ಸಂತೋಷ ವೈದ್ಯ ಹುಬ್ಬಳ್ಳಿ
ದೇಶಾದ್ಯಂತ ಬ್ಲಾಕ್ ಮಟ್ಟದಿಂದ ರಾಜ್ಯ ಘಟಕದವರೆಗೆ ಯುವ ಕಾಂಗ್ರೆಸ್ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಧಾರವಾಡ ಜಿಲ್ಲೆಯಲ್ಲೂ ಚುನಾವಣೆ ಕಾವು ಕಾಣಿಸಿಕೊಂಡಿದೆ. ಹು-ಧಾ ಮಹಾನಗರ ಜಿಲ್ಲಾ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಘಟಕಗಳ ಚುನಾವಣೆಯು ಇಲ್ಲಿ ಮಹತ್ವ ಪಡೆಯುತ್ತದೆ. ಈ ಎರಡೂ ಘಟಕಗಳಿಗೆ ಅಧ್ಯಕ್ಷರಾಗಲು ಯುವ ಕಾಂಗ್ರೆಸ್ಸಿಗರು ತೀವ್ರ ಪೈಪೋಟಿಗೆ ಇಳಿದಿದ್ದಾರೆ.
ಹು-ಧಾ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಿಶೋರ ಶಿರಸಂಗಿ, ಅರ್ಜುನ ಪಾಟೀಲ, ರಾಹುಲ ಬೆಳದಡಿ, ಕಾಶಿಂ ಕೂಡಲಗಿ, ಸಯ್ಯದ್ ನದೀಂ ಶೇಖ್, ಮಣಿಕಂಠ ಗುಡಿಹಾಳ, ವಾಸಿಂ ಹುಕ್ಕೇರಿ, ರಾಕಿನಖಾನ್ ಲೋಧಿ, ಅಕಿಬ್ ತರಫದಾರ, ಮೆಹಬೂಬಸಾಬ್ ಕಿತ್ತೂರ, ರೋಹನ ಹಿಪ್ಪರಗಿ ಹಾಗೂ ದಿವ್ಯಾ ಸಾನು ಸ್ಪರ್ಧಿಸಿದ್ದಾರೆ. ಧಾರವಾಡ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿದ್ಧಾರ್ಥ ಡಂಬಳ, ಆಯತುಲ್ಲಾಖಾನ ಜಾಹಗಿರದಾರ, ದೇವರಾಜ ಪರಸಪ್ಪನವರ, ನಿಕಿತಾ ಹೆಗ್ಗಣ್ಣವರ, ದೇವೇಂದ್ರಗೌಡ ಧರ್ಮಗೌಡರ, ಮಹ್ಮದ್ ಇಕ್ಬಾಲ್ ತಮಟಗಾರ, ನೌಶದುಲ್ಲಾಖಾನ್ ಜಾಹಗಿರದಾರ, ಮಲ್ಲಿಕಜಾನ್ ನದಾಫ್ ಹಾಗೂ ಸೂರಜ್ ಪುಡಕಲಕಟ್ಟಿ ಸ್ಪರ್ಧಾ ಕಣದಲ್ಲಿ ಇದ್ದಾರೆ.
ಇಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿ ಸೋತವರು ಮೀಸಲಾತಿ ಮತ್ತು ಪಡೆದ ಮತಗಳಿಗೆ ಅನುಗುಣವಾಗಿ 6 ಉಪಾಧ್ಯಕ್ಷ ಸ್ಥಾನಗಳಿಗೆ ಅರ್ಹರಾಗುತ್ತಾರೆ. 6 ಉಪಾಧ್ಯಕ್ಷ ಸ್ಥಾನವು ಸಾಮಾನ್ಯ, ಎಸ್ಸಿ, ಎಸ್ಟಿ, ಒಬಿಸಿ, ಮಹಿಳೆ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾಗಿದೆ. ರಾಜ್ಯದಲ್ಲಿನ ಒಟ್ಟು ಜಿಲ್ಲಾಧ್ಯಕ್ಷ ಸ್ಥಾನಗಳಲ್ಲಿ ಶೇ. 12.5ರಷ್ಟು ಎಸ್ಸಿ- ಎಸ್ಟಿಗೆ ಮೀಸಲಿಟ್ಟಿರುವುದು ಗಮನಾರ್ಹ ಅಂಶ.
ಜಿಲ್ಲಾ ಅಧ್ಯಕ್ಷ ಸ್ಥಾನದ ಮುಂದೆ ಉಳಿದೆಲ್ಲವೂ ನಗಣ್ಯ. ಎರಡೂ ಘಟಕಗಳ 20 ಪ್ರಧಾನ ಕಾರ್ಯದರ್ಶಿಗಳ ಸ್ಥಾನಗಳಿಗೂ ಚುನಾವಣೆ ನಡೆಯುತ್ತದೆ. ಆದರೆ, ಇಲ್ಲಿ ಸ್ಪರ್ಧೆಗೆ ಯುವ ಕಾಂಗ್ರೆಸ್ಸಿಗರು ಉತ್ಸಾಹ ತೋರಿಲ್ಲ. ನಿಗದಿತ ಸಂಖ್ಯೆಗಿಂತ ಕಡಿಮೆ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ಸಿನ 20 ಪ್ರಧಾನ ಕಾರ್ಯದರ್ಶಿ ಸ್ಥಾನಗಳಿಗೆ 14 ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಗಳಿಗೆ 8 ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. ಕೊರತೆಯಾಗುವ ಸ್ಥಾನಗಳನ್ನು ಮುಂದಿನ ದಿನಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಈ ಬಾರಿ ಯುವ ಕಾಂಗ್ರೆಸ್ ಚುನಾವಣೆ ಹಾಗೂ ಸದಸ್ಯತ್ವ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. ‘ವಿತ್ ಐವೈಸಿ’ ಮೊಬೈಲ್ ಆಪ್ ಮೂಲಕವೇ ಸದಸ್ಯತ್ವ ನೋಂದಣಿಯಾಗಲಿದೆ. ಹಿಂದಿನ ಎಲ್ಲ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಆಪ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಸುತ್ತ ಮತ ಗಳಿಸುತ್ತ ಹೋಗಬೇಕು. ಹೊಸದಾಗಿ ನೋಂದಣಿಯಾಗುವ ಸದಸ್ಯರು ರಾಜ್ಯ ಘಟಕದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಘಟಕದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಅಸೆಂಬ್ಲಿ ಸಮಿತಿ, ಬ್ಲಾಕ್ ಸಮಿತಿ ಸೇರಿ 6 ಮತಗಳನ್ನು ಚಲಾಯಿಸಬೇಕು. ಈ ಪ್ರಕ್ರಿಯೆ ಆ. 21ರಿಂದ ಆರಂಭಗೊಂಡಿದ್ದು ಸೆಪ್ಟೆಂಬರ್ 20ಕ್ಕೆ ಕೊನೆಗೊಳ್ಳಲಿದೆ.
ಪ್ರತಿ 3 ವರ್ಷಕ್ಕೊಮ್ಮೆ ಯುವ ಕಾಂಗ್ರೆಸ್ಗೆ ಚುನಾವಣೆ ನಡೆಸಲಾಗುತ್ತದೆ. ಹಿಂದಿನ ಅವಧಿಯಲ್ಲಿ ಹು-ಧಾ ಮಹಾನಗರ ಜಿಲ್ಲೆಯಲ್ಲಿ ಸುಮಾರು 17 ಸಾವಿರ ಹಾಗೂ ಧಾರವಾಡ ಗ್ರಾಮೀಣದಲ್ಲಿ ಸುಮಾರು 15 ಸಾವಿರ ಯುವ ಕಾಂಗ್ರೆಸ್ ಸದಸ್ಯರಿದ್ದರು. ಮಹಾನಗರ ಜಿಲ್ಲಾ ಸಮಿತಿ ಇಮ್ರಾನ್ ಎಲಿಗಾರ ಹಾಗೂ ಧಾರವಾಡ ಗ್ರಾಮೀಣಕ್ಕೆ ವಿನೋದ ಅಸೂಟಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಆಗ ಆಪ್ ಬಳಕೆ ಮಾಡಿರಲಿಲ್ಲ. ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಮತದಾನ ನಡೆದಿತ್ತು. ಸದಸ್ಯತ್ವ ಅಭಿಯಾನ ಮತ್ತು ಮತದಾನ ಪ್ರತ್ಯೇಕವಾಗಿ ನಡೆದಿದ್ದವು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಧಾರವಾಡ ಜಿಲ್ಲೆಯಿಂದ ಅಬ್ದುಲ್ ದೇಸಾಯಿ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಾಗಾರ್ಜುನ್ ಕತ್ರಿಮಲ್, ನಾಗರಾಜ ಕೊಟಗಿ, ಮಹಮ್ಮದ್ ಫಿರೋಜ್ ಪಠಾಣ ಹಾಗೂ ಆಕಾಶ ಕೊನೇರಿ ಸ್ಪರ್ಧಿಸಿದ್ದಾರೆ.
ಯುವ ಕಾಂಗ್ರೆಸ್ ಸಮಿತಿಗಳಿಗೆ ಸದಸ್ಯರಾಗಲು ಕೆಲವು ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. 18ರಿಂದ 35 ವರ್ಷದೊಳಗಿನ ಭಾರತೀಯ ನಾಗರಿಕ ಮಾತ್ರ ಸದಸ್ಯರಾಗಲು ಅರ್ಹ. ಯಾವುದೇ ರಾಜಕೀಯ ಪಕ್ಷ, ಸಂಘಟನೆಯ ಭಾಗವಾಗಿರಬಾರದು. ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ, ತನ್ನ ಹೆಸರಿನಲ್ಲಿರುವ ಮೊಬೈಲ್ ಸಂಖ್ಯೆ, ಇತ್ತೀಚಿನ ಭಾವಚಿತ್ರ ಕೊಡಬೇಕು. 50 ರೂ. ಶುಲ್ಕ ಪಾವತಿಸಬೇಕು.