ಶಿವಮೊಗ್ಗ: ದೀವರ ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸುವ ಜತೆಗೆ ಬೂಮಣ್ಣಿ ಬುಟ್ಟಿಯಲ್ಲಿರುವ ಹೊಸ ಆಲೋಚನೆ, ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕಿದೆ ಎಂದು ರಾಮಮನೋಹರ ಲೋಹಿಯಾ ಟ್ರಸ್ಟ್ ಅಧ್ಯಕ್ಷ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಆರ್ಯ ಈಡಿಗರ ಸಂಘದಲ್ಲಿ ಭಾನುವಾರ ಧೀರ ದೀವರು ಬಳಗ, ಮಲೆನಾಡು ದೀವರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಮಿತಿ ಹಾಗೂ ರಾಮಮನೋಹರ ಲೋಹಿಯಾ ಟ್ರಸ್ಟ್ ಆಶ್ರಯದಲ್ಲಿ ‘ರಾಜ್ಯಮಟ್ಟದ ಬೂಮಣ್ಣಿ ಬುಟ್ಟಿ ಚಿತ್ತಾರ ಸ್ಪರ್ಧೆಯ ಚಿತ್ತಾರಗಿತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೀವರ ಮುಂದಿನ ಪೀಳಿಗೆಗೆ ಕಲಾ ಪ್ರಜ್ಞೆ ಮೂಡಿಸುವ ಕೆಲಸ ನಿರಂತರವಾಗಿ ನಡೆಸಬೇಕು ಎಂದರು.
ದೀವರ ಸಂಸ್ಕೃತಿ ನಶಿಸುತ್ತಿದೆ. ಶಿಕ್ಷಣ, ಉದ್ಯೋಗ ಸೇರಿ ಅನೇಕ ಕಾರಣಗಳಿಂದ ಸಮಾಜದ ಯುವ ಪೀಳಿಗೆ ಪ್ರತಿಭಾ ಪಲಾಯನ ಮಾಡುತ್ತಿದೆ. ಈ ಕಾರಣದಿಂದ ದೀವರ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಕಣ್ಮರೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ಚಟುವಟಿಕೆ, ಜಾನಪದ, ಕಲೆ, ಸಾಹಿತ್ಯ ಸೇರಿ ಹಲವು ಕ್ಷೇತ್ರಗಳಲ್ಲಿ ದೀವರ ಪರಿಶ್ರಮ ಇದ್ದು ಅವನತಿಯತ್ತ ಸಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಎಂಎಸ್ಐಎಲ್ ಅಧ್ಯಕ್ಷ, ಶಾಸಕ ಹರತಾಳು ಹಾಲಪ್ಪ ಮಾತನಾಡಿ, ದೀವರಲ್ಲಿನ ಬೌದ್ಧಿಕ ಸಂಪತ್ತನ್ನು ಮುಂದಿನ ಜನಾಂಗಕ್ಕೆ ಸಮುದಾಯದ ಕಲೆ, ಸಂಸ್ಕೃತಿ ಉಳಿಸುವ ಕೆಲಸವಾಗಬೇಕಿದೆ. ನಮ್ಮಸಂಸ್ಕೃತಿ ಮರೆಯಾಗುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲಿ ಉತ್ತಮ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಈಡಿಗ ಸಂಘದ ಗೌರವ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಅಂದಿನ ಕಾಲದಲ್ಲಿ ಬಡತನ ಇದ್ದರೂ ತಮ್ಮ ಸಂಸ್ಕೃತಿಯನ್ನು ದೀವರ ಸಮಾಜ ಬಿಟ್ಟು ಕೊಡಲಿಲ್ಲ. ಬೂಮಣ್ಣಿ, ಹಸೆ ಚಿತ್ತಾರ ದೀವರ ಅಸ್ಮಿತೆ. ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ನಮ್ಮಕಲೆ, ಸಾಹಿತ್ಯ, ಸಂಸ್ಕೃತಿ ಮರೆಯಬಾರದು. ಮಾಜಿ ಸಿಎಂ ಎಸ್.ಬಂಗಾರಪ್ಪ ಮತ್ತು ಕಾಗೋಡು ತಿಮ್ಮಪ್ಪ ದೀವರ ಸಮಾಜದ ಶಕ್ತಿ ಎಂದು ಹೇಳಿದರು.
ಈಡೀಗ ಸಮಾಜಕ್ಕೆ ಗುರುಗಳ ಅವಶ್ಯಕತೆ ಇದೆ. ಎಲ್ಲ ಜಾತಿಗಳಲ್ಲಿ ಮಠಾಧೀಶರನ್ನು ಇಟ್ಟುಕೊಂಡು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ ದೀವರ ಸಮಾಜ ಸೌಲಭ್ಯಗಳಿಂದ ವಂಚಿತವಾಗಿದೆ. ಧರ್ಮಗುರುಗಳು ಇಲ್ಲದೆಯೂ ನಮ್ಮ ಸಮಾಜ ಮುಂದೆ ಬರಲು ಸಾಧ್ಯ ಎಂದು ಹೇಳಿದರು.
ಧೀರ ದೀವರು ವೇದಿಕೆ ಸಂಚಾಲಕ, ಪತ್ರಕರ್ತ ನಾಗರಾಜ್ ನೇರಿಗೆ ಪ್ರಾಸ್ತವಿಕ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೆ ಚಿತ್ತಾರ ಕಲಾವಿದೆ ಲಕ್ಷ್ಮಮ್ಮ ಗುಡೆಮನೆ, ಕಲಾವಿದೆಯರಾದ ರಾಧಾ ಸುಳ್ಳೂರು ಮತ್ತು ಕುಸುಮಾ ಅಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಮಲೆನಾಡು ದೀವರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸುರೇಶ್ ಬಾಳೆಗುಂಡಿ, ಡಾ. ಜಿ.ಡಿ.ನಾರಾಯಣಪ್ಪ ಇದ್ದರು.