ಜಿಲ್ಲೆ

ಸ್ಥಳೀಯ ಕೌಶಲ ಅಭಿವೃದ್ಧಿಗೆ ಆದ್ಯತೆ : ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಲಹೆ

ಸೌಮ್ಯ ಆರ್

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳು ಯೋಜನೆಗಳನ್ನು ತಯಾರಿಸುವಾಗ ಕೌಶಲ ಅಭಿವೃದ್ಧಿಗೆ ಪ್ರತ್ಯೇಕ ಪರಿಗಣನೆ ನೀಡಬೇಕು, ಜಿಪಂ ಜತೆ ಸೇರಿ ಸಂಯುಕ್ತ ಯೋಜನೆಗಳನ್ನು ತಯಾರಿಸಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಹೇಳಿದರು.

ಜಿಲ್ಲಾ ಯೋಜನಾ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇರಳ ನಾಲೆಜ್ ಎಕನಾಮಿಕ್ ಮಿಷನ್ ಅಂಗವಾಗಿ ವಿದ್ಯಾವಂತ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗ ಒದಗಿಸುವ ಗುರಿಯನ್ನು ಯೋಜನೆ ಹೊಂದಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಕೈಗೊಳ್ಳುವ ಕೌಶಲ ತರಬೇತಿ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸಬಹುದು ಎಂದು ತಿಳಿಸಿದರು.

ಮಾಜಿ ಸಚಿವರಿಂದ ಉದ್ಘಾಟನೆ: ನಾಲೆಜ್ ಎಕನಾಮಿಕ್ ಮಿಷನ್‌ನ ನೇತೃತ್ವ ವಹಿಸುವ ಮಾಜಿ ಹಣಕಾಸು ಸಚಿವ ಟಿ.ಎಂ.ಥಾಮಸ್ ಐಸಾಕ್ ಮಾರ್ಚ್ 12ರಂದು ಕಾಸರಗೋಡು ಜಿಲ್ಲೆಗೆ ಆಗಮಿಸಲಿದ್ದು, ಸ್ಥಳೀಯಾಡಳಿತ ಸಂಸ್ಥೆಗಳ ಜನ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಾಗಿ ಒಂದು ಸೆಮಿನಾರ್ ನಗರದ ಸಿಟಿ ಟವರ್‌ನಲ್ಲಿ ನಡೆಯಲಿದೆ. ನಾಲೆಜ್ ಎಕನಾಮಿಕ್ ಮಿಷನ್‌ನ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.