ಉಡುಪಿ: ಮುಂಗಾರು ಮಳೆಯಲ್ಲಿ ಜನ ಜಾನುವಾರುಗಳಿಗೆ ಸಾವು-ನೋವು, ಆಸ್ತಿಪಾಸ್ತಿ ಹಾನಿ ಆಗದಂತೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದರು.
ಬುಧವಾರ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಜಿಲ್ಲೆಯಲ್ಲಿಯೂ ಸಹ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಜಿಲ್ಲೆಯಲ್ಲಿ ಈಗಾಗಲೇ ಸಿಡಿಲು ಬಡಿತದಿಂದ ಮೂರು ಜನರು ಸಾವನ್ನಪ್ಪಿದ್ದಾರೆ. ಜನ ಸಾಮಾನ್ಯರಿಗೆ ಸಿಡಿಲು ಬಡಿತದಿಂದ ರಕ್ಷಣೆ ಕುರಿತು ಅರಿವು ಮೂಡಿಸಬೇಕು. ಮುಂದಿನ ದಿನಗಳಲ್ಲಿ ಮಳೆಯಿಂದ ಹಾನಿಗೊಳಗಾದವರಿಗೆ ಆದಷ್ಟು ತ್ವರಿತವಾಗಿ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.
ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ನಗರ ಪ್ರದೇಶದಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಕಳೆದ ಬಾರಿ ಸಮಸ್ಯೆ ಉಂಟಾಗಿದ್ದು, ಈ ಬಾರಿ ಅಂತಹ ಅನಾಹುತ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಆದಷ್ಟು ಶೀಘ್ರ ಆದ್ಯತೆ ಮೇಲೆ ಕೈಗೊಳ್ಳಬೇಕು. ಕುಡಿಯುವ ನೀರಿನೊಂದಿಗೆ ಮಳೆ ನೀರು ಸೇರಿದಂತೆ ಕಲುಷಿತ ನೀರು ಮಿಶ್ರಣಗೊಳ್ಳದಂತೆ ಕ್ರಮವಹಿಸಬೇಕು. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಗಿಂದಾಗ್ಗೆ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಬೇಕು. ಗ್ರಾಮೀಣ ಭಾಗದ ಜನರು ಹಳ್ಳಕೊಳ್ಳ ದಾಟಲು ಕಾಲುಸಂಕಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಈ ಬಾರಿ ಆದ್ಯತೆ ಮೇರೆಗೆ ಕಾಲು ಸಂಕಗಳನ್ನು ನಿರ್ಮಿಸಬೇಕು ಎಂದರು.
ಜಿಲ್ಲೆಯಲ್ಲಿ ಮುಂಗಾರುವಿನಲ್ಲಿ 35,509 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ಹೊಂದಲಾಗಿದ್ದು, ಅಗತ್ಯ ಇರುವ ಬಿತ್ತನೆ ಬೀಜಗಳನ್ನು, ರಸಗೊಬ್ಬರ, ದಾಸ್ತಾನುಗಳನ್ನು ಇಟ್ಟುಕೊಂಡು, ರೈತರಿಗೆ ಸಮರ್ಪಕವಾಗಿ ವಿತರಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಎಂ 4 ಭತ್ತದ ಬೀಜಕ್ಕೆ ಹೆಚ್ಚಿನ ಬೇಡಿಕೆ ಕೇಳಿ ಬರುತ್ತಿದೆ. ಹೊರ ಜಿಲ್ಲೆಗಳಲ್ಲಿ ಈ ಭತ್ತದ ತಳಿಯ ಬೀಜಗಳು ಲಭ್ಯವಿದ್ದರೆ, ತರಿಸಿಕೊಡಬೇಕು ಎಂದರು.
ಜಿಲ್ಲೆಯಲ್ಲಿ 400 ಕ್ಕೂ ಹೆಚ್ಚು ಕಿಂಡಿ ಆಣೆಕಟ್ಟು ನಿಮಾರ್ಣವಾಗಿದ್ದು, ಕಳೆದ ಸಾಲಿನಲ್ಲಿ ಸೆಪ್ಟಂಬರ್ ಮಾಹೆಯಲ್ಲಿ ಹಲಗೆಗಳ ಅಳವಡಿಕೆಯಿಂದಾಗಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದ್ದು, ಜೊತೆಗೆ ಅಂತರ್ಜಲ ಮಟ್ಟವು ಹೆಚ್ಚಿದೆ. ಈಗ ಮಳೆ ಆರಂಭವಾದ ಹಿನ್ನೆಲೆ ಅವುಗಳಿಗೆ ಅಳವಡಿಸಿರುವ ಹಲಗೆಗಳನ್ನು ತೆಗೆಯಬೇಕು. ಮಳೆ ನೋಡಿಕೊಂಡು ಈ ವರ್ಷ ಸೆಪ್ಟಂಬರ್ನಲ್ಲಿ ಹಲಗೆಗಳನ್ನು ಅಳವಡಿಸಬೇಕು ಎಂದರು.
ಜಿಲ್ಲೆಗೆ ಹೊಸದಾಗಿ ಪ್ರಸಕ್ತ ಸಾಲಿನಿಂದ ಮೂರಕ್ಕೂ ಹೆಚ್ಚು ಹೊಸ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ಅಗತ್ಯವಿರುವ ಕಟ್ಟಡಗಳನ್ನು ಗುರುತಿಸಿ, ಪ್ರಸಕ್ತ ಸಾಲಿನ ಆರಂಭದಿಂದಲೇ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆಗಿಂದಾಗ್ಗೆ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕೆಂದು ಸೂಚನೆ ನೀಡಿದರು. ಶಾಲಾ-ಕಾಲೇಜುಗಳು, ಅಂಗನವಾಡಿ ಕೇಂದ್ರಗಳ ದುರಸ್ತಿ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಸಿ.ಇ.ಒ ಪ್ರತಿಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಡಿಎಫ್ಓ ಗಣಪತಿ ಹಾಗೂ ಶಿವರಾಂ ಬಾಬು ಮತ್ತಿತರರು ಉಪಸ್ಥಿತರಿದ್ದರು.