ಜಿಲ್ಲೆ

ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಸೂಚನೆ ಬಸ್​ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿ

ಗಿರೀಶ ಸಗರ

ವಿಜಯಪುರ:ಜಿಲ್ಲೆಯ ವ್ಯಾಪ್ತಿಯ ಬಸ್​ ನಿಲ್ದಾಣಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಗೃಹ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಜತೆಗೆ ಪ್ರಯಾಣಿಕ ಸ್ನೇಹಿ ಶೌಚಗೃಹ ನಿರ್ವಹಣೆಗೆ ಕಾರ್ಮಿಕ ಇಲಾಖೆಯಡಿ ನೋಂದಾಯಿತ ಗುತ್ತಿಗೆದಾರರಿಗೆ ಇ&ಟೆಂಡರ್​ ಮೂಲಕ ಆಯ್ಕೆ ಮಾಡಿ ಪರವಾನಗಿ ನೀಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಹೇಳಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸ್ಥಳಿಯ ವಿಭಾಗ, ಜಿಲ್ಲಾಡಳಿತ ಹಾಗೂ ರೋಟರಿ ಕ್ಲಬ್​ಗಳ ಸಹಯೋಗದಲ್ಲಿ ಪ್ರಯಾಣಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಉದ್ದೇಶದಿಂದ ನಗರದ ಕೇಂದ್ರ ಬಸ್​ ನಿಲ್ದಾಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಒಂದು ದಿನದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರವಾನಗಿ ಪಡೆದ ಗುತ್ತಿಗೆದಾರರು ನಿತ್ಯ ಬಸ್​ ನಿಲ್ದಾಣ ಸ್ವಚ್ಛತೆ ಪರಿಶೀಲನೆಗೆ "ಬಸ್​ ನಿಲ್ದಾಣಗಳ ಸ್ವಚ್ಛತೆ ವಿಜಯಪುರ ವಿಭಾಗ' ವಾಟ್ಸ್​& ಆ್ಯಪ್​ ಗ್ರೂಪ್​ ರಚಿಸಿದ್ದು, ನಿತ್ಯ ಮೂರು ಬಾರಿ ಬಸ್​ ನಿಲ್ದಾಣ ಸ್ವಚ್ಛಗೊಳಿಸಿರುವ ಕುರಿತು ಜಿಪಿಎಸ್​ ಆಧಾರಿತ ಫೋಟೊ ಅಪ್​ಲೋಡ್​ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.

ಬಸ್​ ನಿಲ್ದಾಣದ ಪರಿವೀಕ್ಷಣಾ ಸಮಯದಲ್ಲಿ ಸ್ವಚ್ಛತೆ ಬಗ್ಗೆ ನ್ಯೂನತೆ ಕಂಡು ಬಂದಲ್ಲಿ ಸಂಬಂಧಿಸಿದವರಿಗೆ ನೋಟಿಸ್​ ಜಾರಿ ಮಾಡಲಾಗುವುದಲ್ಲದೆ, ದಂಡ ವಿಧಿಸಲು ಕ್ರಮವಹಿಸಲಾಗಿದೆ. ಅದರಂತೆ ಇತ್ತೀಚೆಗೆ ಹೊಸದಾಗಿ ಆಯ್ಕೆಯಾದ ಸ್ವಚ್ಛತಾ ಪರವಾನಗಿ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಸ್ವಚ್ಛತೆಗಾಗಿ ಉಪಯೋಗಿಸಲು ಕಟ್ಟುನಿಟ್ಟಾಗಿ ನಿರ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೆಲವು ಬಸ್​ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಟಕ ಸ್ಥಾಪಿಸಲಾಗಿದೆ. ಇಂಡಸ್ಟ್ರೀಯಲ್​ ಫ್ಯಾನ್​, ನ ತ್ಯಾಜ್ಯ ವಿಲೇವಾರಿಗಾಗಿ ಡಸ್ಟ್​ ಬಿನ್​, ಮೊಬೈಲ್​ ಚಾರ್ಜರ್​ ಪಾಯಿಂಟ್​ ಸಹ ಅಳವಡಿಸಲಾಗಿದೆ. ಅಲ್ಲದೆ, ಮಹಿಳಾ ವಿಶ್ರಾಂತಿ ಕೊಠಡಿ ಹಾಗೂ ಹಾಲುಣಿಸುವ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ರೋಟರಿ ಕ್ಲಬ್​ನ ಅಧ್ಯಕ್ಷ ಪ್ರಾಣೇಶ ಜಹಾಗೀರದಾರ ಮಾತನಾಡಿ, ಸಾರ್ವಜನಿಕರು ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ವಿಜಯಪುರದ ಕೇಂದ್ರ ಬಸ್​ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಸಿಬ್ಬಂದಿ ಸ್ವಚ್ಚತಾ ಶ್ರಮದಾನ ನಡೆಸಿದರು.