ಜಿಲ್ಲೆ

ಸಮಸ್ಯೆಗಳ ಪರಿಹರಿಸಲು ಕ್ರಮ

ಸಿಂಧನೂರು: ನಗರದ ಬಸ್ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರಶೇಖರ ಗುರುವಾರ ಭೇಟಿ ನೀಡಿದರು.

ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಮಿಕರಿಗೆ (ಸಫಾಯಿ) ಬಾಕಿ ವೇತನ ಪಾವತಿಸದಿರುವುದು, ಸುರಕ್ಷತಾ ಸಾಧನಗಳನ್ನು ನೀಡದೇ ಅಸುರಕ್ಷತಾ ಪ್ರದೇಶದ ತ್ಯಾಜ್ಯ ವಿಲೇವಾರಿ ಸೇರಿ ಇನ್ನಿತರೆ ಕೆಲಸ ಕಾರ್ಯಗಳಿಗೆ ಗುತ್ತಿಗೆದಾರರು ಹಾಗೂ ನಿಗಮದ ಅಧಿಕಾರಿಗಳು ಬಲವಂತಪಡಿಸುತ್ತಿದ್ದಾರೆಂಬ ಕಾರ್ಮಿಕ ಸಂಘಟನೆಯ ಆರೋಪದ ಹಿನ್ನೆಲೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.

ಬಸ್ ನಿಲ್ದಾಣದ ಆವರಣ, ಸಾರಿಗೆ ಸಂಸ್ಥೆ ಬಸ್‌ಗಳು ನಿಲ್ಲುವ ಫ್ಲಾಟ್ ಫಾರ್ಮ್, ಕುಡಿವ ನೀರಿನ ವ್ಯವಸ್ಥೆ ಗಮನಿಸಿದ ಅವರು ಕೆಲ ಸಾರ್ವಜನಿಕರೊಂದಿಗೆ ಮಾಹಿತಿ ಪಡೆದುಕೊಂಡರು. ಅಲ್ಲದೇ ಕನ್ನಡ ಪರ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿದರು. ಅವ್ಯವಸ್ಥೆ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿ ಎಂ.ಎಸ್.ಚಂದ್ರಶೇಖರ ಭರವಸೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ವೀರೇಶ ಭಾವಿಮನಿ, ದೌಲಸಾಬ, ಎಂ.ಡಿ.ಫಾರೂಕ್, ಗ್ಯಾನಪ್ಪ ಸುಕಾಲಪೇಟೆ, ಗಂಗಣ್ಣ ಡಿಶ್ ಇತರರು ಇದ್ದರು.