ಕೊಪ್ಪಳ: ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ಗರ್ಭಿಣಿ, ಬಾಣಂತಿ, ಮಕ್ಕಳು ಹಾಗೂ ಅನಾರೋಗ್ಯ ಪೀಡಿತರು ಸೇರಿ ಸಾರ್ವನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗರಾಜು ತಿಳಿಸಿದ್ದಾರೆ.
ಹೆಚ್ಚು ನೀರಿ ಸೇವಿಸಿ. ಮಜ್ಜಿಗೆ, ಎಳನೀರು, ಹಣ್ಣಿನ ಜ್ಯೂಸ್, ನೀರಿನ ಅಂಶ ಹೆಚ್ಚಿರುವ ತರಕಾರಿ, ಹಣ್ಣುಗಳನ್ನು ಸೇವಿಸುವುದು ಉತ್ತಮ. ಸಡಿಲ, ತೆಳು ಬಣ್ಣದ ಹತ್ತಿ ಬಟ್ಟೆ ಧರಿಸಿ. ಗಾಳಿಯಾಡುವ ಪಾದರೆಗಳನ್ನು ಧರಿಸಿ. ಹೊರ ಹೋಗುವಾಗ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳವ ಸಾಮಾನ್ಯ ಕ್ರಮಗಳನ್ನು ಪಾಲಿಸಿ.
ಜಮೀನು ಸೇರಿ ಹೊರಾಂಗಣದಲ್ಲಿ ಕೆಲಸ ಮಾಡುವವರು ಬೆಳಗ್ಗೆ 11 ಗಂಟೆವರೆಗೆ, ಸಂಜೆ 4 ಗಂಟೆ ನಂತರ ಕೆಲಸದಲ್ಲಿ ತೊಡಗಿ. ಬಿಸಿಲು ಹೆಚ್ಚಿದ್ದಾಗ ಹೆಚ್ಚು ಶ್ರಮದಾಯಕ ಕೆಲಸ ಮಾಡಬೇಡಿ. ಚಹಾ, ಕಾಫಿ, ಹೆಚ್ಚು ಸಕ್ಕರೆ ಅಂಶ ಹೊಂದಿರುವ ಕಾಬೋರ್ನೇಟೆಡ್ ಪಾನಿಯ ಹಾಗೂ ಮಧ್ಯಪಾನದಿಂದ ದೂರವಿರಿ. ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೆ ನೆರಳಿನ ಸ್ಥಳಕ್ಕೆ ಸ್ಥಳಾಂತರಿಸಿ. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯಬೇಕು.
ಅನಾರೋಗ್ಯ ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ತುರ್ತು ಸಮಯದಲ್ಲಿ 108 ಅಥವಾ 102ಕ್ಕೆ ಕರೆ ಮಾಡುವಂತೆ ತಿಳಿಸಿದ್ದಾರೆ.