ಉಡುಪಿ: ವಿದ್ಯಾರ್ಥಿ ದೆಸೆಯಲ್ಲಿಯೇ ಭವಿಷ್ಯದ ಗುರಿ ನಿರ್ಧರಿಸಬೇಕು. ಬದುಕಿನ ದಾರಿಯ ಬಗ್ಗೆ ಸ್ಪಷ್ಟತೆ ಇದ್ದಾಗ ಉನ್ನತ ಸಾಧನೆ ಸಾಧ್ಯ. ಮೊಬೈಲ್ ಮುಂತಾದ ಬಾಹ್ಯ ಆಕರ್ಷಣೆಗೆ ಮಿತಿ ಅಗತ್ಯ. ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಲಯನ್ಸ್ ಕ್ಲಬ್ ಅಮೃತ್ ಹಾಗೂ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದರು.
ಅನೇಕ ದೇಶಗಳ ವಿದ್ಯಮಾನಗಳನ್ನು ಗಮನಿಸಿದರೆ ಅಲ್ಲಿ ಅಸ್ಥಿರತೆ ಇದೆ. ಯುದ್ಧಗಳು ನಡೆಯುತ್ತಿವೆ. ಇದರ ಪರಿಣಾಮ ಯುವ ಜನರ ಮೇಲೆ ಆಗುತ್ತಿದೆ. ಸಂವಿಧಾನ ಆಶಯದಂತೆ ನಾವು ಭಾರತೀಯರು ಎಂಬ ಭಾವನೆಯಿಂದ ಭೇದ&ಭಾವ ಮರೆತು ಏಕತೆ ಪ್ರದರ್ಶಿಸಿದರೆ ಅಸ್ಥಿರತೆಗೆ ಅವಕಾಶವಿರುವುದಿಲ್ಲ ಎಂದರು.
ಜ್ಞಾನ ವಿಸ್ತರಿಸಿಕೊಳ್ಳಿ
ಯುವಜನತೆಗೆ ಓದುವುದು ಮುಖ್ಯಗುರಿ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಕಾಲೇಜಿನ ಗ್ರಂಥಾಲಯಗಳನ್ನು ಉಪಯೋಗಿಸಿಕೊಳ್ಳಬೇಕು. ಇದರಿಂದ ಜ್ಞಾನ ವಿಸ್ತಾರವಾಗುತ್ತದೆ. ಮಹಾತ್ಮರ ಕೃತಿಗಳನ್ನು ಓದುವ ಮೂಲಕ ಸ್ಫೂರ್ತಿ ಪಡೆಯಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಶಾಂತಿ ಕಾಪಾಡುವುದು ನಾಗರಿಕರ ದಾಯಿತ್ವ. ಹಕ್ಕುಗಳ ಅರಿವಿನ ಜೊತೆಗೆ ಕರ್ತವ್ಯ ಪಾಲನೆಯೂ ಅಗತ್ಯವಾಗಿದೆ ಎಂದು ಹೇಳಿದರು. ಉದ್ಯಮಿ ವಿ.ಜಿ. ಶೆಟ್ಟಿ, ಭಾರತೀ ಹರೀಶ್ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಗಣನಾಥ ಎಕ್ಕಾರು ಪ್ರಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.