ಉಡುಪಿ: ಚುನಾವಣಾ ಆಯೋಗ ಪ್ರತೀ ಜಿಲ್ಲೆಗೆ ಪ್ರತ್ಯೇಕವಾಗಿ ವಿಶೇಷವಾದ ಥೀಮ್ ಬಳಸಿ ಒಂದು ಮತಗಟ್ಟೆಯನ್ನು ನಿರ್ಮಿಸುವಂತೆ ತಿಳಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಯಕ್ಷಗಾನ ಅಥವಾ ಕಂಬಳದ ಮಹತ್ವ ಬಿಂಬಿಸುವ ರೀತಿಯಲ್ಲಿ ಮತಗಟ್ಟೆಯನ್ನು ಅಲಂಕರಿಸಲು ಮತ್ತು ಸ್ಥಳೀಯ ನೈಸರ್ಗಿಕ ಪರಿಕರಗಳನ್ನು ಬಳಸಿ ಚಪ್ಪರ ಹಾಕಲು ಪೂರ್ವ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮತದಾರರು ಮತದಾನ ಮಾಡುವ ಮೂಲಕ , ಗರಿಷ್ಠ ಪ್ರಮಾಣದ ದಾಖಲೆಯ ಮತದಾನ ನಡೆಯುವಂತಾಗಲೂ ಜಿಲ್ಲಾ ಸ್ವೀಪ್ ಸಮಿತಿವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಶೇ.78.36 ಮತದಾನವಾಗಿದ್ದು, ಇದಕ್ಕಿಂತಲೂ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಸ್ವೀಪ್ ಸಮಿತಿಯ ಸದಸ್ಯರು ಅಧ್ಯಯನ ನಡೆಸಿ, ಕಡಿಮೆ ಮತದಾನವಾಗಿರುವುದಕ್ಕೆ ಕಾರಣ ಮತ್ತು ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿ ನೀಡಬೇಕು. ಎಲ್ಲಾ ನಗರಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಜಾಹೀರಾತು ಫಲಕಗಳ ಸಮಗ್ರ ವಿವರಗಳನ್ನು ಸಂಗ್ರಹಿಸಿ, ಚುನಾವಣೆ ಘೋಷಣೆಯಾದ 24 ಗಂಟೆಯಲ್ಲಿ ಈ ಫಲಕಗಳಲ್ಲಿ ಸ್ವೀಪ್ ಕುರಿತು ಜಾಹೀರಾತು ಅಳವಡಿಸಲು ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುನ್ಮಾನ ಮತಯಂತ್ರದ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡುವ ಜೊತೆಗೆ ಎಲ್ಲಾ ಶಾಲಾ ಕಾಲೆಜುಗಳಲ್ಲಿನ ಮತದಾರರ ಸಾಕ್ಷರತಾ ಕ್ಲಬ್‌ಗಳಲ್ಲಿ ಸಹ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಡಿಡಿಪಿಐ ಮತ್ತು ಡಿಡಿಪಿಯು ಅವರಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ 1111 ಮತಗಟ್ಟೆಗಳಲ್ಲಿ ಮತದಾರರಿಗೆ ಅಗತ್ಯ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ಪರಿಶೀಲನೆ ನಡೆಸುವಂತೆ ಹಾಗೂ ಸ್ವೀಪ್ ಕಾರ್ಯಕ್ರಮದಲ್ಲಿ ವಿನೂತನ ಮತ್ತು ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾನ ಪ್ರಮಾಣ ಹೆಚ್ಚಳಕ್ಕೆ ಮತ್ತು ವಿಶೇಷವಾಗಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಲು ಯೋಜನೆಗಳನ್ನು ರೂಪಿಸುವಂತೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.