ವಿಜಯವಾಣಿ ಸುದ್ದಿಜಾಲ ಉಡುಪಿ
ಕೇಂದ್ರ ಬಿಜೆಪಿ ಸರ್ಕಾರ ಜಿಎಸ್ಟಿಯನ್ನು 4 ಸ್ಲ್ಯಾಬ್ನಿಂದ 2ಕ್ಕೆ ಇಳಿಕೆ ಮಾಡಿದ್ದರಿಂದ ಸಾಮಾನ್ಯ ಜನರ ಜೇಬಿನಲ್ಲಿ ಹಣ ಉಳಿಕೆ ಆಗುವಂತಾಗಿದೆ. ಇದು ಜನರ ಆರ್ಥಿಕ ಜೀವನ ಮಟ್ಟ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ಜನಪರ ಕಾಳಜಿಯನ್ನು ನಮ್ಮೆಲ್ಲ ಕಾರ್ಯಕರ್ತರು ಜಿಲ್ಲೆಯ ಜನತೆಗೆ ಮನದಟ್ಟು ಮಾಡಿಕೊಡಬೇಕು ಎಂದು ಜಿಲ್ಲಾಧ್ಯಕ್ಷ ಕುತ್ಯಾರು ನವೀನ ಶೆಟ್ಟಿ ಸೂಚಿಸಿದರು.
ಉಡುಪಿಯ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೇವಾ ಪಾಕ್ಷಿಕ-2025ರ ಕುರಿತು ಮಾಹಿತಿ ನೀಡಲು ಕಾರ್ಯಕರ್ತರು ಹಾಗೂ ಎಲ್ಲ ಮಂಡಲ, ಮೋರ್ಚಾಗಳ ಪದಾಧಿಕಾರಿಗಳಿಗೆ ಮಾಹಿತಿ ನೀಡಲು ಸೆಪ್ಟೆಂಬರ್ 8ರಂದು ಬೆಳಗ್ಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ಮೋದಿ ಅವರ ಜನ್ಮದಿನಾಚರಣೆ ನಿಮಿತ್ತ ಸೆ.17ರಿಂದ ಅ.2ರ ವರೆಗೆ ಸೇವಾ ಪಾಕ್ಷಿಕ ಶೀರ್ಷಿಕೆಯಡಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಸೇವೆಯೇ ಪರಮ ಧರ್ಮ ಎಂಬ ಭಾವನೆಯೊಂದಿಗೆ ಆಯೋಜಿಸಿರುವ ಈ ಅಭಿಯಾನವನ್ನು ಜಿಲ್ಲೆಯ ಎಲ್ಲ ಕಾರ್ಯಕರ್ತರು ಯಶಗೊಳಿಸಬೇಕು ಎಂದು ಕುತ್ಯಾರು ನವೀನ ಶೆಟ್ಟಿ ತಿಳಿಸಿದರು.
ಉಡುಪಿ ಜಿಲ್ಲಾ ಕಾರ್ಯಾಗಾರಕ್ಕೆ ರಾಜ್ಯ ಬಿಜೆಪಿಯಿಂದ ನಿಯುಕ್ತಿಗೊಂಡಿರುವ ಶಿವಮೊಗ್ಗ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮೇಘರಾಜ ಮಾತನಾಡಿ, ಸೇವಾ ಪಾಕ್ಷಿಕದ ಉದ್ದೇಶ ಹಾಗೂ ಕೈಗೊಳ್ಳಬೇಕಾದ ಸೇವೆಗಳ ಕುರಿತು ಮಾಹಿತಿ ನೀಡಿದರು. ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.
ಶಂಕರ ಅಂಕದಕಟ್ಟೆ ವಂದೇ ಮಾತರಂ ಗೀತೆ ಹಾಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಸೇವಾ ಪಾಕ್ಷಿಕದ ಸಂಚಾಲಕ ಮಹಾವೀರ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾ ಕಾರ್ಯಾಲಯದ ಕಾರ್ಯದರ್ಶಿ ಶಿವಕುಮಾರ ಅಂಬಲಪಾಡಿ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪ್ರಧಾನಿ ಮೋದಿ ಜನ್ಮದಿನದ ನಿಮಿತ್ತ ಸೆ.17ರಿಂದ ಅ.2ರ ಗಾಂಧಿ ಜಯಂತಿ ವರೆಗೆ ಜಿಲ್ಲೆಯಲ್ಲಿ ವಿವಿಧ ಸೇವಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸೆ.17ರಂದು ಜಿಲ್ಲಾ ಮಟ್ಟದಲ್ಲಿ ಹಾಗೂ ಸೆ.18ರಂದು ಎಲ್ಲ ಮಂಡಲಗಳಲ್ಲಿ ಎರಡು ಹಂತದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಶಾಲಾ-ಕಾಲೇಜು, ಆಸ್ಪತ್ರೆ, ರೈಲ್ವೆ-ಬಸ್ ನಿಲ್ದಾಣ, ದೇವಸ್ಥಾನ, ಕಡಲತೀರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ. ಸೆ.17ರಿಂದ ಸೆ.24ರ ವರೆಗೆ ಆರೋಗ್ಯ ತಪಾಸಣಾ ಉಚಿತ ಶಿಬಿರ ನಡೆಯಲಿದೆ. ಸೆ.17ರಿಂದ ಅ.2ರ ವರೆಗೆ ಜಿಲ್ಲಾ ಕಾರ್ಯಾಲಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೋದಿ ಬಾಲ್ಯದಿಂದ ಹಿಡಿದು ಈವರೆಗಿನ ಜೀವನ ಸಾಧನೆ ಬಿಂಬಿಸುವ ಪ್ರದರ್ಶಿನಿ ನಡೆಯಲಿದೆ. ಸೆ.19-20ರಂದು ಪ್ರಬುಧ್ಧರ ಗೋಷ್ಠಿ, ಸೆ.21ರಂದು ಮೋದಿ ವಿಕಾಸ ಮೆರಾಥಾನ್, ಸೆ.25ರಿಂದ ಅ.2ರ ವರೆಗೆ 'ವೋಕಲ್ ಫಾರ್ ಲೋಕಲ್' ಅಭಿಯಾನ, ಸೆ.27-28ರಂದು ಸಾಧಕ ದಿವ್ಯಾಂಗರಿಗೆ ಸನ್ಮಾನ, ಸೆ.21ರಿಂದ ಡ.25ರ ವರೆಗೆ ಸಂಸದ್ ಖೇಲ್ (ಕ್ರೀಡಾ) ಸ್ಪರ್ಧೆ ನಡೆಯಲಿದೆ.
ಸೇವಾ ಪಾಕ್ಷಿಕದಲ್ಲಿ ಪ್ರಮುಖವಾಗಿ ಪ್ರಧಾನಿ ಮೋದಿ ಅವರ ಆಶಯದಂತೆ ಯುವಜನರನ್ನು ವಿಕಸಿತ ಭಾರತ-2047ರ ದೃಷ್ಟಿಕೋನಕ್ಕೆ ಜೋಡಿಸಲು ಆತ್ಮನಿರ್ಭರ ಭಾರತ, ಡಿಜಿಟಲ್ ಭಾರತ ವಿಷಯಾಧಾರಿತ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಗರಿಷ್ಠ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಬೇಕು. | ಕುತ್ಯಾರು ನವೀನ ಶೆಟ್ಟಿ. ಬಿಜೆಪಿ ಜಿಲ್ಲಾಧ್ಯಕ್ಷ