ಜಿಲ್ಲೆ

ನೈರ್ಮಲ್ಯ ಕೆಲಸಗಾರರಿಗೆ ಪುನರ್ವಸತಿ ಕಲ್ಪಿಸಿ...

ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ

ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಈ ಹಿಂದೆ ಮೆನ್ಯುವಲ್​ ಸ್ಕ್ಯಾವೆಂಜರ್ಸ್​ (ನೈರ್ಮಲ್ಯ ಕೆಲಸಗಾರರು) ವೃತ್ತಿ ನಿರ್ವಹಿಸಿದವರಿಗೆ ಸರ್ಕಾರದ ವಿವಿಧ ಸೌಲಭ್ಯ ಸೇರಿದಂತೆ ಪುನರ್ವಸತಿ ಯೋಜನೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ ನೀಡಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜುಲೈ 10ರಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿಯ ದ್ವಿತೀಯ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಮೆನ್ಯುವಲ್​ ಸ್ಕ್ಯಾವೆಂಜರ್ಸ್ ಪದ್ಧತಿ ದೇಶಾದ್ಯಂತ ನಿಷೇಧವಿದೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅವರಿಂದ ಆ ಕೆಲಸ ಮಾಡಿಸಿದ್ದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ

ಅರ್ಹ ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ನೀಡಬೇಕು. ಜಿಲ್ಲೆಯಲ್ಲಿ ಕೆಲ ಪೌರಕಾರ್ಮಿಕರು ನಗರ ವ್ಯಾಪ್ತಿಯಿಂದ ಹೊರ ಭಾಗದಲ್ಲಿ ನಿವೇಶನ ಹೊಂದಿದ್ದು, ಅವರಿಗೆ ವಸತಿ ಸೌಲಭ್ಯ ಕಲ್ಪಿಸಲು ನಿಯಮಾವಳಿಯಲ್ಲಿ ಬದಲಾವಣೆ ಆಗಬೇಕಿದ್ದು, ಆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಅನುಮತಿ ಪಡೆಯಬೇಕು. ಸುರಕ್ಷತಾ ಪರಿಕರ ಧರಿಸಿಯೇ ಪೌರ ಕಾರ್ಮಿಕರು ದೈನಂದಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.

ಯಂತ್ರಗಳನ್ನೇ ಬಳಸಿ

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲು ಸಹ ಕಡ್ಡಾಯವಾಗಿ ಸಕ್ಕಿಂಗ್​ ಹಾಗೂ ಜೆಟ್ಟಿಂಗ್​ ಯಂತ್ರದ ಮೂಲಕವೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ವೈಜ್ಞಾನಿಕ ರೀತಿಯಲ್ಲಿ ಎಫ್​ಎಸ್​ಎಂಎಸ್​ ಘಟಕಗಳಲ್ಲಿಯೇ ಮಲ ತ್ಯಾಜ್ಯ ನಿರ್ವಹಣೆ ವಿಲೇವಾರಿ ಮಾಡಬೇಕು. ಜಿಲ್ಲೆಯಲ್ಲಿ ಕೈಗೊಂಡಿರುವ ಎಫ್​ಎಸ್​ಎಂಎಸ್​ ಘಟಕಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು ಎಂದು ಡಿಸಿ ಸೂಚಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ, ಸಮಿತಿಯ ಸದಸ್ಯರಾದ ಪ್ರಶಾಂತಿ ವಸಂತ, ನಾಗರಾಜ ರಮಾನಾಥ, ಕೊಟ್ರಿಬಾಯಿ ಹಾಗೂ ಶಂಕರ, ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.

ವಸತಿ ಶಾಲೆಗಳಿಗೆ ನೇರ ಪ್ರವೇಶಾತಿ

ಪೌರಕಾರ್ಮಿಕರ ಮಕ್ಕಳು ಹೆಚ್ಚಿನ ಶಿಕ್ಷಣದೊಂದಿಗೆ ಉನ್ನತ ಸ್ಥಾನ ಹೊಂದಲು ಅನುಕೂಲವಾಗಲು ವಸತಿ ಶಾಲೆಗಳಿಗೆ ನೇರ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಪೌರ ಕಾರ್ಮಿಕರಲ್ಲಿ ಅರಿವು ಮೂಡಿಸಬೇಕು. ಮುಂದಿನ ಸಭೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡಿದ್ದಾರೆಂಬ ಮಾಹಿತಿ ನೀಡಬೇಕು. ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಬೇಕು.ಪೌಷ್ಟಿಕ ಆಹಾರ ವಿತರಿಸಬೇಕು. ಎಲ್ಲ ಪೌರ ಕಾರ್ಮಿಕರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳನ್ನು ಕಡ್ಡಾಯವಾಗಿ ಮಾಡಿಸಬೇಕು. ಅದರಿಂದ ಭವಿಷ್ಯದಲ್ಲಿ ಅವರಿಗೆ ಅನುಕೂಲವಾಗಲಿದೆ ಎಂದು ಡಿಸಿ ಸ್ವರೂಪಾ ತಿಳಿಸಿದರು.
ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸಕಾಲಕ್ಕೆ ಪ್ರತಿ ತಿಂಗಳ ವೇತನ ಪಾವತಿಸಬೇಕು. ಗುತ್ತಿಗೆ ಆಧಾರದದ ಪೌರ ಕಾರ್ಮಿಕರಿಗೂ ಸಕಾಲಕ್ಕೆ ವೇತನ ಪಾವತಿ, ಇಎಸ್​ಐ ಹಾಗೂ ಪಿಎಫ್​ ಪಾವತಿ ಆಗುತ್ತಿದೆಯೋ ಇಲ್ಲವೋ ಎಂದು ಅಧಿಕಾರಿಗಳು ಪರಿಶೀಲಿಸಬೇಕು. | ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.