ಜಿಲ್ಲೆ

ಎರಡು ಬೆಳೆಗೆ ನೀರು ಕೊಡದಿದ್ದರೆ ಹೋರಾಟ, ಬಸವರಾಜ ದಢೇಸುಗೂರು ಎಚ್ಚರಿಕೆ

ಕೊಪ್ಪಳ: ರಾಜ್ಯ ಸರ್ಕಾರ, ಟಿಬಿ ಬೋರ್ಡ್​ ರ್ನಿಲಕ್ಷ$್ಯದಿಂದ ಟಿಬಿ ಡ್ಯಾಂ 19ನೇ ಕ್ರಸ್ಟ್​ ಗೇಟ್​ ಸಕಾಲದಲ್ಲಿ ಅಳವಡಿಕೆ ಆಗಿಲ್ಲ. ರೈತರ ಸಮಸ್ಯೆ ಆಲಿಸುವ ಬದಲು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದಿದ್ದಾರೆ. ಈ ವರ್ಷ ಎರಡು ಬೆಳೆಗೆ ನೀರು ಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಎಚ್ಚರಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಶಿವರಾಜ ತಂಗಡಗಿ ಜನರು, ರೈತರ ಅಳಲು ಕೇಳುತ್ತಿಲ್ಲ. ಸರ್ಕಾರ ಬೋರ್ಡ್​ ಮೇಲೆ ಒತ್ತಡ ಹೇರುತ್ತಿಲ್ಲ. ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಲು ಮುನಿರಾಬಾದ್​ ಕಾಡಾ ಕಚೇರಿಯಲ್ಲಿ ಸಭೆ ನಡೆಸುವುದು ವಾಡಿಕೆ. ಆದರೆ, ಜನರ ಪ್ರಶ್ನೆಗೆ ಹೆದರಿ ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. 19ನೇ ಕ್ರಸ್ಟ್​ ಗೇಟ್​ ಅಳವಡಿಸಿಲ್ಲ. ಈ ವರ್ಷ ಶೇ.80ರಷ್ಟು ಜಲಾಶಯ ಭರ್ತಿಗೆ ಅವಕಾಶವಿದೆ. ಇದರಿಂದ ಈ ವರ್ಷ ಒಂದೇ ಬೆಳೆಗೆ ನೀರು ಸಿಗಲಿದೆ. ಸರ್ಕಾರ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ಕಿಡಿಕಾರಿದರು.

ಸಂಸದ ರಾಜಶೇಖರ ಹಿಟ್ನಾಳ ಜೂನ್​ ತಿಂಗಳು ಮುಗಿಯುವುದರೊಳಗೆ ಗೇಟ್​ ಅಳವಡಿಕೆ ಆಗಲಿದೆ ಎಂದರು. ಈಗ ಎಲ್ಲ ಸುಳ್ಳಾಗಿದೆ. ಟಿಬಿ ಬೋರ್ಡ್​ ಟೆಂಡರ್​ ಕರೆದು ಸುಮ್ಮನಾಗಿದೆ. ಎರಡನೇ ಬೆಳೆಗೆ ನೀರು ಸಿಗದಿದ್ದರೆ ನಾಲ್ಕು ಜಿಲ್ಲೆಯಲ್ಲಿ ಬರದ ಛಾಯೆ ಆವರಿಸುವುದು. ಜನ ಗುಳೆ ಹೋಗಬೇಕಾಗುತ್ತದೆ. ಸರ್ಕಾರ ಏನು ಮಾಡುತ್ತದೆಯೋ ಗೊತ್ತಿಲ್ಲ. ರೈತರ ಕಾಳಜಿ ಇದ್ದರೆ ಎರಡು ಬೆಳೆಗೆ ನೀರು ಹೊಂದಿಸಬೇಕು. ಈಗಾಗಲೇ ಅನ್ನದಾತರು ಅಸಮಾಧಾನಗೊಂಡಿದ್ದಾರೆ. ಮಾತು ತಪ್ಪಿದಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ಹಾಕಿಕೊಳ್ಳುತ್ತೇವೆಂದು ತಿಳಿಸಿದರು.

ವಿಪ ಸದಸ್ಯೆ ಹೇಮಲತಾ ನಾಯಕ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ ಗುಡದಳ್ಳಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪುಟ್ಟರಾಜ ಚಕ್ಕಿ, ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು.