ಜಿಲ್ಲೆ

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಧಾರವಾಡ ಮತ್ತು ಗದಗ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಇಲ್ಲಿನ ವಿದ್ಯಾನಗರದ ಕನಕದಾಸ ಮಹಾವಿದ್ಯಾಲಯದ ಡಾ. ಬಿ.ಎಫ್. ದಂಡಿನ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾಗಿತ್ತು.

ಉದ್ಘಾಟಿಸಿ ಮಾತನಾಡಿದ ಕನಕದಾಸ ಶಿಕ್ಷಣ ಸಮಿತಿ ಅಧ್ಯಕ್ಷ ರವಿ ದಂಡಿನ, ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಭವರಲಾಲ್ ಆರ್ಯ ಮಾತನಾಡಿ, ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಜತೆಗೆ ವ್ಯಕ್ತಿತ್ವವೂ ವಿಕಸಿಸುತ್ತದೆ ಎಂದು ಹೇಳಿದರು.

ಗದಗ ಮತ್ತು ಧಾರವಾಡ ಜಿಲ್ಲೆಯ ನೂರಾರು ಕ್ರೀಡಾಪಟುಗಳು ವಿವಿಧ ವಯೋಮಿತಿಗಳಲ್ಲಿ ತಮ್ಮ ಯೋಗ ಕೌಶಲ ಪ್ರದರ್ಶಿಸಿದರು. ಒಟ್ಟು 10 ವಿಭಾಗಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆದವು.

ವಿಜೇತರಾದವರು ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾದರು. ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು. 25 ಮಂದಿ ನಿರ್ಣಾಯಕರಿಗೆ ಪತಂಜಲಿ ಯೋಗ ಸಮಿತಿಯವರಿಂದ ಶಾಲು ಮತ್ತು ನೆನಪಿನ ಕಾಣಿಕೆ ನೀಡಿ ಭವರಲಾಲ್ ಆರ್ಯ ಸನ್ಮಾನಿಸಿದರು. ರಮೇಶ ಸುಲಾಕೆ ವಂದಿಸಿದರು.