ಮಡಿಕೇರಿ:
ಕೃಷಿ ಕೆಲಸಕ್ಕೆ ಈಗ ಕೂಲಿಯಾಳುಗಳು ಸಿಗುತ್ತಿಲ್ಲ. ಹಾಗಾಗಿ ಯಾಂತ್ರೀಕೃತ ಕೃಷಿಯತ್ತ ರೈತರು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ದುಬಾರಿ ಕೃಷಿಯಂತ್ರಗಳು ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಕೈಗೆಟುಕದಷ್ಟು ದುಬಾರಿಯಾಗಿವೆ. ಈ ಹಿನ್ನೆಲೆಯಲ್ಲಿ ಇಂಥ ರೈತರಿಗಾಗಿ ಸರ್ಕಾರ ಆರಂಭಿಸಿದ ಕೃಷಿ ಯಂತ್ರಧಾರೆ ಯೋಜನೆ ಬಹುತೇಕ ಕಡೆಗಳಲ್ಲಿ ಹಳ್ಳ ಹಿಡಿದಿದೆ. ರೈತರಿಗೆ ಅನುಕೂಲ ಆಗಬೇಕಿದ್ದ ಮಹತ್ವಾಕಾಂಕ್ಷಿ ಕಾರ್ಯಕ್ರಮವೊಂದು ನಿರ್ವಾಹಕರ ಬೇಜಾವಾಬ್ದಾರಿಯಿಂದ ಪ್ರಯೋಜನಕ್ಕೆ ಬಾರದಂತೆ ಆಗಿದೆ.
ಕೃಷಿ ದುಬಾರಿ ಆಗುತ್ತಿರುವ ಇಂದಿನ ದಿನಗಳಲ್ಲಿ ಬಹುತೇಕರು ಇರುವ ಜಮೀನು ಬಿಟ್ಟು ಬೇರೆ ಉದ್ಯೋಗದ ಕಡೆಗೆ ಮನಸ್ಸು ಮಾಡುತ್ತಿದ್ದಾರೆ. ಮತ್ತೊಂದು ಕಡೆ ದುಡಿಯುವ ಕೈಗೆ ಉದ್ಯೋಗವಕಾಶಗಳು ಸಾಕಷ್ಟು ಇರುವುದರಿಂದ ಹೆಚ್ಚು ಶ್ರಮ ಬೇಡುವ ಕೃಷಿ ಕೆಲಸಕ್ಕೆ ಕಾರ್ಮಿಕರ ಅಭಾವ ಕಂಡು ಬರುತ್ತಿದೆ. ಇಂಥ ಸಂದರ್ಭದಲ್ಲಿ ಕೃಷಿಯಲ್ಲಿನ ಯಾಂತ್ರೀಕರಣ ಆಶಾಕಿರಣವಾಗಿ ಕಂಡುಬರುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಅನ್ವೇಷಣೆಗಳು, ಪ್ರತಿಯೊಂದು ಕೃಷಿ ಕಾರ್ಯಕ್ಕೂ ಸಿಗುತ್ತಿರುವ ಯಂತ್ರೋಪಕರಣಗಳು ಕೃಷಿಕಾರ್ಯವನ್ನು ಸುಲಭ ಮಾಡುತ್ತಿದ್ದರೂ ಇಂಥ ಯಂತ್ರಗಳನ್ನು ಖರೀದಿಸಲು ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಂದ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಕೃಷಿ ಯಂತ್ರಧಾರೆ ಯೋಜನೆಯನ್ನು ರೂಪಿಸಿದೆ.ಸಣ್ಣ ಮತ್ತು ಮಧ್ಯಮ ಪ್ರಮಾಣದ ಹಿಡುವಳಿ ಹೊಂದಿರುವ ರೈತರಿಗೆ ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವ ಉದ್ದೇಶದಿಂದ ೨೦೧೪ರಲ್ಲಿ ಕೃಷಿ ಯಂತ್ರಧಾರೆ ಯೋಜನೆಯನ್ನು ಆರಂಭಿಸಿದ ಸರ್ಕಾರ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಆರಂಭಿಸಿತು. ಕೊಡಗಿನಲ್ಲೂ ೧೬ ಹೋಬಳಿಗಳಲ್ಲೂ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಿಂದ ರೈತರು ಕೃಷಿ ಯಂತ್ರೋಪಕರಣಗಳನ್ನು ತಮಗೆ ಅಗತ್ಯವಿರುವ ಸಮಯಕ್ಕೆ ಕಡಿಮೆ ಬಾಡಿಗೆ ದರದಲ್ಲಿ ಪಡೆದುಕೊಂಡು ಕಾಲಮಾನಕ್ಕೆ ಸರಿಯಾಗಿ ಬೇಸಾಯ ಚಟುವಟಿಕೆಗಳನ್ನು ನಡೆಸುವ ಮೂಲ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಇಳುವರಿ ಪಡೆಯುವ ಆಶಯ ಹೊಂದಲಾಗಿತ್ತು.
ರೈತರ ಮನೆ ಬಾಗಿಲಿನಲ್ಲಿ ಆಧುನಿಕ ಯಂತ್ರೋಪಕರಣಗಳ ಸೇವೆ ಒದಗಿಸುವುದು, ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು, ಸಕಾಲದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೈಟೆಕ್ ಯಂತ್ರೋಪಕರಣಗಳ ಸೇವೆಗಳನ್ನು ಒದಗಿಸುವುದು, ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಸೂಕ್ತವಾದ ಬಾಡಿಗೆ ದರದಲ್ಲಿ ಯಂತ್ರೋಪಕರಣಗಳನ್ನು ಒದಗಿಸುವುದು, ಈ ಮೂಲಕ
ರೈತರ ಲಾಭದಾಯಕತೆಯನ್ನು ಹೆಚ್ಚಿಸುವುದು ಕೃಷಿ ಯಂತ್ರಧಾರೆ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.
ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟರಿ ಟಿಲ್ಲರ್, ನೇಗಿಲು, ರೋಟವೇಟರ್, ಡಿಸ್ಕ್ ಪ್ಲೋವ್, ಡಿಸ್ಕ್ ಹ್ಯಾರೋ, ಲೆವೆಲರ್ ಬ್ಲೇಡ್, ಕೇಜ್ ಚಕ್ರ, ಬ್ಲೇಡ್ ಹಾರೋ, ಲೇಸರ್ ಚಾಲಿತ ಲೆವೆಲರ್, ಡಿಗ್ಗರ್ಬಂ ಡ್ ತಯಾರಕ, ವೀಡರ್, ಮಲ್ಚಿಂಗ್ ಯಂತ್ರ, ಬೇಲರ್, ರಾಗಿ ಶುಚಿಗೊಳಿಸುವ ಯಂತ್ರ, ಕಬ್ಬು ಕತ್ತರಿಸುವ ಯಂತ್ರ., ಪಂಪ್ ಸೆಟ್‌ಗಳು, ನೀರಿನ ಟ್ಯಾಂಕರ್, ಅಲ್ಯೂಮಿನಿಯಂ ಪೈಪ್‌ಗಳು, ಸ್ಪಿಂಕ್ಲರ್‌ಗಳು ಸೇರಿದಂತೆ ೪೫ಕ್ಕೂ ಹೆಚ್ಚು ರೀತಿಯ ಯಂತ್ರೋಪಕರಣಗಳು ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ರೈತರ ಉಪಯೋಗಕ್ಕಾಗಿ ಲಭ್ಯವಿದೆ.
ಸ್ಥಳೀಯವಾಗಿ ಖಾಸಗಿಯವರಿಂದ ಲಭ್ಯವಾಗುವ ಯಂತ್ರೋಪಕರಣಗ ಬಾಡಿಗೆ ದರಕ್ಕಿಂತ ಕಡಿಮೆ ದರದಲ್ಲಿ ಕೃಷಿ ಬಳಕೆಯ ಯಂತ್ರೋಪಕರಣಗಳು ರೈತರ ಕೈಗೆಟುಕಬೇಕು ಎನ್ನುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಹಾಗೂ ಇಬ್ಬರು ಜಿಲ್ಲಾ ಪ್ರಗತಿಪರ ರೈತರನ್ನು ಒಳಗೊಂಡ ಸಮಿತಿ ಈ ಯಂತ್ರಗಳ ಬಾಡಿಗೆ ದರ ನಿಗದಿ ಮಾಡುತ್ತದೆ. ಜತೆಗೆ ಜಿಲ್ಲೆಯ ಎಲ್ಲಾ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಏಕರೂಪದ ದರ ಇರುವಂತೆ ನೋಡಿಕೊಳ್ಳಲಾಗುತ್ತದೆ.
ಹೀಗೆ ಕೃಷಿ ಯಂತ್ರೋಪಕರಣಗಳಿಗಾಗಿ ಖಾಸಗಿಯವರಿಗೆ ದುಬಾರಿ ಬಾಡಿಗೆ ಕೊಟ್ಟು ಕೈ ಸುಟ್ಟುಕೊಳ್ಳುವ ಬದಲು, ಸರ್ಕಾರವೇ ವ್ಯವಸ್ಥೆ ಮಾಡಿದ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಕೈಗೆಡುವ ದರದಲ್ಲಿ ತಮಗೆ ಅಗತ್ಯ ಇರುವ ಯಂತ್ರೋಪಕರಣಗಳನ್ನು ಬಳಸಿಕೊಂಡು ಲಾಭದಾಯಕ ಕೃಷಿ ನಡೆಸುವ ಬಗ್ಗೆ ರೈತರಲ್ಲೂ ದೊಡ್ಡ ಮಟ್ಟದ ನಿರೀಕ್ಷೆಗಳಿದ್ದವು. ಆದರೆ ಕೊಡಗಿನಲ್ಲಿರುವ ೧೬ ಕೃಷಿ ಯಂತ್ರಧಾರೆ ಕೇಂದ್ರಗಳ ಪೈಕಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ವಹಣೆಯಲ್ಲಿ ಇರುವ ಕೇಂದ್ರಗಳನ್ನು ಹೊರತುಪಡಿಸಿ ಉಳಿದ ಕೇಂದ್ರಗಳಿಂದ ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ ಎನ್ನುವ ದೂರುಗಳಿವೆ.
ಕ್ಷೇತ್ರ ಮಟ್ಟದಲ್ಲಿ ಕೃಷಿಗೆ ಬಳಸುವ ಯಂತ್ರೋಪಕರಣಗಳ ಉಪಯೋಗಿತ ಕನಿಷ್ಠ ಕಾರ್ಯಾವಧಿ ಅಂದಾಜು ಏಳು ವರ್ಷಗಳಾಗಿರುತ್ತದೆ. ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪನೆಯಾಗಿ ಏಳು ವರ್ಷಗಳು
ಕಳೆದಿರುವಲ್ಲಿ ದಾಸ್ತಾನು ಮಾಡಲಾದ ಕೆಲ ಉಪಕರಣಗಳು ದುರಸ್ತಿಗೂ ಮೀರಿ ಹಾಳಾಗಿರುವುದು, ಸಂಸ್ಥೆಗಳೊಂದಿಗೆ ಮಾಡಿಕೊಂಡ ಒಡಂಬಡಿಕೆ ಅವಧಿ ಮುಕ್ತಾಯ ಆಗಿರುವುದು, ಒಡಂಬಡಿಕೆ ಅವಧಿಯ ವಿಸ್ತರಣೆಗೆ ಸೇವಾದಾರ ಸಂಸ್ಥೆಗಳು ಒಪ್ಪದಿರುವುದು, ವಿಸ್ತ್ರತ ಒಡಂಬಡಿಕೆ ಅವಧಿಯಲ್ಲಿ ಸೇವಾದಾರ ಸಂಸ್ಥೆಗಳು ಕೃಷಿ ಯಂತ್ರಧಾರೆ ಕೇಂದ್ರಗಳನ್ನು ನಿರ್ವಹಣೆ ಮಾಡಲು ಒಪ್ಪದಿರುವುದು, ಅಸಮರ್ಪಕ ಕಾರ್ಯನಿರ್ವಹಣೆಯಿಂದ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ವಶಪಡಿಸಿಕೊಂಡಿರುವುದು, ಒಡಂಬಡಿಕೆ ಅವಧಿ ಮುಗಿದು ಹೋದ ಕೃಷಿ ಯಂತ್ರಧಾರೆ ಕೇಂದ್ರಗಳ ತಮ್ಮ ಪಾಲಿನ ಹೂಡಿದ ಬಂಡವಾಳವನ್ನು ಸೇವಾದಾರ ಸಂಸ್ಥೆಗಳು ಕೇಳುತ್ತಿರುವುದು ಮತ್ತಿತರ ಕಾರಣಗಳಿಂದಲೂ ಕೃಷಿ ಯಂತ್ರಧಾರೆ ಯೋಜನೆಯ ಲಾಭ ರೈತರಿಗೆ ಸಿಗದಂತಾಗಿದೆ.
ಒಡಂಬಡಿಕೆ ಅವಧಿಯಲ್ಲಿ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಅಥವಾ ಸ್ಥಗಿತಗೊಂಡಿರುವ ಅಥವಾ ಒಡಂಬಡಿಕೆ ಅವಧಿ ಮೀರಿದ ನಂತರ ಒಡಂಬಡಿಕೆಯನ್ನು ವಿಸ್ತರಿಸಲು ಇಚ್ಛಿಸದ ಸೇವಾದಾರ ಸಂಸ್ಥೆಗಳು ನಿರ್ವಹಿಸುತ್ತಿರುವ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಇತರೆ ಆಸಕ್ತಿಯುಳ್ಳ ಸಂಸ್ಥೆಗಳಿಗೆ ಹಸ್ತಾಂತರಿಸಲು ಆಯಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹರ್ಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಹೊಸ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲು ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿರುವುದಿಲ್ಲ. ಆದರೆ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಬಾಡಿಗೆ ರೂಪದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಹಾಗೂ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಎನ್. ಚೆಲುವರಾಯ ಸ್ವಾಮಿ, ಕೃಷಿ ಸಚಿವ
ಕೊಡಗಿನಲ್ಲಿ ೧೬ ಹೋಬಳಿಗಳಲ್ಲೂ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ವಹಣೆಯಲ್ಲಿ ಇರುವ ೩ ಕೇಂದ್ರಗಳು ಉತ್ತಮವಾಗಿ ನಡೆಯುತ್ತಿವೆ. ಉಳಿದ ೧೩ ಕೇಂದ್ರಗಳನ್ನು ಮತ್ತೊಂದು ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಅವುಗಳಲ್ಲಿ ಸ್ವಲ್ಪ ಸಮಸ್ಯೆ ಇದೆ.
ಸೋಮಸುಂದರ ಕೆ.ಎಂ., ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಕೊಡಗು