ಶಿವಮೂರ್ತಿ ಹಿರೇಮಠ ರಾಯಚೂರು
ಜಿಲ್ಲಾ ಕೇಂದ್ರದಲ್ಲಿ ಇದ್ದೂ ಇಲ್ಲದಂತಾಗಿದ್ದ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ಪೆವಿಲಿಯನ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸಿಂಥೆಟಿಕ್ ಟ್ರಾೃಕ್ ಹಾಗೂ ಇತರ ಕಾಮಗಾರಿಗಳು ಬಾಕಿ ಉಳಿದಿವೆ.
ಹಳೆಯ ಕ್ರೀಡಾಂಗಣ ನೆಲಸಮಗೊಳಿಸಿದ ನಂತರ ಹೊಸ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಕೆಲವು ತಿಂಗಳ ಹಿಂದೆ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಪೆವಿಲಿಯನ್‌ಗೆ ಬಣ್ಣ ಬಳಿಯುವ ಕಾರ್ಯ ಅಂತಿಮ ಹಂತದಲ್ಲಿದೆ. ಕಳೆದ ಐದಾರು ವರ್ಷದಿಂದ ಕ್ರೀಡಾಂಗಣ ಹೆಸರಿಗೆ ಮಾತ್ರ ಇತ್ತು. ಯಾವುದೇ ಕ್ರೀಡೆಗಳಿಗೆ ಉಪಯೋಗಕ್ಕೆ ಬಾರದಂತಾಗಿತ್ತು. ನಿರ್ವಹಣೆಯಿಲ್ಲದೆ ಈಜುಕೊಳವೂ ಮುಚ್ಚಿದ್ದರಿಂದ ಕ್ರೀಡಾಪಟುಗಳು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು. ಮಳೆ ಬಂದಾಗ ನೀರು ನಿಂತು ಕ್ರೀಡಾಂಗಣ ಕೆರೆಯಂತಾಗುತ್ತಿತ್ತು.
ಮೈದಾನವನ್ನು ಮರಂ ಹಾಕಿ ಸಮತಟ್ಟು ಮಾಡಲಾಗಿದ್ದು, ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಸಮಸ್ಯೆಗಳು ನಿವಾರಣೆಯಾಗಿದೆ. ಪೆವಿಲಿನ್ ನಿರ್ಮಾಣ ಮಾಡಲಾಗಿದ್ದರೂ ಪ್ಲಾೃಸ್ಟರಿಂಗ್ ಮಾಡಿರಲಿಲ್ಲ. ಈ ಹಿಂದೆ ನಿರ್ಮಿಸಿದ್ದ ಟ್ರಾೃಕ್ ಕಳಪೆಯಾಗಿದ್ದರಿಂದ ಉಪಯೋಗಕ್ಕೆ ಬಾರದಂತಾಗಿತ್ತು. ಇದರಿಂದ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ತೊಂದರೆಯಾಗಿತ್ತು.
ಕ್ರೀಡಾಂಗಣದ ಹೊರಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ಕಬಡ್ಡಿ, ಬಾಸ್ಕೆಟ್‌ಬಾಲ್, ಲಾನ್ ಟೆನ್ನಿಸ್ ಅಂಕಣಗಳು ಹಾಳಾಗದಂತೆ ಸುತ್ತಲೂ ಕಬ್ಬಿಣದ ಸರಳು ಹಾಕಿ ಭದ್ರಗೊಳಿಸಲಾಗಿದೆ. ಇದರಿಂದಾಗಿ ರಾತ್ರಿ ಕುಡುಕರ ತಾಣವಾಗುತ್ತಿದ್ದ ಕ್ರೀಡಾ ಅಂಕಣಗಳಿಗೆ ಭದ್ರತೆ ಸಿಕ್ಕಂತಾಗಿದೆ. ನಿರ್ಲಕ್ಷೃಕ್ಕೆ ಒಳಗಾಗಿದ್ದ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಯ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿರುವುದು ಕ್ರೀಡಾಪಟುಗಳಲ್ಲಿ ಸಂತಸ ಮೂಡಿಸಿದೆ. ಗುಣಮಟ್ಟದ ಕಾಮಗಾರಿಯೊಂದಿಗೆ ಉತ್ತಮ ನಿರ್ವಹಣೆ ಮಾಡುವ ಮೂಲಕ ಕ್ರೀಡಾಪಟುಗಳ ಅಭ್ಯಾಸಕ್ಕೆ ವ್ಯವಸ್ಥೆ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಕೆಕೆಆರ್‌ಡಿಬಿಗೆ ಮೂರು ಕೋಟಿ ರೂ. ಪ್ರಸ್ತಾವನೆ
ಅಥ್ಲೆಟಿಕ್ ಸ್ಪರ್ಧೆಗಳಿಗಾಗಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾೃಕ್ ನಿರ್ಮಾಣ ಮಾಡಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದೆ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಟ್ರಾೃಕ್ ನಿರ್ಮಾಣವಾದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗಹಿಸುವ ಕ್ರೀಡಾಪಟುಗಳ ಅಭ್ಯಾಸಕ್ಕೆ ಅನುಕೂಲವಾಗಲಿದೆ. ಈ ಹಿಂದೆ ಓಟದ ಟ್ರಾೃಕ್ ನಿರ್ಮಾಣ ಮಾಡಲಾಗಿತ್ತು. ಇಟ್ಟಿಗೆ ಹಾಗೂ ಹಾರೋಬೂದಿ ಹಾಕಿ ನಿರ್ಮಾಣ ಮಾಡಿದ್ದ ಟ್ರಾೃಕ್ ಉಪಯೋಗಕ್ಕೆ ಬಾರದಂತಾಗಿತ್ತು. ಹಿರಿಯ ಅಧಿಕಾರಿಗಳು ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿಂಥೆಟಿಕ್ ಟ್ರಾೃಕ್ ನಿರ್ಮಾಣವಾದಲ್ಲಿ ಅನುಕೂಲವಾಗಲಿದೆ.
ಮಹಿಳಾ ಕ್ರೀಡಾ ಹಾಸ್ಟೆಲ್ ನಿರ್ಮಾಣ ಪ್ರಗತಿಯಲ್ಲಿ
ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದರೂ ವಸತಿ ನಿಲಯದ ವ್ಯವಸ್ಥೆಯಿಲ್ಲದ ಕಾರಣ ಸಮಸ್ಯೆ ಎದುರಿಸುವಂತಾಗಿತ್ತು. ಅದರಲ್ಲೂ ಮಹಿಳಾ ಕ್ರೀಡಾಪಟುಗಳಿಗೆ ವಸತಿ ನಿಲಯ ವ್ಯವಸ್ಥೆಯಿರಲಿಲ್ಲ. ಇದೀಗ ಜಿಲ್ಲಾ ಕ್ರೀಡಾಂಗಣ ಪಕ್ಕದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ 12 ಕೊಠಡಿಗಳ ಮಹಿಳಾ ಕ್ರೀಡಾ ಹಾಸ್ಟೆಲ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ವಸತಿ ನಿಲಯ ಆರಂಭವಾದಲ್ಲಿ ಮಹಿಳಾ ಕ್ರೀಡಾಪಟುಗಳು ಇಲ್ಲಿಯೇ ಇದ್ದು ನಿತ್ಯ ಅಭ್ಯಾಸ ಮಾಡಲು ಅನುಕೂಲವಾಗಲಿದೆ. ನಗರದ ಬಿಆರ್‌ಬಿ ಕಾಲೇಜು ವೃತ್ತದಲ್ಲಿರುವ ಪುರುಷರ ಕ್ರೀಡಾ ವಸತಿ ನಿಲಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ನವೀಕರಣಕ್ಕೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಪುರುಷ ಕ್ರೀಡಾಪಟುಗಳ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಕೆಕೆಆರ್‌ಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈಜುಕೊಳ ಮರು ಆರಂಭ
ನಿರ್ವಹಣೆಯಿಲ್ಲದೆ ಮುಚ್ಚಿದ್ದ ಈಜುಕೊಳವನ್ನು ನವೀಕರಣ ಮಾಡಲಾಗಿದೆ. ಸ್ವಚ್ಛತೆ ಕಾರ್ಯದ ಜತೆಗೆ ಮುರಿದು ಹೋಗಿದ್ದ ಬಾಗಿಲು, ಕಿಟಕಿಗಳನ್ನು ಹೊಸದಾಗಿ ಅಳವಡಿಸಲಾಗಿದೆ. ಸುತ್ತಲೂ ಬೆಳೆದಿದ್ದ ಗಿಡ-ಗಂಟಿಗಳನ್ನು ಕಡಿದು ಟೈಲ್ಸ್ ಹಾಕಲಾಗಿದೆ. ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ಈಜುಕೊಳವನ್ನು ನವೀಕರಣಗೊಳಿಸಲಾಗುತ್ತಿದೆ. ಸಮರ್ಪಕ ನಿರ್ವಹಣೆಗೆ ಸದಸ್ಯತ್ವ ಪಡೆಯುವುದನ್ನು ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.
ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಸಿದ್ಧತೆ ವ್ಯವಸ್ಥೆ
ಒಳಾಂಗಣ ಕ್ರೀಡಾಂಗಣದ ಅಭಿವೃದ್ಧಿಗಾಗಿ ಪ್ರಯತ್ನಗಳು ನಡೆದಿದ್ದು, ಸುಸಜ್ಜಿತ ಆರು ಕೋರ್ಟ್‌ಗಳ ಶಟಲ್ ಬ್ಯಾಡ್ಮಿಂಟನ್ ಅಂಕಣಗಳನ್ನು ನಿರ್ಮಾಣ ಮಾಡಲಾಗಿದೆ. ಕಟ್ಟಿಗೆ ನೆಲಹಾಸು ಹಾಕಿ ಅದರ ಮೇಲೆ 21 ಲಕ್ಷ ರೂ. ವೆಚ್ಚದ ಸಿಂಥೆಟಿಕ್ ಮ್ಯಾಟ್ ಹಾಸಲಾಗಿದೆ. ಇದರಿಂದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸಲು ಅನುಕೂಲವಾಗಲಿದೆ. ಸಿಂಥೆಟಿಕ್ ಮ್ಯಾಟ್ ನಿರ್ವಹಣೆಗಾಗಿ ಕ್ರಮಕೈಗೊಳ್ಳಬೇಕಾದ ಅಗತ್ಯ ಬರುತ್ತಿದೆ.
ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸಗಳು ನಡೆದಿವೆ. ಸಿಂಥೆಟಿಕ್ ಟ್ರಾೃಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ನೆಲ ಹಾಸು ಹಾಕಲಾಗಿದೆ. ಮಹಿಳಾ ಕ್ರೀಡಾ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾಮಗಾರಿಯನ್ನೂ ಆರಂಭಿಸಲಾಗಿದೆ. ಈಜುಕೊಳದ ನವೀಕರಣ ಕಾರ್ಯ ಮುಗಿದಿದೆ.ಈರೇಶ ನಾಯಕ. ಸಹಾಯಕ ನಿರ್ದೇಶಕ, ಯುವಜನ ಸೇವೆ ಮತ್ತು ಕ್ರೀಡಾ ಸಬಲೀಕರಣ ಇಲಾಖೆ, ರಾಯಚೂರು
ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಸಿಂಥೆಟಿಕ್ ಟ್ರಾೃಕ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಇದರಿಂದ ಅಥ್ಲೆಟಿಕ್ ಪಂದ್ಯಾವಳಿ ನಡೆಸಲು ಹಾಗೂ ಕ್ರೀಡಾಪಟುಗಳು ಅಭ್ಯಾಸಕ್ಕೆ ಅನುಕೂಲವಾಗಲಿದೆ.ತಿಮ್ಮಾರೆಡ್ಡಿ, ಕಾರ್ಯದರ್ಶಿ, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್, ರಾಯಚೂರು
ಒಳಾಂಗಣ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ನೆಲಹಾಸು ಹಾಕಿರುವುದರಿಂದ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಇದರಿಂದ ರಾಜ್ಯಮಟ್ಟದ ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸುವುದಕ್ಕಾಗಿ ಅಭ್ಯಾಸ ನಡೆಸಲು ಅನುಕೂಲವಾಗಲಿದೆ. ಸಿಂಥೆಟಿಕ್ ನೆಲಹಾಸು ನಿರ್ವಹಣೆ ತುಂಬಾ ಕಷ್ಟಕರವಾಗಿದ್ದು, ಅದರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ.ಕಿರಣ್ ಬೆಲ್ಲಂ, ಅಧ್ಯಕ್ಷ, ಶಟಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್, ರಾಯಚೂರು