ಜಿಲ್ಲೆ

ಜಿಲ್ಲಾ ನೀರು, ನೈರ್ಮಲ್ಯ ಮಿಷನ್ ಸಮಿತಿ ಸಭೆ

ಮಡಿಕೇರಿ: ಮಡಿಕೇರಿ ತಾಲೂಕಿನಲ್ಲಿ ಕೈಗೊಳ್ಳಬೇಕಿರುವ ೨೮ ಹೊಸ ಕುಡಿಯುವ ನೀರಿನ ಶುದ್ಧೀಕರಣ ಘಟಕ ಪ್ರಸ್ತಾವನೆ ಸಂಬಂಧ ಕಡತ ಮಂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ನಿರ್ದೇಶನ ನೀಡಿದರು.


ನಗರದ ಜಿ.ಪಂ.ಸಿಇಒ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಿಲ್ಲೆಯಲ್ಲಿ ಹೊಸದಾಗಿ ಅನುಷ್ಠಾನ ಮಾಡಲು ಉದ್ದೇಶಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಬಂಧಿಸಿದಂತೆ ಇಲಾಖೆ ನಿರ್ದೇಶಕರಿಗೆ ಪತ್ರ ಪಡೆದು ಮಾಹಿತಿ ಪಡೆದುಕೊಳ್ಳಬೇಕು. ಜಲಜೀವನ್ ಮಿಷನ್ ಬ್ಯಾಚು ಒಂದು ಯೋಜನೆಯಡಿ ಮಡಿಕೇರಿ ತಾಲೂಕಿನಲ್ಲಿ ಕೈಗೊಳ್ಳಬೇಕಿರುವ ೨೮ ನೂತನ ಕುಡಿಯುವ ನೀರಿನ ಶುದ್ಧೀಕರಣ ಘಟಕ ಪ್ರಸ್ತಾವನೆ ಸಂಬಂಧ ಕಡತ ಮಂಡಿಸಲು ಸೂಚಿಸಿದರು.


ಇದೇ ಸಂದರ್ಭದಲ್ಲಿ ಜಲಜೀವನ್ ಮಿಷನ್ ಯೋಜನಾ ಮಾಹಿತಿಯ ಫಲಕಗಳ ಅಳವಡಿಕೆಗೆ ದರ ನಿಗಧಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರಯೋಗಾಲಯ ವಾರ್ಷಿಕ ಕ್ರೀಯಾಯೋಜನೆ ಅನುಮೋದನೆ ಹಾಗೂ ಪಿಎಂ-ಜನ್‌ಮನ್ ಯೋಜನೆಯಡಿ ಪಿವಿಟಿಜಿ ಜನವಸತಿ ಕಾಮಗಾರಿಗಳಿಗೆ ಜಿ.ಪಂ.ಸಿಇಒ ಅನುಮೋದನೆ ನೀಡಿದರು


ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಚೇರಿಯ ಕಾರ್ಯಪಾಲಕ ಅಭಿಯಂತರ ಪಿ.ಆರ್.ಸುರೇಶ್ ಕುಮಾರ್ ನೀರಿನ ಮಾದರಿ ಪರೀಕ್ಷೆಗಳಲ್ಲಿ ಕಂಡುಬಂದಿರುವ ರಾಸಾಯನಿಕ ವರದಿ ಮಂಡಿಸಿ ಮಾತನಾಡಿ, ಪಂಚಾಯಿತಿ ಮಟ್ಟದಲ್ಲಿ ಎಫ್‌ಟಿಕೆ ಕಿಟ್ ಉಪಯೋಗಿಸಿಕೊಂಡು ನೀರಿನ ಮಾದರಿಯನ್ನು ಪರೀಕ್ಷಿಸಿ ಶುದ್ಧವಾಗಿರುವ ನೀರನ್ನು ಕುಡಿಯಲು ಪೂರೈಸುವಂತೆ ನಿರ್ದೇಶನ ನೀಡಿದರು.


ಜಿಲ್ಲೆಯಲ್ಲಿ ೧,೦೫,೩೩೧ ಕುಟುಂಬಗಳಿದ್ದು, ಮಡಿಕೇರಿ ತಾಲೂಕಿನಲ್ಲಿ ೮,೩೨೫, ಸೋಮವಾರಪೇಟೆ ತಾಲೂಕಿನಲ್ಲಿ ೩೦,೯೩೦, ಕುಶಾಲನಗರ ತಾಲೂಕಿನಲ್ಲಿ ೧೯,೩೮೮, ವಿರಾಜಪೇಟೆ ತಾಲೂಕಿನಲ್ಲಿ ೨೦,೪೯೬, ಪೊನ್ನಂಪೇಟೆ ತಾಲೂಕಿನಲ್ಲಿ ೨೬,೧೯೨ ಕುಟುಂಬಗಳಿದ್ದು, ಸುಮಾರು ೮೮,೫೩೫ ಲಕ್ಷಗಳಿಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದು ವಿವರಿಸಿದರು.


ಸಭೆಯಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಎಸ್.ಧನರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಡಾ.ಮಧುಸೂದನ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕೃಷ್ಣಪ್ಪ, ಸಣ್ಣ ನೀರಾವರಿ ಇಲಾಖೆಯ ಅಭಿಯಂತರರು, ಕೃಷಿ ಇಲಾಖೆಯ ಉಪ ನಿರ್ದೇಶಕರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಇತರರು ಇದ್ದರು.