ಜಿಲ್ಲೆ

ಬಾಲ್ಯದಲ್ಲಿಯೇ ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳಬೇಕು..

ಮಕ್ಕಳಿಗೆ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸಲಹೆ

ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ನ ಪುರಸ್ಕಾರ ಪರೀಕ್ಷಾ ಶಿಬಿರ

ವಿಜಯವಾಣಿ ಸುದ್ದಿಜಾಲ ಉಡುಪಿ

ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಾರೆ. ಶಿಕ್ಷಕರು ತಮಗೆಲ್ಲ ಉತ್ತಮವಾಗಿ ಕಲಿಸುತ್ತಾರೆ. ಅದರ ಜತೆಗೆ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಅಳವಡಿಸಿಕೊಂಡು ಬಾಲ್ಯದಲ್ಲಿಯೇ ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳಬೇಕು. ಆ ಉದ್ದೇಶದಿಂದಲೇ ಭಾರತ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ನ ಕರ್ನಾಟಕ ಸಂಸ್ಥೆ ಶಿಬಿರಗಳ ಮೂಲಕ ಮಕ್ಕಳನ್ನು ತರಬೇತುಗೊಳಿಸುತ್ತಿದೆ ಎಂದು ಭಾರತ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ನ ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಉಡುಪಿಯ ಪ್ರಗತಿನಗರದಲ್ಲಿರುವ ಡಾ. ವಿ.ಎಸ್​. ಆಚಾರ್ಯ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ ತರಬೇತಿ ಕೇಂದ್ರದಲ್ಲಿ ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್​ 19ರಂದು ಆಯೋಜಿಸಿದ್ದ ಉಡುಪಿ ಜಿಲ್ಲಾ ಮಟ್ಟದ ಕಬ್​ ಆ್ಯಂಡ್​ ಬುಲ್​ ಬುಲ್​ ವಿದ್ಯಾರ್ಥಿಗಳ ಪುರಸ್ಕಾರ ಪರೀಕ್ಷಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸೆಪ್ಟೆಂಬರ್​ನಲ್ಲಿ ರಾಜ್ಯ ಮಟ್ಟದ ಉತ್ಸವ

ರಾಜ್ಯ ಸಂಘಟನಾ ಆಯುಕ್ತೆ ಸುಮನಾ ಶೇಖರ್​ ಮಾತನಾಡಿ, ಉಡುಪಿಯ ಪಾಜಕದ ಆನಂದತೀರ್ಥ ಶಾಲೆಯಲ್ಲಿ ಸೆಪ್ಟೆಂಬರ್​ ತಿಂಗಳಲ್ಲಿ 4 ದಿನ ರಾಜ್ಯ ಮಟ್ಟದ ಕಬ್​ ಆ್ಯಂಡ್​ ಬುಲ್​ ಬುಲ್​ ಉತ್ಸವ ನಡೆಯಲಿದೆ. ರಾಜ್ಯ ಮುಖ್ಯ ಆಯುಕ್ತ ಪಿಜಿಆರ್​ ಸಿಂಧ್ಯಾ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಪ್ರತಿಭೆ ಪ್ರದರ್ಶಿಸಲು ತಮಗೆಲ್ಲ ಅವಕಾಶವಿದೆ ಎಂದರು.

ಶಿಬಿರದಲ್ಲಿ 111 ಗಂಡು ಮಕ್ಕಳು, 130 ಹೆಣ್ಣು ಮಕ್ಕಳು ಪಾಲ್ಗೊಂಡಿದ್ದರು. ಶಿಬಿರದ ಆರಂಭದಲ್ಲಿ ಎಲ್ಲ ಮಕ್ಕಳು ಸಾಮೂಹಿಕವಾಗಿ ಶಿಕ್ಷಕರೊಂದಿಗೆ ಧ್ಯೇಯಯಗೀತೆ ಹಾಡಿದರು. ಹಿರಿಯ ರೋವರ್​ ಶ್ರೀಪಾದ ಭಟ್​ ಹಾಗೂ ವಿವಿಧ ಶಾಲೆಗಳ ಶಿಕ್ಷಕಿಯರು, ಪಾಲಕರು ಉಪಸ್ಥಿತರಿದ್ದರು.

ಲೇಡಿ ಕಬ್​ ಮಾಸ್ಟರ್​ ಜ್ಯೋತಿಲತಾ ಲೋಬೋ ಸ್ವಾಗತಿಸಿದರು. ಫ್ಲಾಕ್​ ಲೀಡರ್​ ವಿನಯಾ ಬಾಯರಿ ವಂದಿಸಿದರು. ಲೇಡಿ ಕಬ್​ ಮಾಸ್ಟರ್​ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

ಒಂದು ಅಗಳು ಅನ್ನವನ್ನೂ ಬಿಡಬಾರದು

ಮನೆಯಲ್ಲಿ ಪಾಲಕರಿಗೆ, ಹಿರಿಯರಿಗೆ ಹಾಗೂ ಶಾಲೆಯಲ್ಲಿ ಅಧ್ಯಾಪಕರಿಗೆ ಗೌರವ ಕೊಡಬೇಕು. ಅವರ ಮನಸ್ಸಿಗೆ ನೋವಾಗುವಂತೆ ವರ್ತಿಸಬಾರದು. ರೈತನ ಶ್ರಮದ ಅರಿವು ಈಗಿನ ಮಕ್ಕಳಿಗೆ ಇಲ್ಲ. ಹೀಗಾಗಿ ಊಟ ಮಾಡುವಾಗ ತಟ್ಟೆಯಲ್ಲಿ ಒಂದು ಅಗಳು ಅನ್ನವನ್ನೂ ಬಿಡಬಾರದು. ಮೊಬೈಲ್​, ಟಿವಿ ನೋಡುತ್ತ ಊಟ ಮಾಡಬಾರದು. ಅದು ಸರಿಯಾದ ಕ್ರಮವಲ್ಲ. ಅಂತಹ ಅನೇಕ ವಿಚಾರಗಳ ಕುರಿತು ಬಾಲ್ಯದಲ್ಲಿಯೇ ತಮಗೆ ತರಬೇತಿ ನೀಡಲಾಗುವುದು. ಯಾವ ಕಾರಣಕ್ಕೂ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ ಬಿಡಬೇಡಿ. ಈ ಸಂಸ್ಥೆಯಲ್ಲಿ ತೊಡಗಿಸಿಕೊಂಡರೆ ಜೀವನಕ್ಕೆ ಬೇಕಾಗುವ ಎಲ್ಲ ಜ್ಞಾನ, ಮುಖ್ಯವಾಗಿ ಶಿಸ್ತು ಲಭಿಸುತ್ತದೆ ಎಂದು ಜಯಕರ ಶೆಟ್ಟಿ ತಿಳಿಸಿದರು.