಭಾವ ಬಳಸಿಕೊಂಡು ಸದಸ್ಯ ಸ್ಥಾನ ಪಡೆದಿರುವ ದಿವ್ಯಾ ವೈದ್ಯಕಿಯ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳನ್ನೇ ತನ್ನಿಚ್ಛೆಗೆ ತಕ್ಕಂತೆ ಕುಣಿಸುತ್ತಾರೆಂಬ ಆರೋಪವಿದೆ. ರಾಜಕೀಯ ನಾಯಕರೊಂದಿಗಿರುವ "ಸಂಪರ್ಕ'ವನ್ನೇ ಅಸ್ತ್ರವಾಗಿಸಿಕೊಂಡು ನರ್ಸಿಂಗ್​ ಮಂಡಳಿಯಲ್ಲಿ "ಪ್ರಭಾವಿ'ಯಾಗಿದ್ದಾರೆ. ತನಗೆ ಬೇಕಾದ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಂಡು ಪರಿಶೀಲನೆ ನಡೆಸುತ್ತಾರೆನ್ನಲಾಗಿದೆ.

ಪರಿಶೀಲನಾ ಸಮಿತಿ ಕಾಲೇಜಿಗೆ ಬರುವುದೇ ಇಲ್ಲ. ಪರಿಚಯವಿರುವ ಕಾಲೇಜು ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ವರದಿ ತರಿಸಿಕೊಂಡಿದ್ದೂ ಇದೆ. ಎಷ್ಟೋ ನರ್ಸಿಂಗ್​ ಕಾಲೇಜುಗಳು "ಕೇರ್​ಾ' ವಿಳಾಸದಲ್ಲಿ ನಡೆಯುತ್ತಿವೆ. ಒಂದೇ ಕಟ್ಟಡದಲ್ಲಿ ಹಲವು ಶಿಕ್ಷಣ ಸಂಸ್ಥೆಗಳ ನಡುವೆ ನರ್ಸಿಂಗ್​ ಕಾಲೇಜು ಬೋರ್ಡ್​ಗಳಿವೆ. ಇವುಗಳ ತನಿಖೆ ನಡೆದರೆ ಪರಿಶೀಲನೆ ನಡೆಸಿದವರ ನಾಟಕ ಬಯಲಾಗುತ್ತದೆ. | ಹೆಸರು ಹೇಳಲಿಚ್ಛಿಸದ ನರ್ಸಿಂಗ್​ ಕಾಲೇಜು ಮುಖ್ಯಸ್ಥರು ಬೆಂಗಳೂರು

ಪರಿಶೀಲನೆ ತನಿಖೆಯಾಗಲಿ ದಿವ್ಯಾ ಹಾಗರಗಿ ಈವರೆಗೆ ನಡೆಸಿರುವ "ಕಾಲೇಜುಗಳ ಪರಿಶೀಲನೆ' ತನಿಖೆಗೊಳಪಡಿಸಿ ಎಂಬ ಒತ್ತಾಯ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ನರ್ಸಿಂಗ್​ ಕೌನ್ಸಿಲ್​ ನಿರಾಕರಿಸುತ್ತಿದೆ ಎಂಬ ಆರೋಪ ಮಾಹಿತಿ ಹಕ್ಕು ಕಾರ್ಯಕರ್ತರದ್ದಾಗಿದೆ.