ಜಿಲ್ಲೆ

ಮಹರ್ಷಿ ವಾಲ್ಮೀಕಿಯ ಜೀವನವೇ ಪ್ರೇರಣಾದಾಯಕ

ಶಾಸಕ ಯಶ್​ಪಾಲ್​ ಸುವರ್ಣ ಅಭಿಪ್ರಾಯ

ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಗವಾನ್​ ಶ್ರೀರಾಮಚಂದ್ರನು ಧರ್ಮದ ಪ್ರತಿರೂಪ. ರಾಮಾಯಣವು ಶ್ರೀರಾಮನ ಆದರ್ಶಗಳನ್ನು ಸಾರುವ ಗ್ರಂಥವಾಗಿದ್ದು, ಜಗತ್ತಿನ ಮನ ಗೆದ್ದ ಮಹಾ ಕಾವ್ಯವಾಗಿದೆ. ಅಂತಹ ವಿಶ್ವ ಶ್ರೇಷ್ಠ ಕಾವ್ಯ ರಚಿಸಿರುವ ವಾಲ್ಮೀಕಿ ಮಹರ್ಷಿಗಳ ಜೀವನವೇ ಪ್ರೇರಣಾದಾಯಕವಾಗಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಅಭಿಪ್ರಾಯಪಟ್ಟರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್​ ಹಾಲ್​ನಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆಯ ಆಶ್ರಯದಲ್ಲಿ ಮಂಗಳವಾರ (ಅ.7) ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಮಾಯಣದ ಸಂದೇಶ ಸಾರ್ವಕಾಲಿಕ

ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಮಾತನಾಡಿ, ರಾಮಾಯಣ ಮತ್ತು ಮಹಾಭಾರತವು ಭಾರತದ ಸರ್ವಶ್ರೇಷ್ಠ ಗ್ರಂಥ. ಈ ಮಹಾಕಾವ್ಯಗಳು ಜಗತ್ತಿನ ಎಲ್ಲ ಕಾವ್ಯಗಳಿಗೂ ಮೂಲವಾಗಿದೆ. ಮಹಾಭಾರತವು ಅಣ್ಣ-ತಮ್ಮಂದಿರ ಮಧ್ಯದ ವೈಮನಸ್ಸು ಬಿಂಬಿಸಿದರೆ, ರಾಮಾಯಣವು ತ್ಯಾಗವೇ ಜೀವನ ಎನ್ನುವ ಮಹತ್ವದ ಸಂದೇಶ ಸಾರುತ್ತದೆ. ಇಂತಹ ಮಹಾನ್​ ಗ್ರಂಥಗಳು ಜಗತ್ತಿನ ಎಲ್ಲ ಕುಟುಂಬಳಿಗೂ ಆದರ್ಶಪ್ರಾಯವಾಗಿದೆ. ರಾಮಾಯಣದ ಸಂದೇಶ ಸಾರ್ವಕಾಲಿಕವಾಗಿದೆ ಎಂದರು.

ಕಾರ್ಕಳದ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ ನಾಯ್ಕ ಮಹರ್ಷಿ ವಾಲ್ಮೀಕಿ ಜೀವನ ವೃತ್ತಾಂತ ಕುರಿತು ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಎಸ್​ಎಸ್​ಎಲ್​ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಇಲಾಖಾ ಅಧಿಕಾರಿಗಳು, ಪರಿಶಿಷ್ಟ ವರ್ಗಗಳ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು. ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣಸ್ವಾಮಿ ಎಂ. ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಯುವಜನತೆ ಅಡ್ಡದಾರಿ ಹಿಡಿಯದಿರಲಿ

ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಪೂರ್ವಾಶ್ರಮದಲ್ಲಿರುವಾಗ ಅಸಾಮಾಜಿಕ ಕಾರ್ಯ ನಡೆಸುತ್ತಿದ್ದರು. ಮನಃಪರಿವರ್ತನೆಯಿಂದ ಅವುಗಳನ್ನು ತ್ಯಜಿಸಿ, ಜ್ಞಾನಿಗಳಾಗಿ ಬದುಕಿ ಸಮಾಜಕ್ಕೆ ರಾಮಾಯಣದಂತಹ ಮಹತ್​ ಗ್ರಂಥ ನೀಡಿದರು. ಅದೇ ರೀತಿಯಲ್ಲಿ ಯುವಸಮುದಾಯವೂ ಸಹ ಅಡ್ಡದಾರಿ ಹಿಡಿಯದೆ ಸಾಂವಿಧಾನಿಕ ಚೌಕಟ್ಟಿನಲ್ಲಿ ಬದುಕಿ ಸಮಾಜಕ್ಕೆ ತಮ್ಮಿಂದಾಗುವ ಕೊಡುಗೆ ನೀಡಬೇಕು. ಪರಿವರ್ತನೆಯಿಂದ ಉನ್ನತಿಯತ್ತ ಸಾಗಿದ ವಾಲ್ಮೀಕಿ ಮಹರ್ಷಿಗಳು ಸದಾ ಮಾದರಿ, ಪ್ರೇರಣೆ ಎಂದರು.
ರಾಮಾಯಣ ರಚಿಸಿದ ವಾಲ್ಮೀಕಿಯ ಆಚಾರ-ವಿಚಾರಗಳನ್ನು ಇಂದಿನ ಯುವಜನತೆಗೆ ತಿಳಿಸಿಕೊಡುವ ಅಗತ್ಯತೆಯಿದೆ. ಅವರ ಹೆಸರಿನಲ್ಲಿ ಜಾರಿಯಾಗಿರುವ ಸರ್ಕಾರಿ ಯೋಜನೆಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸಿ ಸಮಾಜದ ಉನ್ನತಿಯಾದಾಗ ವಾಲ್ಮೀಕಿ ಜಯಂತಿ ಆಚರಣೆಯೂ ಅರ್ಥಪೂರ್ಣವಾಗುತ್ತದೆ. | ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ