ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸುದ್ದಿಗೋಷ್ಠಿ ನಡೆಸಿದರು. ಈರಣ್ಣ ರಾವೂರ, ವಿಜಯಕುಮಾರ ಕೂಡಿಗನೂರ, ಶರಣಬಸು ಕುಂಬಾರ, ವಿಜಯ ಜೋಶಿ ಇದ್ದಾರೆ.  
ಜಿಲ್ಲೆ

ಯತ್ನಾಳ ಉಚ್ಚಾಟನೆಯಿಂದ ಪಕ್ಷ ಶಾಂತ-ಬಿಜೆಪಿ ಮತ್ತಷ್ಟು ಬಲಿಷ್ಠ ಎಂದ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರ ಉಚ್ಚಾಟನೆಯಿಂದ ಪಕ್ಷದಲ್ಲಿ ಶಾಂತಿ ಸ್ಥಾಪನೆಯಾಗಿದೆ, ಪಕ್ಷ ಮತ್ತಷ್ಟು ಬಲಿಷ್ಠವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ತಿಳಿಸಿದರು.

ಯತ್ನಾಳರ ಉಚ್ಚಾಟನೆ ನಂತರ ಎಲ್ಲ ಪದಾಧಿಕಾರಿಗಳ ರಾಜೀನಾಮೆ ಬಗ್ಗೆ ಕೇಳಿ ಬರುತ್ತಿರುವ ಮಾತು ಸಂಪೂರ್ಣ ಸುಳ್ಳಿನಿಂದ ಕೂಡಿದ್ದು, ವಿಜಯಪುರ ನಗರ ಮಂಡಲ ಬಿಟ್ಟು ಉಳಿದ ಎಲ್ಲ ಮಂಡಲ ಅಧ್ಯಕ್ಷರು ಪಕ್ಷ ಸಂಘಟನೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ತೆರವಾಗಿರುವ ವಿಜಯಪುರ ನಗರ ಮಂಡಲಕ್ಕೆ ಅಧ್ಯಕ್ಷರಾಗಲು ಈಗಾಗಲೇ ಐವತ್ತು ಜನ ದುಂಬಾಲು ಬಿದ್ದಿದ್ದಾರೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಶಾಸಕ ಯತ್ನಾಳರ ಉಚ್ಚಾಟನೆ ನೋವಿನ ಸಂಗತಿಯಾದರೂ ಪಕ್ಷಕ್ಕದು ಅನಿವಾರ್ಯವಾಗಿತ್ತು. ಎರಡ್ಮೂರು ಬಾರಿ ನೊಟೀಸ್ ನೀಡಿದರೂ ಯತ್ನಾಳ ತಮ್ಮ ತಪ್ಪು ತಿದ್ದಿಕೊಳ್ಳಲಿಲ್ಲ. ಪಕ್ಷಕ್ಕೆ ಆಗುತ್ತಿರುವ ಹಾನಿ ತಡೆಯಲು ಹೈಕಮಾಂಡ್ ಉಚ್ಚಾಟನೆಯ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಉಚ್ಚಾಟನೆ ಬಳಿಕವೂ ಯತ್ನಾಳ ತಮ್ಮ ತಪ್ಪನ್ನೇ ಮುಂದುವರಿಸಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಒಂದೆಡೆ ಹೊಸ ಪಕ್ಷ ಕಟ್ಟುವುದಾಗಿ ಹೇಳುತ್ತಾರೆ-ಇನ್ನೊಂದೆಡೆ ಬೆಂಬಲಿಗರ ಮೂಲಕ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಿ ಎಂದು ಒತ್ತಡ ಹಾಕಿಸುತ್ತಿದ್ದಾರೆ. ಅವರ ಬೆಂಬಲಿಗರಿಗೂ ಪಕ್ಷದ ಮೇಲೆ ಅಭಿಮಾನವಿದೆ ಎಂಬುದು ಇದರಿಂದ ತಿಳಿದು ಬರಲಿದೆ ಎಂದರು.

ಯತ್ನಾಳ ಮಾಡಿರುವ ತಪ್ಪುಗಳು

ಶಾಸಕ ಯತ್ನಾಳ ಅವರು ಹಿಂದುತ್ವದ ಬಗ್ಗೆ ಮಾತನಾಡುತ್ತಲೇ ಪಂಚಮಸಾಲಿ ಸಮಾಜವನ್ನು ಹಿಡಿದುಕೊಂಡು ಬಣಜಿಗ ಸಮಾಜವನ್ನು ಟಾರ್ಗೆಟ್ ಮಾಡಿದರು. ಬಣಜಿಕ ಸಮಾಜದ ಜಗದೀಶ ಶೆಟ್ಟರ್ ವಿಚಾರ ಇಟ್ಟುಕೊಂಡು ಬಿ.ಎಸ್. ಯಡಿಯೂರಪ್ಪ ಅವರನ್ನು ಟೀಕಿಸಿದರು. ಬಳಿಕ ಜಗದೀಶ ಶೆಟ್ಟರ್ ಪರ ಮಾತನಾಡಿದರು. ಜಾತಿ ರಾಜಕಾರಣ ಮಾಡಿದ್ದೇ ತಪ್ಪು. ಬಣಜಿಗ ಸಮುದಾಯ ತಾಯಂದಿರಿಗೆ ಪಂಚಮಸಾಲಿ ಸಮಾಜದ ಮಕ್ಕಳಿದ್ದಾರೆ ಇನ್ನೊಂದೆಡೆ ಪಂಚಮಸಾಲಿ ಸಮಾಜದ ತಾಯಂದಿರಿಗೆ ಬಣಜಿಗ ಮಕ್ಕಳಿದ್ದಾರೆ. ಎರಡೂ ಸಮಾಜದ ನಡುವೆ ಬಾಂಧವ್ಯಗಳಿವೆ. ಹೀಗಾಗಿ ಯತ್ನಾಳರ ಹೇಳಿಕೆಯಿಂದ ಮನೆಗಳಲ್ಲಿಯೇ ಒಡಕು ಮೂಡಿದಂತಾಗುತ್ತಿತ್ತು. ಎರಡೂ ಸಮಾಜದಲ್ಲಿ ವಿಷ ಬಿತ್ತುವ ಪ್ರಯತ್ನ ಮಾಡಿದರು.

ಎರಡನೇದಾಗಿ ಬಿಜೆಪಿಯನ್ನು ಬಲಿಷ್ಠವಾಗಿ ಕಟ್ಟಿದ ಬಿ.ಎಸ್. ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಿದರು. ಜನ ಕೂಗು ಹಾಕುತ್ತಿದ್ದಾರೆಂದು ಪದೇ ಪದೇ ಬೇರೆಯವರು ಮನಸ್ಸಿಗೆ ಘಾಸಿ ಆಗುವಂತೆ ಮಾಡಿದರು. ಯಡಿಯೂರಪ್ಪ ಅವರ ಅವಧಿಯಲ್ಲಿಯೇ ಸಾಕಷ್ಟು ಅನುದಾನ ತಂದು ನಗರದ ಅಭಿವೃದ್ಧಿ ಮಾಡಿದ ಯತ್ನಾಳರು ಬಳಿಕ ಅವರನ್ನೇ ಟೀಕಿಸಿದರು. ಪ್ರಬುದ್ಧವಾಗಿ ಬೆಳೆದಿರುವ ವಿಜಯೇಂದ್ರ ಬಗ್ಗೆಯೂ ಟೀಕಿಸಿದರು. ಹೀಗೆ ಅನೇಕ ತಪ್ಪುಗಳು ಉತ್ನಾಳರನ್ನು ಪಕ್ಷದಿಂದ ಉಚ್ಚಾಟನೆ ಕಾರಣ ಎಂದರು.

ಕಾಂಗ್ರೆಸ್ ವಿರುದ್ಧ ಆಕ್ರೋಶ

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಗುರುಲಿಂಗಪ್ಪ ಅಂಗಡಿ, ಸಿದ್ದರಾಮಯ್ಯ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ರೈತರು, ಕಾರ್ಮಿಕರು, ಅಂಗನವಾಡಿ ಸಿಬ್ಬಂದಿ, ವ್ಯಾಪಾರಸ್ಥರು ಹೀಗೆ ವಿವಿಧ ವರ್ಗದ ಜನರಿಗೆ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದೆ. ಇದನ್ನು ಪ್ರಶ್ನಿಸಿದರೆ ಕೇಂದ್ರ ಸರ್ಕಾರ ಸಾಲ ಮಾಡಿಲ್ಲವೇ? ಎಂದು ಉಡಾಫೆಯಾಗಿ ಮಾತನಾಡುತ್ತಿದ್ದಾರೆಂದರು.

ಕೇಂದ್ರ ಸರ್ಕಾರದ ಯೋಜನೆಗಳಿಂದ ಭಾರತ ಬಲಿಷ್ಠವಾಗಿ ಬೆಳೆಯುತ್ತಿದೆ. ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಬಂದರು ಹೀಗೆ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಪಾರ ಅಭಿವೃದ್ಧಿ ಆಗಿದೆ. ಆದರೆ ರಾಜ್ಯ ಸರ್ಕಾರದ ಯೋಜನೆಗಳಿಂದ ಅಭಿವೃದ್ಧಿ ಅಧೋಗತಿಗಿಳಿದಿದೆ ಎಂದರು.

ಗುತ್ತಿಗೆದಾರರಿಗೆ ಈವರೆಗೂ ಬಿಲ್ ಪಾವತಿ ಮಾಡಿಲ್ಲ. ಆದರೂ ಗುತ್ತಿಗೆದಾರರು ಮಾನವೀಯತೆ ದೃಷ್ಠಿಯಿಂದ ಕಾಮಗಾರಿ ಆರಂಭಿಸಿದ್ದಾರೆ. ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕೂಡಲೇ ಉಸ್ತುವಾರಿ ಮಂತ್ರಿಗಳಿಗೆ ಸೂಚನೆ ನೀಡಬೇಕು. ಕಾಲುವೆಗಳಿಗೆ ಅರ್ಧಭಾಗಕ್ಕೆ ನೀರು ಬರಲಿದ್ದು ಇನ್ನರ್ಧ ಭಾಗಕ್ಕೆ ನೀರು ಬರುವುದೇ ಇಲ್ಲ. ಹೀಗಾಗಿ ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದರು.

ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ವಿಜಯಕುಮಾರ ಕೂಡಿಗನೂರ, ಶರಣಬಸು ಕುಂಬಾರ, ವಿಜಯ ಜೋಶಿ ಇದ್ದರು.