ಜಿಲ್ಲೆ

ಶಿಕ್ಷಕರು ಕಾರ್ಯ ಪ್ರೌವೃತ್ತರಾಗಲಿ: ಡಯಟ್ ಉಪನಿರ್ದೇಶಕ ಪುರುಷೋತ್ತಮ ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಶಿಕ್ಷಕರು ತರಗತಿಯಲ್ಲಿ ಕಲಿಕಾಫಲ ಆಧಾರಿತ ಸಾಮರ್ಥ್ಯಗಳನ್ನು ಕಲಿಸುವಲ್ಲಿ ಕಾರ್ಯ ಪ್ರೌವೃತ್ತರಾಗುವಂತೆ ಎಂದು ಡಯಟ್ ಉಪ ನಿರ್ದೇಶಕ(ಅಭಿವೃದ್ಧಿ) ಪುರುಷೋತ್ತಮ ಸಲಹೆ ನೀಡಿದರು.

ನಗರದ ಸಂತ ಜೋಸೆಫರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಕನ್ನಡ ಮತ್ತು ಸಮಾಜ ವಿಜ್ಞಾನ ಶಿಕ್ಷಕರಿಗೆ ಆಯೋಜಿಸಿದ್ದ ಐದು ದಿನಗಳ ಜಿಲ್ಲಾಮಟ್ಟದ ಸಚೇತನ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರಿಗೆ ಕಲಿಕಾಫಲ ಆಧಾರಿತವಾಗಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಓದು ಬರಹ ಸರಳ ಲೆಕ್ಕಾಚಾರ ದೃಢೀಕರಣ ಮಾಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ತರಗತಿ ಕೋಣೆಯಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಿರ್ವಹಿಸುವಾಗ ಮಕ್ಕಳಿಗೆ ಮಾರ್ಗದರ್ಶನ ಮಾಡಿದರೆ ಕಲಿಕೆ ದೃಢವಾಗುವ ಜತೆಗೆ ಪರಿಣಾಮಕಾರಿಯಾಗಲಿದೆ ಎಂದರು.

ನೈಜ ಜೀವನಕ್ಕೆ ಸಂಬಂಧಿಕರಿಸಿ ಅನುಭವಾತ್ಮಕ ಕಲಿಕೆಯನ್ನು ದೃಢೀಕರಿಸುವುದು ಶಿಕ್ಷಕರ ಆದ್ಯ ಜವಾಬ್ದಾರಿ. ಮೌಲ್ಯಾಂಕನ ಪರೀಕ್ಷೆ ಬಗ್ಗೆ ಶಿಕ್ಷಕರು ತಿಳಿವಳಿಕೆ ಪಡೆಯುವ ಜತೆಗೆ ಪ್ರಶ್ನೆ ಪತ್ರಿಕೆ ರಚಿಸುವ ಕೌಶಲವನ್ನು ಪಡೆದುಕೊಳ್ಳಬೇಕಾಗಿದೆ. ಶಿಕ್ಷಕರು ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಪಡೆದು ಕಲಿಕಾ ಪೂರಕ ವಾತಾವರಣ ಸೃಷ್ಟಿಸಬೇಕು ಎಂದರು.

ಅಧ್ಯಕ್ಷತೆಯನ್ನು ಸಂತ ಜೋಸೆಫರ ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಂಶುಪಾಲೆ ಸಿಸ್ಟರ್ ವೀಣಾ ವಹಿಸಿದ್ದರು. ನೋಡಲ್ ಅಧಿಕಾರಿಗಳಾದ ಎಂ.ಶೈಲಜಾ, ಎಚ್.ಕೆ.ಪ್ರಶಾಂತ್‌ಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಎಸ್.ಸಿ.ಮಂಗಳಾ, ಚಲುವರಾಜು, ಮಂಜು, ಶಿವಪ್ರಕಾಶ್, ಮಂಜುನಾಥ್, ಸಂಗಪ್ಪ ರಾಜನಾಳ್, ವೆಂಕಟೇಗೌಡ, ಉಮೇಶ್ ಇಟಗಿ ಇದ್ದರು. ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲೆಯ 82 ಶಿಕ್ಷಕರು ಭಾಗವಹಿಸಿದ್ದಾರೆ.