ತುಮಕೂರು: ಜಿಲ್ಲಾ ಪಂಚಾಯಿತಿ ರಾಜಕೀಯ ಅಸ್ಥಿರತೆ ‘ಕ್ಲೈಮ್ಯಾಕ್ಸ್’ ಹಂತ ತಲುಪಿದೆ. ಜಿಪಂ ಅಧ್ಯಕ್ಷೆ ಎಂ.ಲತಾ ವಿರುದ್ಧ ಸ್ವಪಕೀಯರು ಸೇರಿ 49 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿರುವ ಹಿನ್ನೆಲೆಯಲ್ಲಿ ಅ.7ರಂದು ಅವಿಶ್ವಾಸ ಸೂಚನೆ ಸಭೆ ಕರೆಯಲಾಗಿದೆ.
ಲತಾ ಪ್ರತಿನಿಧಿಸುವ ಜೆಡಿಎಸ್ ಸದಸ್ಯರೂ ಸೇರಿ ಮಿತ್ರಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರೆಲ್ಲ ಆರ್‌ಡಿಪಿಆರ್ ಕಾರ್ಯದರ್ಶಿ ಅತೀಕ್ ಅವರಿಗೆ ಸೆ.10ರಂದು ಅವಿಶ್ವಾಸದ ಪತ್ರ ನೀಡಿ ಅಧ್ಯಕ್ಷರನ್ನು ಪದಚ್ಯುತಗೊಳಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ಸಿಂಗ್ ಅವರು ಅ.7ರಂದು ಬೆಳಗ್ಗೆ 11.30ಕ್ಕೆ ಅವಿಶ್ವಾಸ ಸೂಚನೆ ಸಭೆ ಕರೆದಿದ್ದಾರೆ.
57 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್ 18, ಉಪಾಧ್ಯಕ್ಷೆ ಶಾರದಾ ಸೇರಿ ಬಿಜೆಪಿಯ 17, ಜೆಡಿಎಸ್ 13 ಹಾಗೂ ಒಬ್ಬ ಪಕ್ಷೇತರ ಸದಸ್ಯರು ಸೇರಿ ಒಟ್ಟು 49 ಸದಸ್ಯರು ಅವಿಶ್ವಾಸಕ್ಕೆ ಸಹಿ ಹಾಕಿದ್ದು, ಜೆಡಿಎಸ್‌ನ 14 ಸದಸ್ಯರಲ್ಲಿ 13 ಸದಸ್ಯರು ಲತಾ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವುದು ಜಿಪಂ ರಾಜಕೀಯ ಅಸ್ಥಿರತೆಗೆ ಸಾಕ್ಷಿಯೆನಿಸಿದೆ. ಈ ಮಧ್ಯೆ ಅವಿಶ್ವಾಸ ನಿರ್ಣಯ ವಿಚಾರವೂ ಹೈಕೋರ್ಟ್ ಮೆಟ್ಟಿಲೇರಿದೆ. ಅವಿಶ್ವಾಸ ನಿರ್ಣಯದ ಪಟ್ಟಿಯನ್ನು ಆರ್‌ಡಿಪಿಆರ್ ಕಾರ್ಯದರ್ಶಿಗೆ ನೀಡಿದ ಸಂದರ್ಭದಲ್ಲೇ ಬಿಜೆಪಿಯ ಕೆ.ಯಶೋದಾ, ಎಸ್.ಟಿ.ಮಹಾಲಿಂಗಯ್ಯ, ಕಾಂಗ್ರೆಸ್‌ನ ವೈ.ಸಿ.ಸಿದ್ದರಾಮಯ್ಯ ಹೈಕೋರ್ಟ್ ನಲ್ಲಿ ಕೆವಿಯೆಟ್ ಸಲ್ಲಿಸಿ ಅವಿಶ್ವಾಸ ನಿರ್ಣಯಕ್ಕೆ ತಡೆ ನೀಡದಂತೆ ಮನವಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಯಾಗಿ ಅಧ್ಯಕ್ಷೆ ಲತಾ ತಮ್ಮ ವಿರುದ್ಧ ಅವಿಶ್ವಾಸಕ್ಕೆ ಹಾಕಿರುವ ಸಹಿಗಳನ್ನು ಪೋರ್ಜರಿ ಮಾಡಲಾಗಿದೆ. ಇದು ಕಾನೂನುಬಾಹಿರವಾಗಿದ್ದು ಅವಿಶ್ವಾಸಕ್ಕೆ ಅವಕಾಶ ಮಾಡಿಕೊಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ. 30-30 ತಿಂಗಳು ಅಧಿಕಾರ ಹಂಚಿಕೆ ಸೂತ್ರದಂತೆ ಜೆಡಿಎಸ್-ಬಿಜೆಪಿ ದೋಸ್ತಿ ಜಿಪಂ ಗದ್ದುಗೆ ಹಿಡಿದಿದ್ದು, 4 ವರ್ಷ 4 ತಿಂಗಳಾದರೂ ಲತಾ ಅಧಿಕಾರ ಬಿಟ್ಟುಕೊಟ್ಟಿಲ್ಲ. 3-4 ಬಾರಿ ಅಧ್ಯಕ್ಷರನ್ನು ಕೆಳಗಿಳಿಸುವ ಪ್ರಯತ್ನ ಮಾಡಲಾಗಿತ್ತಾದರೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಕೈಚೆಲ್ಲಿತ್ತು. ಅವಿಶ್ವಾಸದಲ್ಲಿ ಸೋಲುಂಡು ಅಧ್ಯಕ್ಷರ ಪದಚ್ಯುತಿಯಾದ ಬಳಿಕ ಇನ್ನುಳಿದ 8 ತಿಂಗಳ ಅವಧಿಗೆ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಚೊಚ್ಚಲ ಬಾರಿಗೆ ಜಿಲ್ಲೆಯಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿಗೆ ಕೈಕೊಟ್ಟು ಜೆಡಿಎಸ್ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಅವಿಶ್ವಾಸ ನಿರ್ಣಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಪಾತ್ರ ಏನೂ ಇಲ್ಲ. ಅಧ್ಯಕ್ಷರ ಅಸಮರ್ಥ ಆಡಳಿತದಿಂದ ರೋಸಿ ಹೋಗಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ‘ಅವಿಶ್ವಾಸ’ ಮಂಡಿಸಿದ್ದೇವೆ. ಕುರ್ಚಿಗೆ ಅಂಟಿಕೊಂಡಿರುವ ಅಧ್ಯಕ್ಷರು ಶಕ್ತಿಯಿದ್ದರೆ ಸದಸ್ಯರ ವಿಶ್ವಾಸ ಗೆಲ್ಲಲಿ. ಎಸ್.ಟಿ.ಮಹಾಲಿಂಗಯ್ಯ ಜಿಪಂ ಸದಸ್ಯ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ಗೌಡರು ಫೋನ್‌ನಲ್ಲಿ ಒಂದು ಮಾತು ಹೇಳಿದ್ದರೂ ರಾಜೀನಾಮೆ ನೀಡುತ್ತಿದ್ದೆ. ಬೈಎಲೆಕ್ಷನ್ ಲಾಭಕ್ಕಾಗಿ ಈ ರೀತಿ ಅವಿಶ್ವಾಸ ಪ್ರಹಸನ ಸೃಷ್ಟಿಸುವ ಅಗತ್ಯವಿರಲಿಲ್ಲ. ಉಪಾಧ್ಯಕ್ಷರು ರಾಜೀನಾಮೆ ನೀಡಿದ ಮರುಕ್ಷಣವೇ ನಾನು ರಾಜೀನಾಮೆ ನೀಡುವೆ. 30 ತಿಂಗಳ ಅಧಿಕಾರ ಅವಧಿ ಮುಗಿದ ಸಂದರ್ಭದಲ್ಲೇ ರಾಜೀನಾಮೆ ಕೊಡುವುದಾಗಿ ಹೇಳಿದ್ದೆ. ಆದರೆ, ಸುರೇಶ್‌ಗೌಡರು ನೀವೆ ಮುಂದುವರಿಯಿರಿ ಎಂದಿದ್ದರು. ಎಂ.ಲತಾ ಅಧ್ಯಕ್ಷೆ, ಜಿಪಂ ಜಿಪಂ ರಾಜಕೀಯ ಅಸ್ಥಿರತೆ ಕೊನೆಗಾಣಿಸಲು ಸದಸ್ಯರ ‘ವಿಶ್ವಾಸ’ ಇಲ್ಲದೇ ಇರುವಾಗ ಅಧ್ಯಕ್ಷರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುವುದು ಒಳಿತು. ಇಷ್ಟೆಲ್ಲಾ ಗೊಂದಲಕ್ಕೆ ತೆರೆ ಎಳೆಯಲಿ. ವೈ.ಎಚ್.ಹುಚ್ಚಯ್ಯ ಜಿಲ್ಲಾಧ್ಯಕ್ಷ, ಬಿಜೆಪಿ ಎಸ್ಸಿ ಮೋರ್ಚಾ