ಜಿಲ್ಲೆ

ಅಥ್ಲೆಟಿಕ್ಸ್​ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮರಿದೇವ ಹೂಗಾರ

ಹುಬ್ಬಳ್ಳಿ: ಧಾರವಾಡದಲ್ಲಿ ಜರುಗಿದ ಹುಬ್ಬಳ್ಳಿ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಗರದ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲನಿ ಬಳಿಯ ಎನ್​ಎಲ್​ಇ ಸೊಸೈಟಿಯ ಡಾ.ಆರ್.ಬಿ. ಪಾಟೀಲ ಮಹೇಶ ವಿಜ್ಞಾನ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳು ಅಮೋಘ ಸಾಧನೆ ತೋರಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಚಂದ್ರಶೇಖರ ಹಾನಗಲ್ 1,500ಮೀ., 5,000ಮೀ. ಮತ್ತು ಕ್ರಾಸ್ ಕಂಟ್ರಿ 6ಕೆ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ, ಸಹನಾ ಕಲಘಟಗಿ 3,000ಮೀ ಓಟದಲ್ಲಿ ತೃತೀಯ, 4*100 ಮೀ. ರಿಲೇಯಲ್ಲಿ ಪ್ರಥಮ, ಅರ್ಹನ್ ಪತ್ರಾವಳಿ ಹ್ಯಾಮರ್ ಥ್ರೋದಲ್ಲಿ ಪ್ರಥಮ ಮತ್ತು ರೋಹಿತ್ 100 ಮೀ. ಓಟದಲ್ಲಿ ಮೂರನೇ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಒಟ್ಟಾರೆ 5 ಚಿನ್ನ, 3 ಬೆಳ್ಳಿ ಮತ್ತು 2 ಕಂಚಿನ ಪದಕ ಪಡೆದಿದ್ದಾರೆ. ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಐ.ಎಸ್. ಹಿರೇಮಠ ಹಾಗೂ ಕ್ರೀಡಾ ಸಮಿತಿ ಸದಸ್ಯರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.

ಪ್ರಾಚಾರ್ಯ ರಾಮ ಮೋಹನ್ ಎಚ್.ಕೆ. ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿ, ಕ್ರೀಡೆ ಕೇವಲ ಮನರಂಜನೆ ಮಾತ್ರವಲ್ಲದೇ ದೈಹಿಕ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕ ಮನೋಭಾವನೆ ಹೆಚ್ಚಿಸುತ್ತದೆ. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ಎಂದರು.

ಸೊಸೈಟಿ ಚೇರ್ಮನ್ ಪಿ.ವಿ. ದತ್ತಿ, ಗೌರವಾನ್ವಿತ ಕಾರ್ಯದರ್ಶಿ ರಾಜಾ ದೇಸಾಯಿ, ಸದಸ್ಯರು, ಉಪ ಪ್ರಾಚಾರ್ಯ ರಮೇಶ ಹೊಂಬಾಳೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.