ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಕೆ.ಪಿ.ಚಂದ್ರಕಲಾ ಉದ್ಘಾಟಿಸಿದರು. ಡಾ.ಎಚ್.ಎಂ.ರಘು ಕೋಟಿ, ಅನಂತ ತೀರ್ಥ, ರಾಣಿ ರವೀಂದ್ರ ಇತರರು ಇದ್ದರು. 
ಜಿಲ್ಲೆ

ಕುಶಾಲನಗರದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ

 ಕುಶಾಲನಗರ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಕುಶಾಲನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿತ್ತು.

ಜಿಪಂ ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮ ಎಲ್ಲ ಕವಿಗಳಿಗೆ ಸ್ಫೂರ್ತಿದಾಯಕ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ದಿನನಿತ್ಯ ಹಲವರು ಪ್ರತಿಭೆಗಳು ಹೊರ ಹೊಮ್ಮುತ್ತಿದ್ದಾರೆ. ಈ ಕಲೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಡಾ.ಎಚ್.ಎಂ.ರಘು ಕೋಟಿ ಮಾತನಾಡಿ, ತಮ್ಮ ಪ್ರತಿಭೆ ಹೊರಹೊಮ್ಮಲು ಯಾವುದೇ ಪದವಿಗಳ ಅವಶ್ಯಕತೆ ಇಲ್ಲ. ಅದು ಸುಪ್ತ ಮನಸಿನಿಂದ ಹೊರ ಹೊಮ್ಮಿ ಜಗತ್ತಿಗೆ ಅನಾವರಣಗೊಳ್ಳುತ್ತದೆ. ತಮಗೊಲಿದ ಕಲೆಯನ್ನು ನಿಷ್ಠೆಯಿಂದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ಭಾರದ್ವಾಜ್.ಕೆ.ಅನಂತ ತೀರ್ಥ ಮಾತನಾಡಿ, ಕಾವ್ಯ, ಕವಿತೆಯಲ್ಲಿ ಆಸಕ್ತಿ ಇರುವವರು ಪ್ರಾಸ ಬದ್ಧವಾಗಿ ಕಲಿಕಾ ಮಾರ್ಗವನ್ನು ಅನುಸರಿಸಬೇಕು ಎಂದು ನೆರೆದಿದ್ದ ಕವಿಗಳಿಗೆ ಮತ್ತು ಸಾಹಿತ್ಯ ಪ್ರಿಯರಿಗೆ ಕಿವಿ ಮಾತನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಉಪಾಧ್ಯಕ್ಷೆ ರಾಣಿ ರವೀಂದ್ರ, ಸಂಚಾಲಕರಾದ ಮಹೇಂದ್ರ ಉಪಸ್ಥಿತರಿದ್ದರು. ಕವಿಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ಕವಿಗಳು ಪಾಲ್ಗೊಂಡಿದ್ದರು.