ಜಿಲ್ಲೆ

ಮೈಸೂರಿನಲ್ಲಿ ವೈವಿಧ್ಯಮಯ ಮತದಾನ ಜಾಗೃತಿ

ಸದೇಶ್ ಕಾರ್ಮಾಡ್

ಸದೇಶ್ ಕಾರ್ಮಾಡ್ ಮೈಸೂರು
ದೇಶದ ಬಹುದೊಡ್ಡ ಪ್ರಜಾಪ್ರಭುತ್ವ ಹಬ್ಬ ‘ಲೋಕಸಭಾ ಚುನಾವಣೆ’ಯಲ್ಲಿ ಪ್ರಜಾಪ್ರಭುತ್ವದ ಪ್ರಭುಗಳಾದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದೆ.

ನಿರಂತರ ಮತದಾನ ಜಾಗೃತಿ ಕಾರ್ಯಕ್ರಮಗಳ ಫಲವಾಗಿ ಪ್ರತಿ ಚುನಾವಣೆಯಲ್ಲೂ ಮತದಾನ ಪ್ರಮಾಣ ಏರಿಕೆ ಕಾಣುತ್ತಿದೆ. 2009ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಶೇ.56.62, 2014ರಲ್ಲಿ ಶೇ.67.21, 2019ರಲ್ಲಿ ಶೇ.68.14 ರಷ್ಟು ಮತದಾನವಾಗಿದ್ದು, ಈ ಬಾರಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಪ್ರಯತ್ನಕ್ಕೆ ಮತದಾನ ಪ್ರಮಾಣ ಎಷ್ಟು ಹೆಚ್ಚಳವಾಗಲಿದೆ ಎಂಬ ಕುತೂಹಲ ಮೂಡಿದೆ.

ವೈವಿಧ್ಯಮಯ ಕಾರ್ಯಕ್ರಮ

ಮತದಾರರಲ್ಲಿ ಜಾಗೃತಿ ಮೂಡಿಸಲು ಈ ಬಾರಿ ವಿಂಟೇಜ್ ಕಾರುಗಳ ರ್‍ಯಾಲಿ, ಟಾಂಗಾ ಗಾಡಿಗಳ ಸವಾರಿ, ಸಹಿ ಸಂಗ್ರಹ, ಮತದಾನ ಹಬ್ಬ, ಚಿತ್ರಕಲಾ ಸ್ಪರ್ಧೆ, ಎತ್ತಿನ ಗಾಡಿ ಮೆರವಣಿಗೆ ಸೇರಿದಂತೆ ಹತ್ತು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಲಾಗಿದೆ.

ನಗರದ ವಿವಿಧ ಕಾರ್ಖಾನೆಗಳಲ್ಲಿ ನೌಕರರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು. ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ‘ಯುವ ಮತದಾರರ ಮತದಾನ ಜಾಗೃತಿ ಹಾಗೂ ಹಸ್ತಾಕ್ಷರ ಸಂಗ್ರಹ ಅಭಿಯಾನ’ವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪ್ರತಿಯೊಂದು ತಾಲೂಕುಗಳಲ್ಲೂ ‘ಕಡ್ಡಾಯ ಮತದಾನ’ ಕುರಿತು ಮತದಾರರು ಪ್ರತಿಜ್ಞಾವಿಧಿ ಕಾರ್ಯ ನಡೆದಿದೆ. ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಬಲೂನ್ ಅನಾವರಣ ಹಾಗೂ ಜಾಥಾ ಮೂಲಕ ವಿಶಿಷ್ಟವಾಗಿ ಮತದಾನ ಜಾಗೃತಿ ಮೂಡಿಸಲಾಗಿದೆ. ಈ ಬಾರಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲೂ ಮತದಾನ ಜಾಗೃತಿ ಮೂಡಿಸಿದ್ದು ವಿಶೇಷ. ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್‌ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮತದಾನದ ಮಹತ್ವ ತಿಳಿಸಿಕೊಡಲಾಯಿತು.

ಅಂಗವಿಕಲರು ಭಾಗಿ

ಪಿರಿಯಾಪಟ್ಟಣದಲ್ಲಿ ಅಂಗವಿಕಲರು ‘ನಮ್ಮ ಮತ, ನಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ’ ಘೋಷಣೆಗಳ ಪ್ರದರ್ಶನದ ಮೂಲಕ ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಂಡು ಮತದಾನ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಮತದಾನ ಮಾಡುವಂತೆ ಸಾರ್ವಜನಿ ಕರನ್ನು ಪ್ರೆರೇಪಿಸಲು ನಗರ ಪಾಲಿಕೆ ವಲಯ ಕಚೇರಿಯ ಸ್ವಾಗತ ಕಮಾನು, ವಲಯ ಕಚೇರಿಯ ಮುಂಭಾಗದಲ್ಲಿ ಮತದಾನ ಕುರಿತು ಗೋಡೆಬರಹ, ಮತದಾನದ ಸೆಲ್ಫಿ ಕೌಂಟರ್‌ಹಾಗೂ ‘ನಾನು ಮತದಾನ ಮಾಡುತ್ತೇನೆ’ ಎಂಬ ಕುರಿತು ಹಸ್ತಾಕ್ಷರ ಸಂಗ್ರಹಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಗರದ ರೈಲ್ವೆ ನಿಲ್ದಾಣ ಹಾಗೂ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಮತದಾನ ದಿನದಂದು ಪ್ರವಾಸ ಕೈಗೊಳ್ಳದೆ ತಪ್ಪದೆ ಮತದಾನ ಮಾಡಿ ಎಂದು ಜಾಗೃತಿ ಮೂಡಿಸಲಾಗಿದೆ.

ಚುನಾವಣಾ ಹಬ್ಬ: ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಕಲಾಮಂದಿರದಲ್ಲಿ ಚುನಾವಣಾ ಹಬ್ಬ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಹಿ ಸಂಗ್ರಹಣಾ ಅಭಿಯಾನ, ಚಿತ್ರಕಲಾ ಸ್ಪರ್ಧೆ, ಕಲಾ ತಂಡದಿಂದ ಮತದಾನ ಜಾಗೃತಿ ಗೀತೆಗಳ ವಾಚನ ಹಾಗೂ ಕಿರುನಾಟಕ ಕಾರ್ಯಕ್ರಮಗಳು ಮನಸೆಳೆದವು.

ಗಮನ ಸೆಳೆದ ವಿಂಟೇಜ್ ಕಾರು ರ್‍ಯಾಲಿ

ಪ್ರತಿ ಚುನಾವಣೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ವಿಂಟೇಜ್ ಕಾರುಗಳ ರ್‍ಯಾಲಿ ಯೋಜಿಸಲಾಗುತ್ತದೆ. ಈ ಬಾರಿಯೂ ವಿಂಟೇಜ್ ಕಾರುಗಳು ಮತದಾನ ಜಾಗೃತಿಗಾಗಿ ರಸ್ತೆಗೆ ಇಳಿದವು. ವಿಂಟೇಜ್ ಕಾರುಗಳ ಜತೆಗೆ ಟಾಂಗಾ ಗಾಡಿಗಳು ಸಹ ಗಮನ ಸೆಳೆಯಿತು. ಪುರಭವನ ಆವರಣದಿಂದ ಹೊರಟ ವಿಂಟೇಜ್ ಕಾರುಗಳು ದೇವರಾಜ ಅರಸು ರಸ್ತೆ, ಸಯ್ಯಜಿರಾವ್ ರಸ್ತೆಯ ಮೂಲಕ ಸಾಗಿ ಪುರಭವನ ಆವರಣದಲ್ಲಿ ಅಂತ್ಯಗೊಂಡಿತು. ಅಲ್ಲದೆ, ನಗರದ ಗನ್‌ಹೌಸ್ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೆ ಬೈಕ್ ರ್‍ಯಾಲಿ ಮೂಲಕ ಗಮನ ಸೆಳೆಯಲಾಯಿತು.

ಗಡಿ ಭಾಗದಲ್ಲೂ ಜಾಗೃತಿ

ಮತದಾನ ಜಾಗೃತಿ ಕಾರ್ಯಕ್ರಮ ಕೇವಲ ನಗರ, ಪಟ್ಟಣಗಳಿಗೆ ಮಾತ್ರ ಸೀಮಿತಗೊಳ್ಳದೆ ಹಳ್ಳಿ ಹಳ್ಳಿಗಳಲ್ಲೂ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನ ಸೆಳೆಯಲಾಗಿದೆ. ಕರ್ನಾಟಕ-ಕೇರಳ ಗಡಿ ಭಾಗವಾದ ಡಿ.ಬಿ.ಕುಪ್ಪೆಯಲ್ಲೂ ಈ ಬಾರಿ ಮತದಾನ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ಮತದಾನ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ರೀಲ್ಸ್, ವಿಡಿಯೋ ಸ್ಪರ್ಧೆ

ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಎಲ್ಲರೂ ಚುನಾವಣೆಯ ಹಬ್ಬದಲ್ಲಿ ಭಾಗಿದಾರರಾಗಲು ಪ್ರೋತ್ಸಾಹಿಸಲು ಈ ಬಾರಿ ಜಿಲ್ಲಾ ಸ್ವೀಪ್ ಸಮಿತಿಯಿಂದ ರೀಲ್ಸ್ ಹಾಗೂ ವಿಡಿಯೋ ಮಾಡುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಾರ್ವ ಜನಿಕರು ಮತದಾನದ ಮಹತ್ವ, ಪ್ರತಿ ವೋಟಿನ ಮೌಲ್ಯ, ನೈತಿಕ ಮತದಾನ ಮತ್ತು ಎಲ್ಲ ವರ್ಗಗಳ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸುವ ರೀಲ್ಸ್ ಹಾಗೂ ವಿಡಿಯೋ ತಯಾರಿಸಿ ಗಮನ ಸೆಳೆದರು.

ಸುತ್ತೂರಿನಲ್ಲಿ ಎತ್ತಿನಗಾಡಿ ಜಾಥಾ

ಸುತ್ತೂರು ಗ್ರಾಮದಲ್ಲಿ ಎತ್ತಿನ ಗಾಡಿ ಜಾಥಾ ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾಗಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧಿಕಾರಿಗಳು, ಸ್ವಸಹಾಯ ಸಂಘದ ಮಹಿಳೆಯರು ಎತ್ತಿನ ಗಾಡಿ ಏರಿ ಸುತ್ತೂರಿನ ಪ್ರಮುಖ ರಸ್ತೆಗಳಲ್ಲಿ ಸಾಗಿ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸಿದರು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆಲ್ಲರೂ ಯಜಮಾನರು. ಹಾಗಾಗಿ ಪ್ರತಿಯೊಬ್ಬರು ಚುನಾವಣಾ ಹಬ್ಬದ ಮೆರಗನ್ನು ಹೆಚ್ಚಿಸಲು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾರರಲ್ಲಿ ಜಾಗೃತಿ ಮೂಡಿಸಲು ಈ ಬಾರಿ ವಿಂಟೇಜ್ ಕಾರುಗಳ ರ‌್ಯಾಲಿ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಮತದಾರರು ಮತದಾನ ಮಾಡಲು ಮುಂದೆ ಬರುವಂತೆ ಮಾಡಲು ಮನೆ ಮನೆಗೆ ಮತದಾರರ ಮಾಹಿತಿ ಚೀಟಿ ಹಂಚಿಕೆ ಮಾಡಲಾಗುತ್ತಿದೆ.
ಡಾ.ಕೆ.ವಿ. ರಾಜೇಂದ್ರ,
ಜಿಲ್ಲಾ ಚುನಾವಣಾಧಿಕಾರಿ