ಜಿಲ್ಲೆ

ಜಿಲ್ಲಾ ಮಟ್ಟದ ದೇವಸ್ಥಾನಗಳ ಅಧಿವೇಶನ 28ರಂದು

ಮರಿದೇವ ಹೂಗಾರ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಮಟ್ಟದ ದೇವಸ್ಥಾನಗಳ ಅಧಿವೇಶನ ಜ. 28ರಂದು ಇಲ್ಲಿಯ ವಿದ್ಯಾನಗರದ ಉತ್ತರಾಧಿಮಠದಲ್ಲಿ ನಡೆಯಲಿದೆ ಎಂದು ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಮನ್ವಯಕಾರ ಗುರುಪ್ರಸಾದ ಗೌಡ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ಕ್ಕೆ ಅಧಿವೇಶನ ಆರಂಭವಾಗಲಿದೆ. ಸಂಜೆ 6ರವರೆಗೂ ವಿವಿಧ ಸಭೆ, ಗೋಷ್ಠಿಗಳು ಜರುಗಲಿವೆ ಎಂದರು.
ಧಾರವಾಡ ಜಿಲ್ಲೆಯ ಎಲ್ಲ ದೇವಸ್ಥಾನಗಳ ವಿಶ್ವಸ್ಥ ಮಂಡಳಿಯ ಪದಾಧಿಕಾರಿಗಳು, ಮಠಾಧೀಶರು ಹಾಗೂ ಧಾರ್ಮಿಕ ಮುಖಂಡರು, ಪುರೋಹಿತರು ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮೊದಲು ನಗರದಲ್ಲಿ ಸಂಕ್ರಾಂತಿ ನಂತರ ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಧಿವೇಶನ ಯಶಸ್ವಿಯಾಗಿದೆ. ರಾಜ್ಯದ ಅನೇಕ ದೇವಸ್ಥಾನಗಳ ವಿಶ್ವಸ್ಥ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳನ್ನು ಖಾಸಗಿತನಕ್ಕೆ ಪಡೆಯುವುದು, ವಸ್ತ್ರಸಂಹಿತೆ ಸೇರಿ ಕೆಲ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದೀಗ ಜಿಲ್ಲಾಮಟ್ಟದಲ್ಲಿ ಅಧಿವೇಶನ ನಡೆಸಿ, ನಿರ್ಣಯ ಹಾಗೂ ಜಾಗೃತಿ ಮೂಡಿಸಲಾಗುವುದು ಎಂದರು.
ಪ್ರಮುಖರಾದ ವಿನಾಯಕ ಆಕಳವಾಡಿ, ಪ್ರಕಾಶ ಬೆಂಡಿಗೇರಿ, ವಿದುಲಾ ಹಳದಿಪುರ, ಭಾಸ್ಕರ ಜಿತೂರಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.